'ಬೆಂಗಳೂರು ಮೇಘ ಸಂದೇಶ' ಮೊಬೈಲ್‍ ಆ್ಯಪ್, ವೆಬ್‍ಸೈಟ್ ಲೋಕಾರ್ಪಣೆ

Update: 2020-06-06 18:30 GMT

ಬೆಂಗಳೂರು, ಜೂ.6: ನಗರದ ನಿಗದಿತ ವಲಯವಾರು ಪ್ರದೇಶಕ್ಕೆ ಅನ್ವಯವಾಗುವ ಮಳೆ ಮುನ್ಸೂಚನೆ, ಪ್ರವಾಹ ಮುನ್ನೆಚ್ಚರಿಕೆಗಳನ್ನು ನೀಡಲು ಬೆಂಗಳೂರು ಮೇಘ ಸಂದೇಶ ಎಂಬ ಮೊಬೈಲ್‍ಆ್ಯಪ್ ಹಾಗೂ ವೆಬ್‍ಸೈಟನ್ನು ಕಂದಾಯ ಸಚಿವ ಆರ್. ಅಶೋಕ್ ಲೋಕಾರ್ಪಣೆ ಮಾಡಿದರು.

ಶನಿವಾರ ಯಲಹಂಕದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ಕಂದಾಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ನಗರ ಪ್ರದೇಶ ಪ್ರವಾಹ ನಿರ್ವಹಣೆ ಸನ್ನದ್ಧತೆ ಕಾರ್ಯಾಗಾರದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಬೆಂಗಳೂರು ಮೇಘ ಸಂದೇಶ ಮೊಬೈಲ್‍ ಆ್ಯಪ್, ವೆಬ್‍ಸೈಟ್ ಲೋಕಾರ್ಪಣೆಗೊಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದಾದ್ಯಂತ ನೈಸರ್ಗಿಕ ವಿಕೋಪಗಳು ಪದೇ ಪದೇ ಸಂಭವಿಸುತ್ತಿದ್ದು, ಈ ನೈಸರ್ಗಿಕ ವಿಕೋಪಗಳಲ್ಲಿ ನಗರ ಪ್ರವಾಹವೂ ಒಂದು. ತೀವ್ರತರ ಭೂ ಬಳಕೆಯಿಂದಾಗಿ ಪ್ರಮುಖ ನಗರ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಪ್ರತಿ ಮಳೆಗಾಲದಲ್ಲೂ ಮರುಕಳಿಸುತ್ತಿರುವುದನ್ನು ಕಾಣಬಹುದಾಗಿದೆ ಎಂದರು.

ಬೆಂಗಳೂರು ನಗರ ಪ್ರದೇಶವೂ ಸಹ ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹಕ್ಕೆ ತುತ್ತಾಗುತ್ತಿದೆ. ನಗರೀಕರಣದ ಭಾಗವಾಗಿ ನಗರ ಪ್ರದೇಶದ ಬಹಳಷ್ಟು ಭೂ ಭಾಗವನ್ನು ಕಾಂಕ್ರೀಟ್ ಆವರಿಸುತ್ತಿರುವುದರಿಂದ ಮಳೆ ನೀರು ಇಂಗಲು ಸ್ಥಳಾವಕಾಶವಿಲ್ಲದೆ ಮೇಲ್ಮೈ ಹರಿವು ಹೆಚ್ಚಾಗುತ್ತಿದೆ. ರಾಜಕಾಲುವೆಗಳ ಹರಿವು ಸಾಮರ್ಥ್ಯದ ಕೊರತೆಯಿಂದಾಗಿ ಅಥವಾ ಮಳೆ ನೀರು ಹರಿಯುವ ಕಾಲುವೆಗಳಲ್ಲಿ ಹೂಳು ತುಂಬಿರುವುದು ಅಥವಾ ಘನತ್ಯಾಜ್ಯ ಶೇಖರಣೆಯಿಂದಾಗಿ ಮಳೆ ನೀರು ಕಾಲುವೆಗಳಿಂದ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಸಾಮಾನ್ಯವಾಗಿದೆ ಎಂದರು.

ಈ ವೇಳೆ ಶಾಸಕರು ಎಸ್.ಆರ್.ವಿಶ್ವನಾಥ್, ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್‍ರಾಜನ್, ಕೆ.ಎಸ್.ಎನ್.ಡಿ.ಎಂ.ಸಿ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ, ಬಿಬಿಎಂಪಿ ವಿಶೇಷ ಆಯುಕ್ತರಾದ ಡಿ.ರಂದೀಪ್, ಅನ್ಬುಕುಮಾರ್, ಡಾ. ರವಿಕುಮಾರ್ ಸುರಪುರ, ಶ್ರೀ ಮಂಜುನಾಥ್ ಉಪಸ್ಥಿತರಿದ್ದರು.

ಬೆಂಗಳೂರು ಮೇಘ ಸಂದೇಶ...

ಈ ಮೇಘ ಸಂದೇಶ ಅಪ್ಲಿಕೇಷನ್‍ನಲ್ಲಿ ಪ್ರಸ್ತುತ ಹವಾಮಾನ, ಮುನ್ಸೂಚನೆ, ನಕ್ಷೆಗಳು, ಮಳೆ, ಗಾಳಿ ವೇಗ ಎಷ್ಟು ಸಿಡಿಲು-ಗುಡುಗು ಸಹಿತ ಮಳೆ, ಹವಾಮಾನ ಮುನ್ಸೂಚನೆ, ಸುರಕ್ಷಿತ ಸಂಚಾರ ಮಾರ್ಗಗಳ ಕುರಿತು ಮಾಹಿತಿ ಸಿಗಲಿದ್ದು, ಸಾರ್ವಜನಿಕರಿಗೆ ಈ ಆ್ಯಪ್ ಹೆಚ್ಚು ಅನುಕೂಲಕಾರಿಯಾಗಿದ್ದು, ಲಿಂಕ್‍ಗೆ ಭೇಟಿ ನೀಡಿ https://play.google.com/store/apps/details?id=com.moserptech.meghasandesha&hl=en ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ವರುಣಮಿತ್ರ ಅಂತರ್ಜಾಲ ತಾಣ

ಮಳೆಗಾಲದ ವೇಳೆ ಪಾಲಿಕೆ ವ್ಯಾಪ್ತಿಯಲ್ಲಿ ಉಂಟಾಗುವ ಪ್ರವಾಹವನ್ನು ತಡೆಯಲು ವಲಯವಾರು ನಕ್ಷೆ, ಮಳೆ ಮುನ್ಸೂಚನೆ, ಪ್ರವಾಹ ಮುನ್ಸೂಚನೆ ಬಗ್ಗೆ ನಿರ್ದಿಷ್ಟ್ಟ ಮಾಹಿತಿಯನ್ನು ಪಡೆಯಬಹುದಾಗಿದೆ. ಅಗತ್ಯ ಮಾಹಿತಿಗಾಗಿ ಅಂತರ್ಜಾಲ ತಾಣ http://varunamitra.karnataka.gov.in ಕ್ಕೆ ಬೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News