ಹವ್ಯಾಸಿ ರೇಡಿಯೊ ಮೂಲಕ ಸ್ಪೇಸ್ ಎಕ್ಸ್ ಬಾಹ್ಯಾಕಾಶ ಯಾನಿಗಳನ್ನು ಸಂಪರ್ಕಿಸಿದ ಭಾರತೀಯ ಇಂಜಿನಿಯರ್

Update: 2020-06-06 04:23 GMT
Photo: ANI

ಅಹ್ಮದಾಬಾದ್: ಹವ್ಯಾಸಿ ರೇಡಿಯೊ ಉತ್ಸಾಹಿ ಅಧೀರ್ ಸೈಯ್ಯದ್ ಅವರು ತಮ್ಮ ಹವ್ಯಾಸಿ ರೇಡಿಯೊ (ಹ್ಯಾಮ್ ರೇಡಿಯೊ) ಮೂಲಕ ಸ್ಪೇಸ್ ಎಕ್ಸ್ ಬಾಹ್ಯಾಕಾಶ ಯಾನಿಗಳ ಜತೆ ಸಂಪರ್ಕ ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಜತೆ ಸಂಪರ್ಕ ಸಾಧಿಸುವ ಪ್ರಯತ್ನದಲ್ಲಿ ಅವರು ಸ್ಪೇಸ್ ಎಕ್ಸ್ ಯಾನಿ ಜತೆ ಸಂಪರ್ಕ ಸಾಧಿಸಿ ಅವರಿಂದ ಪ್ರತಿಕ್ರಿಯೆ ಪಡೆದಿದ್ದಾರೆ.

ಕಂಪ್ಯೂಟರ್ ಇಂಜಿನಿಯರ್ ಆಗಿರುವ ಸೈಯ್ಯದ್ ತಮ್ಮ ಸಂಪರ್ಕ ಸಾಧನದ ಮೂಲಕ ಐಎಸ್‍ಎಸ್ ಜತೆ ಸಂವಹನ ಮಾಡುವ ಪ್ರಯತ್ನದಲ್ಲಿ ನಿಲ್ದಾಣದಲ್ಲಿದ್ದ ಡಾಗನ್ ಕ್ಯಾಪ್ಸೂಲ್‍ನಿಂದ ಪ್ರತಿಕ್ರಿಯೆ ಪಡೆದಿದ್ದಾರೆ.

“ಐಎಸ್‍ಎಸ್ ಬಗೆಗೆ ವಿದ್ಯಾರ್ಥಿಯೊಬ್ಬನ ಜತೆ ವಿಡಿಯೊ ಕರೆಯಲ್ಲಿ ಸಂಭಾಷಣೆ ಮಾಡುತ್ತಿದ್ದೆ. ಐಎಸ್‍ಎಸ್ ಜತೆ ಸಂಪರ್ಕ ಸಾಧಿಸಬಹುದೇ ಎಂದು ಆತ ಪ್ರಶ್ನಿಸಿದ. ಕರೆಯಲ್ಲಿದ್ದಾಗಲೇ ನಾನು ಈ ಸಂಪರ್ಕ ಸಾಧಿಸುವ ಪ್ರಯತ್ನ ಮಾಡಿದೆ. ಕಾಕತಾಳೀಯವಾಗಿ ಅವರ ತರಂಗಾಂತರ ಜತೆ ಸಂಪರ್ಕ ಸಾಧ್ಯವಾಯಿತು ಹಾಗೂ ಕ್ಯಾಪ್ಸೂಲ್‍ನಿಂದ ಉತ್ತರ ದೊರಕಿತು. ವಿಡಿಯೊ ಕರೆ ಮಾದರಿಯ ಸಂಪರ್ಕದ ಅನುಭವ ಆಯಿತು” ಎಂದು ಅಧೀರ್ ವಿವರಿಸಿದ್ದಾರೆ. ಈ ಸಂಪರ್ಕ ಸಾಧ್ಯವಾದದ್ದು, “ಅವರು ಸಾಧಿಸಿದ ಇತಿಹಾಸದ ಭಾಗವಾದಂತೆ” ಖುಷಿ ಕೊಟ್ಟಿತು ಎಂದು ಹೇಳಿದ್ದಾರೆ.

ಹ್ಯಾಮ್‍ರೇಡಿಯೊವನ್ನು ಸಾಮಾನ್ಯವಾಗಿ ವಾಣಿಜ್ಯೇತರ ಸಂದೇಶಗಳ ವಿನಿಮಯಕ್ಕೆ, ವೈರ್‍ಲೆಸ್ ಪ್ರಯೋಗಗಳಿಗೆ ಬಳಸಲಾಗುತ್ತದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಖಾಸಗಿ ಸಂಸ್ಥೆಯೊಂದು ನಾಸಾ ಬಾಹ್ಯಾಕಾಶ ಯಾನಿಗಳನ್ನು ಕಕ್ಷೆಗೆ ಕಳುಹಿಸಿದೆ. ಫಾಲ್ಕನ್-9 ರಾಕೆಟ್ ಮೂಲಕ ಕ್ರೂ ಡ್ರಾಗನ್ ಕ್ಯಾಪ್ಸೂಲ್ ಬಾಹ್ಯಾಕಾಶ ನೌಕೆಯನ್ನು ಭೂಕಕ್ಷೆಗೆ ಕಳುಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News