ಜೋಧ್‍ಪುರ್: ಮಾಸ್ಕ್ ಧರಿಸದ ವ್ಯಕ್ತಿಯ ಕುತ್ತಿಗೆ ಮೇಲೆ ಮೊಣಕಾಲೂರಿದ ಪೊಲೀಸ್ ಕಾನ್‍ಸ್ಟೇಬಲ್

Update: 2020-06-05 12:07 GMT

ಜೈಪುರ್: ಅಮೆರಿಕಾದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಜಾರ್ಜ್ ಫ್ಲಾಯ್ಡ್  ಪ್ರಕರಣವನ್ನು ನೆನಪಿಸುವ ಒಂದು ಘಟನೆಯ ವೀಡಿಯೋ ಇದೀಗ ವೈರಲ್ ಆಗಿದೆ. ವ್ಯಕ್ತಿಯೊಬ್ಬ ರಸ್ತೆಗಿಳಿಯುವಾಗ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ರಾಜಸ್ಥಾನದ ಜೋಧ್‍ಪುರ್ ದಲ್ಲಿ ಪೊಲೀಸ್ ಪೇದೆಯೊಬ್ಬ ವ್ಯಕ್ತಿಯೊಬ್ಬನ ಕುತ್ತಿಗೆ ಮೇಲೆ ತನ್ನ ಮೊಣಕಾಲೂರಿರುವುದು ಈ ವೀಡಿಯೋದಲ್ಲಿ ಕಾಣಿಸುತ್ತದೆ. ಆದರೆ ಆ ವ್ಯಕ್ತಿಯ ದಾಳಿಯನ್ನು ತಪ್ಪಿಸುವ ಉದ್ದೇಶದಿಂದ ಪೇದೆ ಆತ್ಮರಕ್ಷಣೆಗಾಗಿ ಹೀಗೆ ಮಾಡಿದ್ದಾರೆಂದು ಜೋಧ್‍ಪುರ್ ಡಿಸಿಪಿ (ಪಶ್ಚಿಮ) ಪ್ರೀತಿ ಚಂದ್ರ ಹೇಳಿದ್ದಾರೆ.

ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ಅಲೆದಾಡುತ್ತಿದ್ದ ಮುಕೇಶ್ ಕುಮಾರ್ ಪ್ರಜಾಪತ್ ಎಂಬಾತನನ್ನು ಇಬ್ಬರು ಪೊಲೀಸ್ ಪೇದೆಗಳು ಗಮನಿಸಿದ್ದರು. ಆತನ ಫೋಟೋ ತೆಗೆದು  ಪೊಲೀಸರು ಆತನನ್ನು ಪ್ರಶ್ನಿಸಬೇಕೆನ್ನುವಷ್ಟರಲ್ಲಿ ಆತ ಪೊಲೀಸರ  ಕೆನ್ನೆಗೆ ಬಾರಿಸಲು ಹಾಗೂ ಅವರಿಗೆ ಹೊಡೆಯಲು ಆರಂಭಿಸಿದ್ದ, ನಿಮ್ಮ ಕಣ್ಣು ಕೀಳುತ್ತೇನೆ ಎಂದು ಬೆದರಿಸಿದ್ದ ಎಂದು ಆರೋಪಿಸಲಾಗಿದೆ.

ಆಗ ಪೊಲೀಸರು ತಮ್ಮ ವಾಹನವನ್ನು ಅಲ್ಲಿಗೆ ಕಳುಹಿಸಿಕೊಡುವಂತೆ ಹೇಳಿದ್ದರು. ಆದರೆ ಜೀಪ್ ಅಲ್ಲಿಗೆ ಆಗಮಿಸುವಷ್ಟರಲ್ಲಿ ಆತ ಪೊಲೀಸರಿಗೆ ಹೊಡೆಯಲಾರಂಭಿಸಿದ್ದರಿಂದ ಒಬ್ಬ ಕಾನ್‍ಸ್ಟೇಬಲ್ ಆತ್ಮರಕ್ಷಣೆಗಾಗಿ  ಆತನ ಕುತ್ತಿಗೆ ಮೇಲೆ ಮೊಣಕಾಲೂರಿ ಆತನನ್ನು ತಡೆದಿದ್ದರು ಎಂದು ಹೇಳಲಾಗಿದೆ.

ಪ್ರಜಾಪತ್ ವಿರುದ್ಧ ಎರಡು ಕೇಸುಗಳಿದ್ದು ಒಂದು ವರ್ಷದ ಹಿಂದೆ ಆತನ ತಂದೆಯೇ ತನ್ನ ಮಗ ತನ್ನ ಕಣ್ಣು ಕೀಳಲೆತ್ನಿಸಿದ್ದ ಎಂದು ದೂರಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News