ಕೆಫೆ ಮಾಲಕನ ಅಪಹರಣ, ನಗದು ದೋಚಿದ ಪ್ರಕರಣ: 9 ಆರೋಪಿಗಳ ಬಂಧನ

Update: 2020-06-05 17:01 GMT

ಬೆಂಗಳೂರು, ಜೂ.5: ಕೆಫೆ ಮಾಲಕನನ್ನ ಅಪಹರಿಸಿ ನಗದು, ಕಾರು ಸುಲಿಗೆ ಪ್ರಕರಣ ಸಂಬಂಧ 9 ಜನ ಆರೋಪಿಗಳನ್ನು ಇಲ್ಲಿನ ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಬಂಧಿತರನ್ನು ಶರತ್ ಕುಮಾರ್, ರಾಜ್ ಕಿರಣ್, ಹೇಮಂತ್, ವಾಸೀಂ, ಲೋಕೇಶ್, ಅರುಣ್ ಕುಮಾರ್, ಥಾಮಸ್, ಡ್ಯಾನಿಯಲ್ ಎಂದು ಪೊಲೀಸರು ಗುರುತಿಸಿದ್ದಾರೆ.

ಮೇ 13 ರಂದು ನ್ಯೂ ಬಿಇಎಲ್ ರಸ್ತೆಯಲ್ಲಿ ಕೆಫೆ ಮಾಲಕ ಅಭಿನವ್ ಸಿಂಘಾಲ್ ಅವರನ್ನು ಆರೋಪಿಗಳು ಅಪಹರಿಸಿದ್ದರು. ಬಳಿಕ ಅವರನ್ನು ಬನ್ನೇರುಘಟ್ಟ ರಸ್ತೆಯ ಗೋದಾಮಿನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರು. ಬಳಿಕ ಕಾರು, ಚಿನ್ನಾಭರಣ, 26 ಲಕ್ಷ ಹಣವನ್ನು ಕಸಿದುಕೊಂಡು ಬೆದರಿಕೆವೊಡ್ಡಿ ಕಳುಹಿಸಿದ್ದರು. ಮೊದಲು ಈ ಘಟನೆ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ಬಳಿಕ ಈ ಪ್ರಕರಣವನ್ನು ಸದಾಶಿವನಗರ ಠಾಣೆಯಿಂದ ಹೈಗ್ರೌಂಡ್ಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಪೊಲೀಸರು ಆರೋಪಿಗಳನ್ನು ಕರೆತಂದು ಬಿಟ್ಟು ಕಳುಹಿಸಿದ್ದಾರೆ ಎಂದು ಅಭಿನವ್ ಸಿಂಘಾಲ್ ಆರೋಪಿಸಿ ಸದಾಶಿವನಗರ ಪೊಲೀಸರ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು.

ಸದಾಶಿವನಗರ ಪೊಲೀಸ್ ಸಿಬ್ಬಂದಿ ವಿರುದ್ಧ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಠೋರ್ ಹೈಗ್ರೌಂಡ್ಸ್ ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಿ ವರದಿ ನೀಡುವಂತೆ ಆದೇಶ ನೀಡಿದ್ದರು. ಇದೀಗ ಪ್ರಕರಣ ಸಂಬಂಧ ಹೈಗ್ರೌಂಡ್ಸ್ ಪೊಲೀಸರು 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News