ಮೇನಕಾ ಗಾಂಧಿಯ 'ಪೀಪಲ್ ಫಾರ್ ಅನಿಮಲ್ಸ್' ವೆಬ್‍ಸೈಟ್ ಹ್ಯಾಕ್ !

Update: 2020-06-06 06:16 GMT

ಹೊಸದಿಲ್ಲಿ: ಬಿಜೆಪಿ ಸಂಸದೆ ಮೇನಕಾ ಗಾಂಧಿಯವರ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‍ಎ) ಸ್ವಯಂಸೇವಾ ಸಂಸ್ಥೆಯ ಅಧಿಕೃತ ವೆಬ್‍ಸೈಟನ್ನು “ಕೇರಳ ಸೈಬರ್ ವಾರಿಯರ್ಸ್” ಎಂಬ ಫೇಸ್‍ಬುಕ್ ಗುಂಪು ಹ್ಯಾಕ್ ಮಾಡಿದೆ. “ಕೋಮು ದ್ವೇಷದ ವಿರುದ್ಧದ ಕಾರ್ಯಾಚರಣೆ” ಎಂದು ಇದನ್ನು ಹ್ಯಾಕರ್ ಗುಂಪು ಬಣ್ಣಿಸಿದೆ.

ಇದೀಗ ವೆಬ್‍ಸೈಟ್, ಹ್ಯಾಕರ್ ಗಳ ಸುಧೀರ್ಘ ಸಂದೇಶವನ್ನು ಪ್ರದರ್ಶಿಸುತ್ತಿದ್ದು, ಇದರ ಜತೆಗೆ ಗರ್ಭಿಣಿ ಆನೆ ಮೃತಪಟ್ಟ ಪಾಲಕ್ಕಾಡ್ ಜಿಲ್ಲೆಯ ಅಂಬಲಪ್ಪಾರ ಪ್ರದೇಶದ ಗೂಗಲ್ ನಕ್ಷೆಯನ್ನೂ ತೋರಿಸುತ್ತಿದೆ.

“ಮೇನಕಾ ಗಾಂಧಿ ಗರ್ಭಿಣಿ ಆನೆಯ ಸಾವಿನ ವಿವಾದವನ್ನು ಕೊಳಕು ರಾಜಕೀಯಕ್ಕೆ ಎಳೆದಿದ್ದಾರೆ. ನೀವು ಪರಿಸರವಾದಿ ಹಾಗೂ ಭೂಗೋಳದಲ್ಲಿ **** ಆಗಿದ್ದೀರಿ. ನಿಮ್ಮ ಪುಟ್ಟ ಮೆದುಳಿಗೆ ಗೂಗಲ್ ನಕ್ಷೆ ಪರಿಚಯಿಸುತ್ತಿದ್ದೇವೆ” ಎಂದು ವೆಬ್‍ಸೈಟ್‍ನಲ್ಲಿ ಸಂದೇಶ ಪ್ರದರ್ಶಿತವಾಗುತ್ತಿದೆ.

ಗರ್ಭಿಣಿ ಆನೆಯ ಸಾವಿನ ಹಿನ್ನೆಲೆಯಲ್ಲಿ ರಾಜಕೀಯ ಕೆಸರೆರಚಾಟ ನಡೆಯುತ್ತಿದ್ದು, ಮುಸ್ಲಿಂ ಬಾಹುಳ್ಯದ ಮಲಪ್ಪುರಂ ಜಿಲ್ಲೆಯನ್ನು ಬಿಜೆಪಿ ನಾಯಕಿ, ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮೇನಕಾ ಗಾಂಧಿ “ಭಾರತದ ಅತ್ಯಂತ ಹಿಂಸಾತ್ಮಕ ಜಿಲ್ಲೆ” ಎಂದು ಬಣ್ಣಿಸಿದ್ದರು.

ಈ ಹೃದಯ ವಿದ್ರಾವಕ ಘಟನೆಗೆ ಕೋಮು ಲೇಪನ ನೀಡುತ್ತಿರುವ ಬಗ್ಗೆ ಬಿಜೆಪಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮನುಷ್ಯ- ಪ್ರಾಣಿ ಸಂಘರ್ಷವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಎಂಬ ಟೀಕೆ ಕೇಳಿ ಬಂದಿದೆ.

ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಯ ಗಡಿಯಲ್ಲಿ ಹರಿಯುವ ವೆಲ್ಲಿಯಾರ್ ನದಿಯಲ್ಲಿ ಆನೆಯ ಶವ ಪತ್ತೆಯಾಗಿತ್ತು. ಅರಣ್ಯ ಅಧಿಕಾರಿಗಳ ಹೇಳಿಕೆ ಪ್ರಕಾರ, ಸ್ಫೋಟಕಗಳನ್ನು ತುಂಬಿದ್ದ ಅನಾನಸು ತಿಂದು ಆನೆ ಮೃತಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News