ಅನುಕೂಲಸ್ಥರು ಬಿಪಿಎಲ್ ಕಾರ್ಡ್ ಹಿಂದಿರುಗಿಸದಿದ್ದರೆ ಕಾನೂನು ಕ್ರಮ: ಆಹಾರ ಸಚಿವ ಗೋಪಾಲಯ್ಯ ಎಚ್ಚರಿಕೆ

Update: 2020-06-05 13:27 GMT

ಬೆಂಗಳೂರು, ಜೂ.5: ಬಿಪಿಎಲ್ ಕಾರ್ಡ್‍ಗಳನ್ನು ಹೊಂದಿರುವ ಅನುಕೂಲಸ್ಥರು ತಮ್ಮ ಕಾರ್ಡ್‍ಗಳನ್ನು ಹಿಂದಿರುಗಿಸಬೇಕು. ಇಲ್ಲದಿದ್ದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಆಹಾರ ಸಚಿವ ಕೆ.ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದ ಮಹಾಲಕ್ಷ್ಮಿ ಲೇಔಟ್‍ನಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ನಿಸರ್ಗ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಮತ್ತು ಕ್ಷೇತ್ರದ ನಾಗರಿಕರಿಗೆ ಉಚಿತ ಗಿಡ ವಿತರಿಸಿ ಮಾತನಾಡಿದ ಅವರು, ಸರಕಾರಿ ನೌಕರರು, ನಿವೃತ್ತ ನೌಕರರು ಹಾಗೂ ಅನುಕೂಲಸ್ಥರು ಕಡ್ಡಾಯವಾಗಿ ಬಿಪಿಎಲ್ ಕಾರ್ಡ್‍ಗಳನ್ನು ಹಿಂದಿರುಗಿಸಬೇಕೆಂದು ತಿಳಿಸಿದ್ದಾರೆ.

ಪಡಿತರ ಕಾರ್ಡ್ ಇಲ್ಲದವರು ಆಧಾರ್ ಕಾರ್ಡ್ ತೋರಿಸಿ ಸಮೀಪದ ನ್ಯಾಯಬೆಲೆ ಅಂಗಡಿಯಲ್ಲಿ 5 ಕೆಜಿ ಅಕ್ಕಿ, 2 ಕೆಜಿ ಕಡಲೆಕಾಳನ್ನು ಉಚಿತವಾಗಿ ಜೂ.10ರವರೆಗೆ ಪಡೆದುಕೊಳ್ಳಬಹುದು. ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಾಗೂ ನ್ಯಾಯಬೆಲೆ ಅಂಗಡಿಯವರು ಪಡಿತರ ಕಾರ್ಡ್ ಇಲ್ಲವೆಂಬ ಕಾರಣದಿಂದ ಪಡಿತರ ನೀಡದೆ ಯಾರನ್ನು ವಾಪಸ್ ಕಳುಹಿಸಬಾರದೆಂದು ಅವರು ತಿಳಿಸಿದ್ದಾರೆ.

ಆರೋಗ್ಯ ರಕ್ಷಣೆಯ ಜೊತೆಗೆ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮನೆಯಿಂದ ಹೊರ ಬರಬೇಕಾದರೆ ಮಾಸ್ಕ್ ಹಾಗೂ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವ ಕಡೆಗೆ ಹೆಚ್ಚಿನ ಗಮನ ಕೊಡಬೇಕೆಂದು ಅವರು ಅವರು ಮನವಿ ಮಾಡಿದ್ದಾರೆ.

ಈ ವೇಳೆ ಉಪಮೇಯರ್ ಹರೀಶ್, ರಾಘವೇಂದ್ರ ಶೆಟ್ಟಿ, ನಿಸರ್ಗ ಜಗದೀಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News