ಕೊರೋನ ಸೋಂಕು: ಸಕ್ರಿಯ ಪ್ರಕರಣಗಳಲ್ಲಿ ದ್ವಿತೀಯ ಸ್ಥಾನಕ್ಕೆ ಜಿಗಿದ ದಿಲ್ಲಿ

Update: 2020-06-05 17:32 GMT

ಹೊಸದಿಲ್ಲಿ, ಜೂ.5: ಕಳೆದ ಕೆಲವು ದಿನಗಳಿಂದ ದಿನಂಪ್ರತಿ 1,000ಕ್ಕೂ ಹೆಚ್ಚು ಕೊರೋನ ಸೋಂಕು ಪ್ರಕರಣ ದಾಖಲಾಗುವುದರೊಂದಿಗೆ ದಿಲ್ಲಿ ಈಗ ಅತ್ಯಧಿಕ ಕೊರೋನ ಸಕ್ರಿಯ ಪ್ರಕರಣ ದಾಖಲಾಗಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ.

ದಿಲ್ಲಿಯಲ್ಲಿ 14,456 ಸಕ್ರಿಯ ಸೋಂಕು ಪ್ರಕರಣವಿದ್ದರೆ 39,935 ಸಕ್ರಿಯ ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದೆ. ತಮಿಳುನಾಡು (12,135) ಮತ್ತು ಗುಜರಾತ್ (4,779) ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದೆ.

ಗುರುವಾರ ಒಂದೇ ದಿನ ದಿಲ್ಲಿಯಲ್ಲಿ 1,359 ಹೊಸ ಪ್ರಕರಣ ದೃಢಪಡುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 25,004ಕ್ಕೇರಿದೆ. ಅಲ್ಲದೆ ಕಳೆದ 2 ದಿನದಲ್ಲಿ ದಿಲ್ಲಿಯಲ್ಲಿ ಕೊರೋನ ಸೋಂಕಿಗೆ ಸಂಬಂಧಿಸಿದ 2 ಸಾವು ಸಂಭವಿಸಿದ್ದು ಸೋಂಕಿಗೆ ಬಲಿಯಾದವರ ಸಂಖ್ಯೆ 650ಕ್ಕೇರಿದೆ. ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳಲ್ಲಿ 23%(3,307) ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಹುತೇಕ ಸೋಂಕಿತರು ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದಾರೆ . ಇನ್ನೂ ಕೆಲವರನ್ನು ಕೋವಿಡ್ ಆರೋಗ್ಯ ಕೇಂದ್ರ ಮತ್ತು ಕೋವಿಡ್ ಆರೈಕೆ ಕೇಂದ್ರದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದವರು ಹೇಳಿದ್ದಾರೆ.

ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ 50ಕ್ಕೂ ಅಧಿಕ ಹಾಸಿಗೆಯ ವ್ಯವಸ್ಥೆ ಹೊಂದಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳೂ ತಮ್ಮಲ್ಲಿರುವ 20% ಹಾಸಿಗೆಗಳನ್ನು ಕೊರೋನ ಸೋಂಕಿತರ ಚಿಕಿತ್ಸೆಗೆಂದೇ ಮೀಸಲಿರಿಸಬೇಕು. ಕೊರೋನ ಸೋಂಕಿತರು ಹಾಗೂ ಇತರ ರೋಗಿಗಳಿಗೆ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲು ಸಮಸ್ಯೆಯಾದರೆ, ಆಸ್ಪತ್ರೆಗಳನ್ನು ಕೊರೋನ ಸೋಂಕಿತರ ಚಿಕಿತ್ಸೆಗೆ ಮಾತ್ರ ಒದಗಿಸಬೇಕು ಎಂದು ದಿಲ್ಲಿ ಸರಕಾರ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿದೆ.

ಅಲ್ಲದೆ ಸರಕಾರಿ ಅಧೀನದ ಆಸ್ಪತ್ರೆಗಳಾದ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜಿಟಿಬಿ, ಲೋಕನಾಯಕ್, ದೀಪ್‌ಚಂದ್ ಬಂಧು, ಶ್ರೀ ರಾಜಾ ಹರೀಶ್‌ಚಂದ್ರ ಆಸ್ಪತ್ರೆಗಳನ್ನು ಮೂರು ವಾರದೊಳಗೆ ಉನ್ನತೀಕರಿಸಬೇಕು. ಹೆಚ್ಚುವರಿ ವೆಂಟಿಲೇಟರ್ ಬೆಡ್, ಆಮ್ಲಜನಕದ ವ್ಯವಸ್ಥೆಯುಳ್ಳ ಬೆಡ್‌ಗಳು ಮತ್ತಿತರ ಸೌಕರ್ಯಗಳನ್ನು ಒದಗಿಸಬೇಕು ಎಂದು ಸರಕಾರ ಆದೇಶಿಸಿದೆ. ಒಂದು ವೇಳೆ ಆಸ್ಪತ್ರೆಯಲ್ಲಿ ಬೆಡ್‌ನ ಕೊರತೆಯಿದ್ದರೆ ರೋಗಿಯನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸುವುದು ಆಯಾ ಆಸ್ಪತ್ರೆಯವರ ಜವಾಬ್ಧಾರಿಯಾಗಿರುತ್ತದೆ ಎಂದು ಸೂಚಿಸಲಾಗಿದೆ.

ಕೊರೋನ ಸೋಂಕು ಶಂಕಿತರ ಗಂಟಲುದ್ರವದ ಮಾದರಿಯನ್ನು ಪರೀಕ್ಷಿಸುವ ಪ್ರಯೋಗಾಲಯದ ಬಗ್ಗೆ ಗೊಂದಲ ಮುಂದುವರಿದಿದೆ. ಯಾವೆಲ್ಲಾ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ ಎಂಬುದನ್ನು ಸರಕಾರ ಸ್ಪಷ್ಟಪಡಿಸಿಲ್ಲ. ಈ ಬಗ್ಗೆ ವ್ಯಾಪಕ ಗೊಂದಲವಿದೆ. ಕೆಲವು ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಯ ಬಗ್ಗೆ ದೂರು ಕೇಳಿ ಬಂದ ಬಳಿಕ ರೋಗಿಗಳು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುವುದಕ್ಕೆ ನಿರಾಕರಿಸುತ್ತಿದ್ದಾರೆ ಎಂದು ದಿಲ್ಲಿ ಮೆಡಿಕಲ್ ಅಸೋಸಿಯೇಷನ್ ರಚಿಸಿರುವ ಕೋವಿಡ್ ಕ್ರಿಯಾಪಡೆಯ ಸಂಯೋಜಕ ಡಾ ಹರೀಶ್ ಗುಪ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News