ಮಳೆಗಾಲದ ಹೊಸ್ತಿಲಲ್ಲಿ ಬಿಬಿಎಂಪಿಯ ನಿರುತ್ಸಾಹ: ಪರಿಹಾರ ಘೋಷಣೆಯಲ್ಲಿ ಫಸ್ಟ್; ವಿಪತ್ತು ನಿರ್ವಹಣೆಯಲ್ಲಿ ಲಾಸ್ಟ್

Update: 2020-06-05 17:23 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.5: ಮಳೆ ಅನಾಹುತದಿಂದ ಜನರು ಮೃತಪಟ್ಟರೆ ಸ್ಥಳದಲ್ಲಿಯೇ ಪರಿಹಾರ ಘೋಷಿಸುವ ಬಿಬಿಎಂಪಿಯು ವಿಪತ್ತು ನಿರ್ವಹಿಸುವಲ್ಲಿ ಮಾತ್ರ ಹಿಂದುಳಿದಿದೆ. 198 ವಾರ್ಡ್‍ಗಳಲ್ಲಿ 209 ಹಾಟ್ ಸ್ಪಾಟ್‍ಗಳನ್ನು ಗುರುತಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮೀನಾ ಮೇಷ ಎಣಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ!

ಕೊರೋನ ಭೀತಿ ನಡುವೆಯೇ ಜನರು ಜೀವನ ನಡೆಸುತ್ತಿದ್ದು, ಮಳೆ ಬಂದರೆ ಯಾವ ರಸ್ತೆಯಲ್ಲಿ ನೀರು ತುಂಬಿದೆ, ಯಾವ ಮರದಿಂದ ಕೊಂಬೆಗಳು ಬೀಳುತ್ತವೆ ಎಂಬ ಆತಂಕದಲ್ಲಿಯೇ ಸಂಚರಿಸಬೇಕಾದ ದುಸ್ಥಿತಿ ಎದುರಾಗಿದೆ. ಇತ್ತೀಚಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರಿನ ರಸ್ತೆ ಬದಿಯಲ್ಲಿ ಬೀಳುವ ಸ್ಥಿತಿಯಲ್ಲಿರುವ ಕೊಂಬೆಗಳನ್ನು ಕಟ್ ಮಾಡಲು ಸೂಚಿಸಿದ್ದರೂ, ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸಿಲಿಕಾನ್ ಸಿಟಿ ಬೆಳೆದಂತೆ ಹಾಟ್ ಸ್ಪಾಟ್‍ಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಒಟ್ಟಾರೆ 209 ಹಾಟ್ ಸ್ಪಾಟ್‍ಗಳಿವೆ ಎಂದು ನೀರುಗಾಲುವೆ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಅವರು ಬಿಬಿಎಂಪಿ ಆಯುಕ್ತರಿಗೆ ವರದಿ ನೀಡಿದ್ದಾರೆ. ಇದೀಗ ಮುಂಗಾರು ಆರಂಭವಾಗಲಿದ್ದು, ವಿಪತ್ತು ನಿರ್ವಹಣೆಗೆ ಪರಿಣಾಮಕಾರಿಯಾಗಿ ಕ್ರಮ ಕೈಕೊಳ್ಳದಿರುವುದು ಕಂಡು ಬಂದಿದೆ.

ಮಳೆಗಾಲದಲ್ಲಿ ಎದುರಾಗಬಹುದಾದ ವಿಪತ್ತನ್ನು ಕಳೆದ ವಾರ ನಗರದಲ್ಲಿ ಸುರಿದ ಮಳೆ ಪರಿಚಯಿಸಿಕೊಟ್ಟಿದ್ದರೂ ಬಿಬಿಎಂಪಿ ಮಾತ್ರ ಮಳೆಯ ಬಗ್ಗೆ ಹಾಗೂ ಅದರಿಂದ ಆಗಬಹುದಾದ ಅನಾಹುತದ ಬಗ್ಗೆ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಮಳೆ ನೀರುಗಾಲುವೆ ವಿಭಾಗದಿಂದ ಅಪಾಯಗ್ರಸ್ಥ ಸ್ಥಳಗಳ ಬಗ್ಗೆ ಆಯುಕ್ತರಿಗೆ ವರದಿ ನೀಡಿದ್ದರೂ, ಆಯುಕ್ತರು ಸ್ಥಳ ಪರಿಶೀಲನೆಗೆ ಮುಂದಾಗದೇ ಅನುಮೋದಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಪಾಯಕರ ಸ್ಥಳಗಳಲ್ಲಿ ಕೆಲ ಸ್ಥಳಗಳಲ್ಲಿ ಹೆಚ್ಚು ಸಾವು-ನೋವು ಸಂಭವಿಸಲಿವೆ ಎಂದು ಸರ್ವೇ ತಿಳಿಸಿದೆ. ಅದರಲ್ಲಿ ಅತೀ ಹೆಚ್ಚು- ಗಂಭೀರ ಅಪಾಯಕರ ಸ್ಥಳಗಳೆಂದು 58 ಸ್ಥಳಗಳನ್ನು ಗುರುತಿಸಿದ್ದಾರೆ. ಹಾಗೆಯೇ ಸಾಮಾನ್ಯ ಅಪಾಯಕರ ಸ್ಥಳಗಳ ಸಂಖ್ಯೆ 151ರಷ್ಟಿದೆ ಎಂದು ವರದಿ ನೀಡಿದ್ದಾರೆ. ಯಾವ್ಯಾವ ವಲಯದಲ್ಲಿ ಎಷ್ಟೆಷ್ಟು ದುರಂತಕ್ಕೆ ಕಾರಣವಾಗುವ ಸ್ಥಳಗಳಿವೆ ಎನ್ನುವುದನ್ನು ಪತ್ತೆ ಮಾಡಿರುವ ಮಳೆನೀರು ಕಾಲುವೆ ವಿಭಾಗ ಅದು ಯಾವ ಮಾನದಂಡಗಳನ್ನಿಟ್ಟುಕೊಂಡು ಈ ಅಪಾಯಗ್ರಸ್ಥ ಸ್ಥಳಗಳನ್ನು ಪತ್ತೆ ಮಾಡಿದ್ದಾರೆ ಎಂಬುದನ್ನು ವಿವರಿಸಿಲ್ಲ. ಆದರೆ ಇದೊಂದು ವಾಸ್ತವವಲ್ಲದ ಪಟ್ಟಿ ಎಂಬುದು ಕೆಲ ತಜ್ಞರು ಆರೋಪಿಸಿದ್ದಾರೆ.

