ಮಾಲಿನ್ಯ ನಿಯಂತ್ರಣ ಮಂಡಳಿ ಡಿಜಿಟಲ್ ಅಭಿಯಾನಕ್ಕೆ ಸಿಎಂ ಮೆಚ್ಚುಗೆ

Update: 2020-06-05 17:07 GMT

ಬೆಂಗಳೂರು, ಜೂ. 5: ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಪರಿಸರ ಮಾಲಿನ್ಯ ತಡೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹಮ್ಮಿಕೊಂಡಿರುವ ಡಿಜಿಟಲ್ ಅಭಿಯಾನ 25 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವ ವೈವಿಧ್ಯ ಇದ್ದಾಗ ಮಾತ್ರ ಪರಿಸರ ಸಮತೋಲನ ಸಾಧ್ಯ. ಹೀಗಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ಬಾರಿಯ ಪರಿಸರ ದಿನಾಚರಣೆ ವಿಷಯವೇ 'ಜೀವ ವೈವಿಧ್ಯ' ಎಂದು ಹೇಳಿದರು.

ಮಾರಕ ಕೊರೋನ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಹೇರಿದ್ದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಸಮಾಧಾನಕರ ಎಂದ ಅವರು, ಪರಿಸರ ಸಂರಕ್ಷಣೆಗೆ ನಮ್ಮ ಸರಕಾರ ಆದ್ಯತೆ ನೀಡಿದ್ದು, ಆ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಇದೇ ವೇಳೆ ಪರಿಸರ ಗೀತೆ, ಯೂಟ್ಯೂಬ್ ಚಾನಲ್ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬಳಕೆದಾರ ಸ್ನೇಹಿ ವೆಬ್‍ಸೈಟ್‍ಗೆ ಚಾಲನೆ ನೀಡಲಾಯಿತು. ಅರಣ್ಯ ಸಚಿವ ಆನಂದ್ ಸಿಂಗ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಅರಣ್ಯ ಇಲಾಖೆ ಕಾರ್ಯದರ್ಶಿ ಸಂದೀಪ್ ದವೆ, ಮಂಡಳಿಯ ಅಧ್ಯಕ್ಷ ವಿಜಯ್ ಕುಮಾರ್ ಗೋಗಿ ಹಾಜರಿದ್ದರು.

ಪರಿಸರವನ್ನು ನಾವು ರಕ್ಷಿಸಿದಾಗ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪರಿಸರದೊಂದಿಗೆ ಸಮತೋಲನ, ಸಾಮರಸ್ಯ ಕಾಯ್ದುಕೊಳ್ಳುವುದು ಅತಿಮುಖ್ಯ. ಇದು ನಮ್ಮ ಕರ್ತವ್ಯ ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಯವರಿಗೆ ನಾವು ನೀಡಲೇಬೇಕಾದ ಬಳುವಳಿ. ಪರಿಸರವನ್ನು ಉಳಿಸೋಣ, ಹಸಿರನ್ನು ಬೆಳೆಸೋಣ

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News