ದಿಲ್ಲಿ ಹಿಂಸಾಚಾರದ ತಪ್ಪು ವರದಿ ಆರೋಪ: ಪತ್ರಕರ್ತ ವಿನೋದ್ ದುವಾ ವಿರುದ್ಧ ಎಫ್‌ಐಆರ್

Update: 2020-06-06 17:28 GMT
Photo: PTI

ಹೊಸದಿಲ್ಲಿ, ಜೂ. 6: ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದ ಕೋಮು ಹಿಂಸಾಚಾರದ ಬಗ್ಗೆ ತಪ್ಪಾಗಿ ವರದಿ ಮಾಡಿ, ತಮ್ಮ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಸುಳ್ಳು ಸುದ್ಧಿ ಪ್ರಸಾರ ಮಾಡಿದ ಆರೋಪದಲ್ಲಿ ಪತ್ರಕರ್ತ ವಿನೋದ್ ದುವಾ ವಿರುದ್ಧ ದಿಲ್ಲಿ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿರುವುದಾಗಿ ವರದಿಯಾಗಿದೆ.

ಬಿಜೆಪಿ ವಕ್ತಾರ ನವೀನ್ ಕುಮಾರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಯೂಟ್ಯೂಬ್‌ನಲ್ಲಿ ‘ವಿನೋದ್ ದುವಾ ಶೋ’ ಕಾರ್ಯಕ್ರಮದ ಮೂಲಕ ದುವಾ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ದಿಲ್ಲಿಯ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಏನನ್ನೂ ಮಾಡಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿ ಹಲ್ಲಿಲ್ಲದವರು ಎಂದು ದುವಾ ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಯೂಟ್ಯೂಬ್‌ನ ಕಾರ್ಯಕ್ರಮವೊಂದರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಗೆ ಸೇರ್ಪಡೆಗೊಂಡಿರುವ ಬಗ್ಗೆ ದುವಾರ ಪ್ರತಿಕ್ರಿಯೆ ಕೀಳುಮಟ್ಟದ್ದಾಗಿತ್ತು. ಅಲ್ಲದೆ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ವ್ಯಾಪಂ ಹಗರಣ ನಡೆದಿತ್ತು ಎಂದು ಹೇಳಿದ್ದರು . ಹಲವು ವಿಷಯಗಳ ಬಗ್ಗೆ ದುವಾ ನಿರ್ಲಜ್ಜವಾಗಿ ಸುಳ್ಳು ಹೇಳಿದ್ದಾರೆ ಅಥವಾ ವೀಕ್ಷಕರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಹಿಂದೆಯೂ ಅವರು ಸರಕಾರ, ಪೊಲೀಸರು ಮತ್ತು ರಾಜಕೀಯ ನಾಯಕರ ಬಗ್ಗೆ ವಿಲಕ್ಷಣ ಮತ್ತು ಆಧಾರರಹಿತ ಆರೋಪ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ದುವಾರ ವಿರುದ್ಧ ಐಪಿಸಿ ಸೆಕ್ಷನ್ 290, 505 ಮತ್ತು 505(2)ಗಳಡಿ ದೂರು ದಾಖಲಿಸಲಾಗಿದೆ. ಆದರೆ ದಿಲ್ಲಿ ಪೊಲೀಸರು ದೂರಿನ ಬಗ್ಗೆ ತನಗಿನ್ನೂ ಮಾಹಿತಿ ನೀಡಿಲ್ಲ. ಪೊಲೀಸರು ತನ್ನನ್ನು ಸಂಪರ್ಕಿಸಿದ ಮೇಲೆ ಕಾನೂನು ರೀತಿಯಲ್ಲಿ ಕೈಗೊಳ್ಳಬೇಕಾದ ಕ್ರಮ ಕೈಗೊಳ್ಳುತ್ತೇನೆ ಎಂದು ದುವಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News