ಇನ್ನೂ ನಾಲ್ಕೈದು ತಿಂಗಳು ಶಾಲಾ-ಕಾಲೇಜು ಆರಂಭ ಬೇಡ: ಮಾಜಿ ಸಚಿವ ರಾಮಲಿಂಗಾರೆಡ್ಡಿ

Update: 2020-06-06 17:46 GMT

ಬೆಂಗಳೂರು, ಜೂ. 6: ರಾಜ್ಯದಲ್ಲಿ ಕೊರೋನ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿರುವ ಸಂದರ್ಭದಲ್ಲಿಯೇ ಶಾಲೆಗಳನ್ನು ಆರಂಭಿಸಲು ಮುಂದಾಗಿರುವ ಸರಕಾರದ ಕ್ರಮ ಸರಿಯಲ್ಲ. ಹೀಗಾಗಿ, ಇನ್ನೂ ನಾಲ್ಕೈದು ತಿಂಗಳು ಶಾಲಾ-ಕಾಲೇಜುಗಳನ್ನು ಆರಂಭಿಸುವುದು ಬೇಡ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ತೆರವಿನಿಂದ ಕೊರೋನ ಸೋಂಕು ಹೆಚ್ಚಾಗುತ್ತಿದೆ. ಲಾಕ್‍ಡೌನ್ ಸಡಿಲ ಮಾಡದೆ ಮೇ 31 ರವರೆಗೂ ಕಠಿಣ ಲಾಕ್‍ಡೌನ್ ಜಾರಿ ಮಾಡಬೇಕಿತ್ತು ಎಂದರು. ರಾಜ್ಯದಲ್ಲಿ ಕೊರೋನ ಸೋಂಕು ಹೆಚ್ಚಿದ್ದರೂ ಶಾಲೆಗಳನ್ನು ತೆರೆಯಲು ಮುಂದಾಗಿರುವುದು ಸರಿಯಲ್ಲ ಎಂದರು.

ವಿದೇಶದಲ್ಲಿ ಶಾಲೆ ಆರಂಭಿಸಿದ್ದರಿಂದ ಎಳೆಯ ಮಕ್ಕಳಿಗೂ ಸೋಂಕು ತಗುಲಿದೆ. ಹಾಗಾಗಿ ರಾಜ್ಯದಲ್ಲಿ 4-5 ತಿಂಗಳು ಶಾಲೆಗಳನ್ನು ಪ್ರಾರಂಭ ಮಾಡುವುದು ಬೇಡ. ಕಾಲೇಜುಗಳನ್ನು ಈಗಲೇ ಆರಂಭಿಸುವುದು ಬೇಡ ಎಂದ ಅವರು, ಆನ್‍ಲೈನ್ ಶಿಕ್ಷಣ ಕಲಿಕೆಗೆ ವಿರೋಧ ವ್ಯಕ್ತಪಡಿಸಿ, ಇದು ಎಲ್ಲ ಮಕ್ಕಳಿಗೂ ಅನುಕೂಲವಾಗಲ್ಲ ಎಂದು ನುಡಿದರು.

ಬಡವರು, ನಿರ್ಗತಿಕರ ಮಕ್ಕಳು ಆನ್‍ಲೈನ್ ಶಿಕ್ಷಣ ಮಾಡುವುದರಿಂದ ಶಿಕ್ಷಣದಿಂದಲೇ ವಂಚಿತರಾಗುತ್ತಾರೆ. ಶಾಲೆ ಆರಂಭ, ಆನ್‍ಲೈನ್ ಶಿಕ್ಷಣದ ಸರಕಾರದ ಪ್ರಸ್ತಾಪಗಳ ಬಗ್ಗೆ ರಾಮಲಿಂಗಾ ರೆಡ್ಡಿ ಬೇಸರ ವ್ಯಕ್ತಪಡಿಸಿ, ಸರಕಾರ ನಡೆಸುವವರು ಬಡವರು, ಗ್ರಾಮೀಣ ಜನರ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

ಕೊರೋನ ತಡೆಯಲು ತರಾತುರಿಯಲ್ಲಿ ಲಾಕ್‍ಡೌನ್ ಮಾಡಿದರು. ಇದರಿಂದ ಬಡವರು, ಕಾರ್ಮಿಕರು, ಸಂಕಷ್ಟಕ್ಕೆ ಒಳಗಾದರು. ಇಂತಹ ಸಮಯದಲ್ಲಿ ಪಕ್ಷದ ವತಿಯಿಂದ ಟಾಸ್ಕ್‍ ಫೋರ್ಸ್ ರಚಿಸಿ ಬಡವರಿಗೆ ಸಹಾಯ ಮಾಡಲು ಹೇಳಲಾಯಿತು. ಅದರಂತೆ ಬೆಂಗಳೂರು ಉಸ್ತುವಾರಿ ನನಗೆ ವಹಿಸಿದ್ದು ಬಡವರಿಗೆ, ಕಷ್ಟದಲ್ಲಿ ನಿರ್ಗತಿಕರಿಗೆ ಉಚಿತವಾಗಿ ಆಹಾರ ದಿನಸಿ ಕಿಟ್‍ಗಳು, ಮಾಸ್ಕ್ ಗಳು, ಸ್ಯಾನಿಟೈಸರ್ ವಿತರಿಸಿದೆವು. ಸರಕಾರ ಮಾಡಬೇಕಾದ ಕೆಲಸವನ್ನು ಅದಕ್ಕೂ ಮೊದಲು ಕಾಂಗ್ರೆಸ್ ಪಕ್ಷ ಮಾಡಿತು ಎಂದು ಅವರು ಹೇಳಿದರು.

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸೂಚನೆಯಂತೆ ಇದುವರೆಗೂ ಒಟ್ಟು 10,14,480 ದಿನಸಿ ಕಿಟ್‍ಗಳನ್ನು ವಿತರಣೆ ಮಾಡಿ, 93 ಲಕ್ಷಕ್ಕೂ ಹೆಚ್ಚು ಪ್ಯಾಕೇಟ್ ಆಹಾರವನ್ನು ವಿತರಿಸಿದ್ದೇವೆ. ಹಾಗೆಯೇ ಸುಮಾರು 5 ಲಕ್ಷ 65 ಸಾವಿರ ಮಾಸ್ಕ್, ಸ್ಯಾನಿಟೈಸರ್‍ಗಳನ್ನು ಪಕ್ಷದ ವತಿಯಿಂದ ಹಂಚಿದ್ದೇವೆ. ಸುಮಾರು 11 ಸಾವಿರಕ್ಕೂ ಹೆಚ್ಚು ಅನಾರೋಗ್ಯ ಪೀಡಿತರಿಗೆ ಔಷಧಿಗಳನ್ನು ವಿತರಿಸಿದ್ದೇವೆ. ಹಾಗೆಯೇ ಸುಮಾರು 13 ಲಕ್ಷ ಕುಟುಂಬಗಳಿಗೆ ಉಚಿತ ತರಕಾರಿಯನ್ನು ನೀಡಿರುವುದಾಗಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News