ನಿತೀಶ್ ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಸ್ಪರ್ಧೆ: ಬಿಜೆಪಿ ಪುನರುಚ್ಚಾರ

Update: 2020-06-06 17:51 GMT

ಪಾಟ್ನಾ, ಜೂ.6: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎಯನ್ನು ಮುನ್ನಡೆಸಲು ನಿತೀಶ್ ಹೊರತಾಗಿ ಬೇರೆ ಯಾವುದೇ ನಾಯಕರನ್ನು ಬಿಜೆಪಿ ಆಯ್ಕೆ ಮಾಡಿದಲ್ಲಿ ಬೆಂಬಲಿಸಲು ಸಿದ್ಧ ಎಂಬ ಲೋಕಜನಶಕ್ತಿ ಪಕ್ಷ(ಎಲ್‌ಜೆಪಿ)ದ ಹೇಳಿಕೆಯನ್ನು ತಿರಸ್ಕರಿಸಿರುವ ಬಿಜೆಪಿ, ನಿತೀಶ್ ನೇತೃತ್ವದಲ್ಲೇ ಎನ್‌ಡಿಎ ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದೆ.

ಶುಕ್ರವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿಯ ಬಿಹಾರ ಉಸ್ತುವಾರಿ ಭೂಪೇಂದ್ರ ಯಾದವ್ ಮತ್ತು ಮುಖಂಡ ಬಿಎಲ್ ಸಂತೋಷ್ ಈ ಸ್ಪಷ್ಟ ಸಂದೇಶ ನೀಡಿದ್ದಾರೆ. ಬಿಹಾರದಲ್ಲಿ ಎನ್‌ಡಿಎಯನ್ನು ನಿತೀಶ್ ಮುನ್ನಡೆಸಲಿದ್ದಾರೆ ಎಂದು ಬಿಜೆಪಿ ಮಾಜಿ ಅಧ್ಯಕ್ಷ ಅಮಿತ್ ಶಾ ಈಗಾಗಲೇ ಘೋಷಿಸಿದ್ದಾರೆ. ಈ ಹೇಳಿಕೆಗೆ ಬಿಜೆಪಿ ಬದ್ಧವಾಗಿದೆ ಎಂದು ಯಾದವ್ ಹೇಳಿದ್ದಾರೆ.

  ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎಯ ನೇತೃತ್ವವನ್ನು ಬೇರೆಯವರಿಗೆ ನೀಡಲು ಬಿಜೆಪಿ ಬಯಸಿದ್ದರೆ ಅದಕ್ಕೆ ತಮ್ಮ ಬೆಂಬಲವಿದೆ ಎಂದು ಎಲ್‌ಜೆಪಿ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಬಿಹಾರದಲ್ಲಿ ಕೊರೋನ ಸೋಂಕಿನ ಬಳಿಕದ ಲಾಕ್‌ಡೌನ್ ಸಂದರ್ಭ ವಲಸೆ ಕಾರ್ಮಿಕರ ಸಮಸ್ಯೆಯನ್ನು ನಿತೀಶ್ ಸರಕಾರ ನಿರ್ವಹಿಸಿದ್ದ ಬಗ್ಗೆ ಪಾಸ್ವಾನ್ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News