ರಾಜಕಾಲುವೆಗಿಲ್ಲ ಶೇ. 40 ರಷ್ಟು ತಡೆಗೋಡೆ

ಇಷ್ಟೊಂದು ಅಪಾಯಕಾರಿ ಸನ್ನಿವೇಶದ ಚಿತ್ರಣವನ್ನು ಬಿಬಿಎಂಪಿಗೆ ಸಲ್ಲಿಸಿದರೂ ಈವರೆಗೆ ರಾಜಕಾಲುವೆಗಳಲ್ಲಿನ ಹೂಳು ಹಾಗೇ ಉಳಿದಿದೆ. ಇದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಳ್ಳಲಿದೆ. ನೂರಾರು ಕೋಟಿ ರೂ. ಅನುದಾನ ನೀಡಿದರೂ, ಇನ್ನೂ ಶೇ. 40 ರಷ್ಟು ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಬಾಕಿ ಉಳಿದಿದೆ. ಹೂಳು ಏಕೆ ಎತ್ತಲಿಲ್ಲ ಎಂದು ಪ್ರಶ್ನಿಸಿದರೆ ಕೊರೋನ ಹಿನ್ನೆಲೆ ಲಾಕ್‍ಡೌನ್ ಎಂಬ ನೆಪ ಅಧಿಕಾರಿಗಳು ಹೇಳುತ್ತಾರೆ ಎಂಬುವುದು ಸಾರ್ವಜನಿಕರ ದೂರು.

ವಲಯಗಳು- ಅತೀ ಅಪಾಯಗ್ರಸ್ಥ ಸ್ಥಳ- ಸಾಮಾನ್ಯ ಅಪಾಯಗ್ರಸ್ಥ ಸ್ಥಳ- ಒಟ್ಟು

ಪೂರ್ವ ವಲಯ- 05- 15- 20

ಪಶ್ಚಿಮ ವಲಯ- 05- 33- 38

ದಕ್ಷಿಣ ವಲಯ- 03- 07- 10

ಕೋರಮಂಗಲ ಕಣಿವೆ- 10- 19- 29

ಯಲಹಂಕ- 04- 07- 11

ಮಹಾದೇವಪುರ- 11- 21- 32

ಬೊಮ್ಮನಹಳ್ಳಿ- 12- 07- 19

ಆರ್ ಆರ್ ನಗರ- 08- 29- 37

ದಾಸರಹಳ್ಳಿ- 00- 13- 13

ಒಟ್ಟು- 58- 151- 209

ನಗರದಲ್ಲಿ 209 ಹಾಟ್ ಸ್ಪಾಟ್‍ಗಳನ್ನು ಗುರುತಿಸಲಾಗಿದ್ದು, ಎಲ್ಲ ವಲಯಗಳ ಅಧಿಕಾರಿಗಳಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ನಾನು ಮೂರು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡಿಸಿದ್ದೇನೆ. ಲಾಕ್ ಡೌನ್ ಹಿನ್ನೆಲೆ ರಾಜಕಾಲುವೆಯ ಹೂಳು ಎತ್ತಲಾಗಿರಲಿಲ್ಲ. ಇದೀಗ ಆರಂಭವಾಗಿದೆ. ತಡೆ ಗೋಡೆ ಕಟ್ಟಲು ಇನ್ನಷ್ಟು ಅನುದಾನ ನೀಡುವಂತೆ ಸರಕಾರಕ್ಕೆ ತಿಳಿಸಲಾಗಿದೆ.

-ಬಿ.ಎಚ್.ಅನಿಲ್ ಕುಮಾರ್, ಬಿಬಿಎಂಪಿ ಆಯುಕ್ತ

Writer - -ಯುವರಾಜ್ ಮಾಳಗಿ

contributor

Editor - -ಯುವರಾಜ್ ಮಾಳಗಿ

contributor

Similar News