ವಿಶ್ವ ಪರಿಸರ ದಿನಾಚರಣೆ: ಕೋಟಿ ವೃಕ್ಷ ಆಂದೋಲನಕ್ಕೆ ಬಿಬಿಎಂಪಿ ಮೇಯರ್ ಚಾಲನೆ

Update: 2020-06-05 17:36 GMT

ಬೆಂಗಳೂರು, ಜೂ.5: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿಬಿಎಂಪಿ ವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೋಟಿ ವೃಕ್ಷ ಆಂದೋಲನ ಕಾರ್ಯಕ್ರಮಕ್ಕೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಸಾಂಕೇತಿಕವಾಗಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಗೌತಮ್ ಕುಮಾರ್, ವಿಶ್ವಪರಿಸರ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾಂಕೇತಿಕವಾಗಿ ಸಸಿ ನೆಡಲಾಗಿದ್ದು, ಪಾಲಿಕೆ ಅರಣ್ಯ ವಿಭಾಗ, ಕೋಟಿ ವೃಕ್ಷ ಸೈನ್ಯ, ಎನ್.ಜಿ.ಓ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಮುಂದಿನ ಮೂರು ವರ್ಷದಲ್ಲಿ 1 ಕೋಟಿ ಸಸಿ ನೆಟ್ಟು ಪೋಷಿಸುವ ಗುರಿ ಹೊಂದಿರುವುದು ಒಳ್ಳೆಯ ಪ್ರಯತ್ನ ಎಂದು ತಿಳಿಸಿದರು.

ಪರಿಸರ ಉಳಿಸಲು ಪಾಲಿಕೆ ವತಿಯಿಂದ ಒಳ್ಳೆಯ ಹೆಜ್ಜೆಯಿಡಲಾಗಿದೆ. ಪರಿಸರ ದಿನಾಚರಣೆ ಅಂಗವಾಗಿ ಪ್ರತಿವರ್ಷವೂ ಗಿಡಗಳನ್ನು ನೆಡಲಾಗುತ್ತದೆ. ಆದರೆ, ಅದನ್ನು ಪೋಷಿಸುವ ಕಾರ್ಯ ಮಾಡುವುದು ಕಡಿಮೆ. ಈ ನಿಟ್ಟಿನಲ್ಲಿ ಪಾಲಿಕೆ ಎನ್.ಜಿ.ಓಗಳ ಸಹಯೋಗದಲ್ಲಿ ಸಸಿಗಳನ್ನು ನೆಟ್ಟು ನಿರ್ವಹಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ಕಳೆದ 4 ತಿಂಗಳ ಹಿಂದೆ ಹಲಸೂರು ಕೆರೆ ಬಳಿ ನೆಟ್ಟಿರುವ ಸಸಿಗಳು ಬೆಳೆದು ಸುಂದರವಾದ ವಾತಾವರಣ ನಿರ್ಮಾಣವಾಗಿದೆ.

ಪಾಲಿಕೆ ಜೊತೆ ನಗರದ ಸಾರ್ವಜನಿಕರು ಪಾಲ್ಗೊಂಡು ಸಸಿಗಳನ್ನು ನೆಡಲು ಮುಂದಾಗಬೇಕು. ಪರಿಸರ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಪರಿಸರದ ಮೇಲೆ ಕಾಳಜ ವಹಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಪರಿಸರ ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಅದು ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರ ಕಾಪಾಡುವ ಬಗ್ಗೆ ಜಾಗೃತಿಯನ್ನ ಜನರಲ್ಲಿ ಮೂಡಿಸಬೇಕಾಗುತ್ತದೆ. ಪರಿಸರ ಮಾಲಿನ್ಯದಿಂದ ಅನೇಕ ನೈಸರ್ಗಿಕ ವಿಕೋಪಗಳು ಉಂಟಾಗುತ್ತಿವೆ. ಅದನ್ನು ತಡೆಯಬೇಕಾದರೆ ನಾವು ಪರಿಸರವನ್ನು ಕಾಪಾಡಬೇಕು. ಪೃಥ್ವಿಯನ್ನು ಉಳಿಸುವುದು ಬಹುದೊಡ್ಡ ಜವಾಬ್ದಾರಿಯಾಗಿದ್ದು, ಎಲ್ಲಾ ಕೈಜೋಡಿಸಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮಾದೇವಿ ನಾಗರಾಜು, ಲಕ್ಷ್ಮಿನಾರಾಯಣ, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News