ಕಾವೇರಿ ವೆಬ್‍ಸೈಟ್ ನೋಂದಣಿ ಪ್ರಕರಣ: ಸಬ್‍ ರಿಜಿಸ್ಟ್ರಾರ್ ಗಳ ವಿರುದ್ಧ ಸಿಸಿಬಿಯಿಂದ ತನಿಖಾ ವರದಿ ಸಲ್ಲಿಕೆ ವಿಳಂಬ

Update: 2020-06-06 18:27 GMT

ಬೆಂಗಳೂರು, ಜೂ.6: ಹಸಿರು ವಲಯದಲ್ಲಿರುವ ಸುಮಾರು 300 ಸ್ವತ್ತುಗಳನ್ನು ಇ-ಸ್ವತ್ತು ತಂತ್ರಾಂಶದಿಂದ ಮಾಹಿತಿ ಪಡೆಯದೆ ಕಾವೇರಿ ವೆಬ್‍ಸೈಟ್ ಮಾರ್ಪಡಿಸಿ ನೋಂದಣಿ ಮಾಡಿದ ಆರೋಪ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಬೆಂಗಳೂರು ಸಿಸಿಬಿ ಪೊಲೀಸರು ಏಳೂವರೆ ತಿಂಗಳಾದರೂ ನ್ಯಾಯಾಲಯಕ್ಕೆ ವರದಿ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ.

ಕರ್ನಾಟಕ ನೋಂದಣಿ ನಿಯಮಗಳಿಗೆ ವಿರುದ್ಧವಾಗಿ ಸ್ವತ್ತುಗಳ ನೋಂದಣಿ ಮಾಡಿಲ್ಲ ಎಂದು ಆರೋಪಿತ ಹತ್ತಕ್ಕೂ ಹೆಚ್ಚು ಸಬ್ ರಿಜಿಸ್ಟ್ರಾರ್ ಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣದ ಸಂಬಂಧ ವರದಿ ಸಲ್ಲಿಸುವ ಮೊದಲು ಹೈಕೋರ್ಟ್ ಮಾಹಿತಿ ಒದಗಿಸಗಬೇಕು. ಈ ಸಂಬಂಧ ಸಬ್ ರಿಜಿಸ್ಟ್ರಾರ್ ಗಳ ವಿರುದ್ಧ ಹೈಕೋರ್ಟ್ ಗಮನಕ್ಕೆ ತಾರದೇ ಅವಸರದ ಕ್ರಮ ಕೈಗೊಳ್ಳುವಂತಿಲ್ಲ ಎಂದು ತಿಳಿಸಿತ್ತು. ಹೀಗಾಗಿ, ತಾಂತ್ರಿಕ ಕಾರಣಗಳಿಂದ ವರದಿ ಸಲ್ಲಿಕೆ ವಿಳಂಬವಾಗಿದೆ ಎನ್ನುತ್ತಾರೆ ಸಿಸಿಬಿ ಅಧಿಕಾರಿಗಳು. ತನಿಖಾಧಿಕಾರಿಗಳು ಸೆಷನ್ಸ್ ಕೋರ್ಟ್‍ಗೆ ತನಿಖಾ ವರದಿ ಸಲ್ಲಿಸಲು ಮೂರು ತಿಂಗಳು ಅವಕಾಶವಿದೆ. ಆದರೆ, ಈಗಾಗಲೇ ಏಳು ತಿಂಗಳು ಕಳೆದಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳ ವಿರುದ್ಧ ವರದಿ ಸಿದ್ಧವಾಗಿದೆ. ಆರೋಪಿಗಳು ಹೈಕೋರ್ಟ್‍ನ ಮೊರೆ ಹೋಗಿರುವ ಕಾರಣ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News