ದೇವಾಲಯಗಳಲ್ಲಿ ರಥೋತ್ಸವ, ಜಾತ್ರೆ, ವಿಶೇಷ ಪೂಜೆಗೆ ಅವಕಾಶವಿಲ್ಲ: ಧಾರ್ಮಿಕ ದತ್ತಿ ಇಲಾಖೆ ಆದೇಶ

Update: 2020-06-06 16:40 GMT
ಬೆಂಗಳೂರಿನ ರಾಜಾಜಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಸ್ಯಾನಿಟೈಸ್ ಮಾಡುತ್ತಿರುವ ದೃಶ್ಯ

ಬೆಂಗಳೂರು, ಜೂ.6: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯದ ಎ, ಬಿ ಮತ್ತು ಸಿ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು, ಜನ ಸಂದಣಿ ಸೇರುವಂತಹ ಉತ್ಸವಗಳಾದ ಬ್ರಹ್ಮ ರಥೋತ್ಸವ, ಜಾತ್ರೆ, ವಿಶೇಷ ಪೂಜೆ ಹಾಗೂ ದೇವಾಲಯದಲ್ಲಿ ನಡೆಯುವ ಸೇವೆಗಳನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ನಿಷೇಧಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.

ದೇವಾಲಯದ ಪ್ರವೇಶದ್ವಾರ ಮತ್ತು ಆವರಣಗಳಲ್ಲಿ ಕಡ್ಡಾಯವಾಗಿ ಸ್ವಚ್ಛತೆ ಕಾಪಾಡುವುದು ಹಾಗೂ ದೇವಾಲಯಕ್ಕೆ ಬರುವ ಭಕ್ತಾಧಿಗಳ ದೇಹದ ಉಷ್ಣತೆಯನ್ನು ಥರ್ಮಾಮೀಟರ್ ನಿಂದ ತಪಾಸಣೆ ಮಾಡುವುದು ಹಾಗೂ ಕೈಗಳಿಗೆ ಸ್ಯಾನಿಟೈಸರ್ ಬಳಸುವುದು.

ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಕಡ್ಡಾಯವಾಗಿ ಸುರಕ್ಷಿತ ಅಂತರ(ಆರು ಅಡಿ) ಕಾಪಾಡುವುದು, ಭಕ್ತಾಧಿಗಳ ಸರದಿ ಸಾಲಿನಲ್ಲಿ ಮಾರ್ಕ್‍ಗಳನ್ನು ಗುರುತಿಸುವುದು, ಆಯಾಯಾ ದೇವಾಲಯಗಳಲ್ಲಿ ಅಗತ್ಯಕ್ಕೆ ತಕ್ಕಂತೆ ತಾತ್ಕಾಲಿಕ ಸರದಿ ಸಾಲುಗಳನ್ನು ನಿರ್ಮಿಸಿಕೊಳ್ಳುವುದು.

ಭಕ್ತಾಧಿಗಳು ಬಾಯಿ ಮತ್ತು ಮೂಗನ್ನು ಮುಚ್ಚುವಂತೆ ಮಾಸ್ಕ್ ಅಥವಾ ಮುಖವಸ್ತ್ರಗಳನ್ನು ಕಡ್ಡಾಯವಾಗಿ ಧರಿಸಿದವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶಿಸುವುದು. ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಪಾದರಕ್ಷೆಗಳನ್ನು ಅವರವರ ವಾಹನಗಳಲ್ಲಿಯೇ ಅಥವಾ ಪ್ರತ್ಯೇಕ ಸ್ಥಳಗಳಲ್ಲಿ ಬಿಡುವುದು, ಪಾದರಕ್ಷೆಗಳನ್ನು ಧರಿಸಿ ದೇವಾಲಯದ ಆವರಣಕ್ಕೆ ಬರುವಂತಿಲ್ಲ.

ದೇವಾಲಯದ ದರ್ಶನಕ್ಕೆ ಮುಂದಿನ ಆದೇಶದವರೆಗೆ 65 ವಯಸ್ಸಿನ ವೃದ್ಧರು, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿ ಸ್ತ್ರೀಯರು ಆದಷ್ಟು ಮನೆಯಲ್ಲಿಯೇ ಇದ್ದು ಸಹಕರಿಸುವುದು ಹಾಗೂ ಅಸ್ವಸ್ಥರು ದೇವಾಲಯದ ಒಳಗೆ ಪ್ರವೇಶಿಸುವುದನ್ನು ನಿಷೇಧಿಸಿದೆ.

ದೇವಾಲಯಕ್ಕೆ ಬರುವ ಭಕ್ತಾಧಿಗಳು ದೇವಾಲಯದ ಗೋಡೆ, ಕಂಬ, ವಿಗ್ರಹ, ರಥ, ಪಲ್ಲಕ್ಕಿ, ಧಾರ್ಮಿಕ ಗ್ರಂಥ, ಪುಸ್ತಕ ಮುಂತಾದವುಗಳನ್ನು ಮುಟ್ಟುವಂತಿಲ್ಲ. ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಹಾಗೂ ದೇವಾಲಯದ ಒಳಾಂಗಣ ಮತ್ತು ಹೊರಾಂಗಣ ಹಾಗೂ ಇತರೆ ಎಲ್ಲ ಸಿಬ್ಬಂದಿಗಳು ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಅನ್ನು ಅವರವರ ಮೊಬೈಲ್‍ಗಳಲ್ಲಿ ಅಳವಡಿಸಿಕೊಳ್ಳುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News