ಕೊರೋನ ಶಂಕಿತರಿಗೆ ಚಿಕಿತ್ಸೆಗೆ ನಿರಾಕರಿಸುತ್ತಿರುವ ಆಸ್ಪತ್ರೆಗಳಿಗೆ ಕೇಜ್ರಿವಾಲ್ ಎಚ್ಚರಿಕೆ

Update: 2020-06-06 14:57 GMT

ಹೊಸದಿಲ್ಲಿ,ಜೂ.6: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ರೋಗಿಗಳಿಗೆ ಆಸ್ಪತ್ರೆ ಹಾಸಿಗೆಗಳ ಕೊರತೆಯಿಲ್ಲ ಎಂದು ಶನಿವಾರ ಭರವಸೆ ನೀಡಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇದೇ ವೇಳೆ ಹಾಸಿಗೆಗಳನ್ನು ‘ಕಾಳಸಂತೆಯಲ್ಲಿ ಮಾರಾಟ ’ಮಾಡುತ್ತಿರುವುದಕ್ಕಾಗಿ ಮತ್ತು ರೋಗಿಗಳಿಗೆ ಲಕ್ಷಾಂತರ ರೂ.ಶುಲ್ಕಗಳನ್ನು ವಿಧಿಸುತ್ತಿರುವುದಕ್ಕಾಗಿ ಖಾಸಗಿ ಆಸ್ಪತ್ರೆಗಳನ್ನು ತರಾಟೆಗೆತ್ತಿಕೊಂಡರು.

ದಿಲ್ಲಿಯ ಆಸ್ಪತ್ರೆಗಳಲ್ಲಿ ತಮ್ಮ ಸಂಬಂಧಿಗಳನ್ನು ತಪಾಸಣೆಗೊಳಪಡಿಸಲು ಅಥವಾ ದಾಖಲಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಮತ್ತು ದೂರುಗಳ ಮಹಾಪೂರದ ನಡುವೆಯೇ ಕೇಜ್ರಿವಾಲ್‌ರ ಈ ಭರವಸೆ ಹೊರಬಿದ್ದಿದೆ. ತನ್ನ ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಹಾಸಿಗೆಗಳ ಲಭ್ಯತೆಯ ಮೇಲೆ ನಿಗಾಯಿರಿಸಲು ಮತ್ತು ರೋಗಿಗಳ ದಾಖಲಿಕೆಗಾಗಿ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ವೃತ್ತಿಪರರನ್ನು ನಿಯೋಜಿಸಲು ನಿರ್ಧರಿಸಿದೆ ಎಂದೂ ಅವರು ತಿಳಿಸಿದರು.

ಕೊರೋನ ವೈರಸ್ ರೋಗಿಗಳಿಗೆ ಪ್ರವೇಶ ಮತ್ತು ದಾಖಲಾತಿಯನ್ನು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆಯನ್ನು ನೀಡಿದ ಕೇಜ್ರಿವಾಲ್,ದಿಲ್ಲಿಯಲ್ಲಿನ ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಒಳ್ಳೆಯ ವೃತ್ತಿಪರತೆಯನ್ನು ಹೊಂದಿವೆ,ಆದರೆ ಕೆಲವು ಆಸ್ಪತ್ರೆಗಳು ಹಾಸಿಗೆಗಳಿಗೆ ದುಡ್ಡಿನ ಬೇಡಿಕೆಯನ್ನು ಮುಂದಿಡುತ್ತಿವೆ ಮತ್ತು ಇದು ಕಾಳಸಂತೆಗೆ ಸಮನಾಗಿದೆ ಎಂದರು.

 ‘ಇಂತಹ ಆಸ್ಪತ್ರೆಗಳ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಮತ್ತು ಅವು ರೋಗಿಗಳನ್ನು ನಿರಾಕರಿಸುವಂತಿಲ್ಲ,ಆಸ್ಪತ್ರೆಗಳ ಮಾಫಿಯಾವನ್ನು ಭೇದಿಸಲು ಕೊಂಚ ಸಮಯಾವಕಾಶ ಅಗತ್ಯವಿದೆ. ಈ ಆಸ್ಪತ್ರೆಗಳು ರಾಜಕೀಯ ಸಂಪರ್ಕಗಳನ್ನು ಹೊಂದಿವೆ,ಆದರೆ ಅವು ತಮ್ಮ ರಾಜಕೀಯ ಧಣಿಗಳು ತಮ್ಮನ್ನು ರಕ್ಷಿಸುತ್ತಾರೆ ಎಂಬ ಭ್ರಮೆಯಲ್ಲಿರಬೇಕಿಲ್ಲ ಎಂದು ಕೇಜ್ರಿವಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News