ಭಾರತದಲ್ಲಿ ವಿನಾಶಕಾರಿ ಹವಾಮಾನ ಬದಲಾವಣೆಯ ಸಾಧ್ಯತೆ: ಅಧ್ಯಯನ ವರದಿ

Update: 2020-06-06 16:07 GMT
photo: PTI

ಹೊಸದಿಲ್ಲಿ, ಜೂ.6: ಮುಂದಿನ 80 ವರ್ಷಗಳಲ್ಲಿ ಭಾರತವು ಮಾರಕ ಬಿಸಿಗಾಳಿ ಮತ್ತು ತೀವ್ರ ಪ್ರವಾಹ ಸಹಿತ ವಿನಾಶಕಾರಿ ಹವಾಮಾನ ಬದಲಾವಣೆಯನ್ನು ಎದುರಿಸಬಹುದು ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಹಸಿರುಮನೆ ಅನಿಲ ಹೊರಸೂಸುವಿಕೆ ಪ್ರಮಾಣ ಹೆಚ್ಚಿರುವುದರಿಂದ 21ನೇ ಶತಮಾನದ ಅಂತ್ಯದ ವೇಳೆಗೆ ಭಾರತದಾದ್ಯಂತ ವಾರ್ಷಿಕ ಸರಾಸರಿ ತಾಪಮಾನ 4.2 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಬಹುದು . ದೇಶದ ಜನಸಂಖ್ಯೆ , ಪರಿಸರ ವ್ಯವಸ್ಥೆ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಅಪಾಯಗಳನ್ನು ತಪ್ಪಿಸಬೇಕಿದ್ದರೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೌದಿ ಅರೇಬಿಯಾದ ಕಿಂಗ್ ಅಬ್ದುಲಝೀಝ್ ವಿವಿಯ ಪ್ರೊಫೆಸರ್ ಮನ್ಸೂರ್ ಅಲ್‌ಮಝ್‌ರೂಯಿ ನೇತೃತ್ವದ ಸಂಶೋಧಕರು ನಡೆಸಿದ ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.

ಭವಿಷ್ಯದ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಭಾರತದ ಜನಸಂಖ್ಯೆಯ ದೊಡ್ಡ ಪ್ರಮಾಣ, ಪರಿಸರ ವ್ಯವಸ್ಥೆ ಮತ್ತು ಅರ್ಥವ್ಯವಸ್ಥೆ ಹೆಚ್ಚಿನ ಅಪಾಯಕ್ಕೆ ಸಿಲುಕಲಿದೆ ಎಂದು ಪ್ರೊಫೆಸರ್ ಮನ್ಸೂರ್ ಸುದ್ಧಿಸಂಸ್ಥೆಗೆ ತಿಳಿಸಿದ್ದಾರೆ.

‘ಅರ್ತ್ ಸಿಸ್ಟಮ್ಸ್ ಆ್ಯಂಡ್ ಎನ್‌ವಯರ್ನ್‌ಮೆಂಟ್’ ಎಂಬ ನಿಯತಕಾಲಿಕೆಯಲ್ಲಿ ಕಳೆದ ತಿಂಗಳು ಈ ಅಧ್ಯಯನ ವರದಿ ಪ್ರಕಟವಾಗಿದೆ. 21ನೇ ಶತಮಾನದ ಅಂತ್ಯದ ವೇಳೆಗೆ ವಾಯುವ್ಯ ಭಾರತವು ಹಿಮ ಮತ್ತು ಹಿಮನದಿ ಕರಗುವಿಕೆಯಿಂದ ಉಂಟಾಗುವ ಪ್ರವಾಹದ ಅಧಿಕ ಅಪಾಯವನ್ನು ಎದುರಿಸುತ್ತಿದೆ.

ಭಾರತದಲ್ಲಿ ಎಲ್ಲಾ ಹೊರಸೂಸುವಿಕೆಯ ಸನ್ನಿವೇಶಗಳಲ್ಲಿ ವಾರ್ಷಿಕ ಮಳೆಯ ಪ್ರಮಾಣ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದ್ದು ಇದರಿಂದ ತೀವ್ರ ಪ್ರವಾಹದ ಪರಿಸ್ಥಿತಿ ಎದುರಾಗಬಹುದು. ಜೊತೆಗೆ ಮಾರಣಾಂತಿಕ ಬಿಸಿಗಾಳಿಯೂ ದೇಶವನ್ನು ಕಾಡಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಸೂಪರ್ ಕಂಪ್ಯೂಟರ್ ಬಳಸಿ ಜಾಗತಿಕ ಹವಾಮಾನ ಮಾದರಿಯನ್ನು ವಿಶ್ಲೇಷಿಸಿರುವ ಸಂಶೋಧಕರ ತಂಡ , ಸಂಕೀರ್ಣ ಕಾರಕೋರಮ್ ಮತ್ತು ಹಿಮಾಲಯ ಪರ್ವತ ಶ್ರೇಣಿಯನ್ನು ಒಳಗೊಂಡಿರುವ ವಾಯುವ್ಯ ಭಾರತ ಪ್ರದೇಶದಲ್ಲಿ ಹೆಚ್ಚಿನ ಹೊರಸೂಸುವಿಕೆಯ ಸನ್ನಿವೇಶದಲ್ಲಿ ತಾಪಮಾನದಲ್ಲಿ ಸಂಭಾವ್ಯ 6 ಡಿಗ್ರಿ ಸೆಲ್ಶಿಯಸ್‌ಗೂ ಅಧಿಕ ಹೆಚ್ಚಳವಾಗಬಹುದು ಎಂದು ತಿಳಿಸಿದೆ. ಉಷ್ಣತೆ ಹೆಚ್ಚುವುದರಿಂದ ಈ ಪ್ರದೇಶದಲ್ಲಿ ಹಿಮ ಪತ್ತು ಹಿಮನದಿ ಕರಗುವ ಪ್ರಮಾಣ ಹಾಗೂ ಪ್ರವಾಹದ ಪ್ರಮಾಣವೂ ಹೆಚ್ಚಲಿದೆ. ಇದು ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಬೆಳೆಗಳು, ಪರಿಸರ ವ್ಯವಸ್ಥೆ ಮತ್ತು ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಅಲ್ಲದೆ, ತಾಪಮಾನದಲ್ಲಿ ಏರಿಕೆಯಿಂದ ದೇಶದೆಲ್ಲೆಡೆ ಮಾರಣಾಂತಿಕ ಬಿಸಿಗಾಳಿಯ ಪುನರಾವರ್ತನೆ ಹೆಚ್ಚುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News