ಸ್ವರ್ಣ ಮಂದಿರದಲ್ಲಿ ‘ಆಪರೇಷನ್ ಬ್ಲೂಸ್ಟಾರ್’ ವಾರ್ಷಿಕೋತ್ಸವದಲ್ಲಿ ಖಲಿಸ್ತಾನ್ ಪರ ಘೋಷಣೆ

Update: 2020-06-06 16:47 GMT
ಫೈಲ್ ಚಿತ್ರ

ಅಮೃತಸರ,ಜೂ.6: ಇಲ್ಲಿಯ ಸ್ವರ್ಣಮಂದಿರ ಸಂಕೀರ್ಣದಲ್ಲಿ ಶನಿವಾರ ‘ಆಪರೇಷನ್ ಬ್ಲೂಸ್ಟಾರ್’ನ 36ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಿಖ್ ಕಟ್ಟರ್‌ವಾದಿಗಳು ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಿದ್ದಾರೆ.

ಶಿರೋಮಣಿ ಅಕಾಲಿದಳ (ಅಮೃತಸರ)ದ ಅಧ್ಯಕ್ಷ ಹಾಗೂ ಮಾಜಿ ಸಂಸದ ಸಿಮ್ರನ್‌ಜಿತ್ ಸಿಂಗ್ ಮಾನ್ ಅವರ ಪುತ್ರ ಇಮಾನ್ ಸಿಂಗ್ ಮಾನ್ ನೇತೃತ್ವದಲ್ಲಿ ಸುಮಾರು 100 ಜನರ ಗುಂಪು ಸಿಕ್ಖರ ಅತ್ಯುನ್ನತ ಪೀಠವಾಗಿರುವ ಅಕಾಲ್ ತಖ್ತ್‌ನಲ್ಲಿ ಈ ಘೋಷಣೆಗಳನ್ನು ಕೂಗಿದೆ.

ಮಾನ್ ನೇತೃತ್ವದ ಗುಂಪಿನೊಂದಿಗೆ ಸಂಕೀರ್ಣದ ಆವರಣವನ್ನು ಪ್ರವೇಶಿಸಿದ್ದ ಅಕಾಲ್ ತಖ್ತ್‌ನ ‘ಸಮಾಂತರ ಜತ್ತೇದಾರ್ ’ ಧ್ಯಾನಸಿಂಗ್ ಮಂಡ್ ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಿಖ್ ಕಟ್ಟರ್‌ವಾದಿ ಸಂಘಟನೆ ದಮ್ದಮಿ ತಕ್ಸಲ್ ಸದಸ್ಯರು ಅಕಾಲ್ ತಖ್ತ್‌ನ ಜತ್ತೇದಾರ್ ಜ್ಞಾನಿ ಹರಪ್ರೀತ್ ಸಿಂಗ್ ಮತ್ತು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಸದಸ್ಯರೊಂದಿಗೆ ಸೇರಿ 1984ರಲ್ಲಿ ಸ್ವರ್ಣಮಂದಿರದಲ್ಲಿ ಬಚ್ಚಿಟ್ಟುಕೊಂಡಿದ್ದ ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಹೊರಗೆಳೆಯಲು ಸೇನೆಯು ನಡೆಸಿದ್ದ ಆಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಮೃತರ ಕುಟುಂಬಗಳನ್ನು ಗೌರವಿಸಿದರು. ಇಂತಹ ಕುಟುಂಬಗಳನ್ನು ಗೌರವಿಸಲು ಮುಖ್ಯ ಕಾರ್ಯಕ್ರಮವನ್ನು ಅಕಾಲ್ ತಖ್ತ್ ಆಯೋಜಿಸಿತ್ತು.

ಸ್ವರ್ಣ ಮಂದಿರದ ಎಲ್ಲ ಪ್ರವೇಶ ದ್ವಾರಗಳಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರತಿವರ್ಷ ಈ ದಿನದಂದು ಒಂದು ಲಕ್ಷಕ್ಕೂ ಅಧಿಕ ಜನರು ಸ್ವರ್ಣಮಂದಿರದಲ್ಲಿ ಸೇರುತ್ತಾರೆ. ಆದರೆ ಈ ವರ್ಷ ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ಉಪಸ್ಥಿತರಿದ್ದವರ ಸಂಖ್ಯೆ ಸಾವಿರಕ್ಕೂ ಕಡಿಮೆಯಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News