ನಡಿಗೆಯಲ್ಲಿ ದಾಖಲೆ ಸೃಷ್ಟಿಸಿದ ಹುಲಿಗೆ ಜೈಲು ಶಿಕ್ಷೆ

Update: 2020-06-07 04:00 GMT

ಭೋಪಾಲ್, ಜೂ.7: ಕ್ಷಿಪ್ರ ಅವಧಿಯಲ್ಲಿ ಅತ್ಯಧಿಕ ದೂರವನ್ನು ನಡಿಗೆ ಮೂಲಕ ಕ್ರಮಿಸಿ ದಾಖಲೆ ಸೃಷ್ಟಿಸಿದ್ದ ಮಹಾರಾಷ್ಟ್ರದ ಈ ಹುಲಿಯ ಸಂಚಾರಕ್ಕೆ ಇದೀಗ ಕಡಿವಾಣ ಬಿದ್ದಿದೆ. ಮೂರು ಮಂದಿಯನ್ನು ಕೊಂದ ಆರೋಪದಲ್ಲಿ ಈ ಹುಲಿ ತನ್ನ ಜೀವಮಾನದ ಉಳಿದ ಅವಧಿಯನ್ನು ಬೋನಿನಲ್ಲಿ ಬಂಧಿಯಾಗಿ ಕಳೆಯುವಂತಾಗಿದೆ.

ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಹುಲಿಗೆ ಅರಿವಳಿಕೆ ಚುಚ್ಚು ಮದ್ದು ನೀಡಿ, ಶನಿವಾರ ಭೋಫಾಲ್‌ನ ವನ ವಿಹಾರಕ್ಕೆ ಸಾಗಿಸಲಾಯಿತು. ಅಲ್ಲಿ ಅದನ್ನು ಸೆರೆಮನೆಯಲ್ಲಿಡಲಾಗುವುದು ಎಂದು ಮೂಲಗಳು ಹೇಳಿವೆ.

ಈ ಹುಲಿಗೆ ಕಾಡಿನಲ್ಲೇ ಇರಲು ಸಾಕಷ್ಟು ಅವಕಾಶ ನೀಡಲಾಗಿತ್ತು. ಆದರೆ ಇದು ಮನುಷ್ಯರು ವಾಸಿಸುವ ತಾಣಗಳಿಗೇ ಲಗ್ಗೆ ಹಾಕಿದ ಹಿನ್ನೆಲೆಯಲ್ಲಿ ಇದೀಗ ಬಂಧಿಯಾಗಿದೆ. ಎನ್‌ಟಿಸಿಎ ಮಾರ್ಗಸೂಚಿ ಅನ್ವಯ 2019ರಲ್ಲಿ ಅಧಿಕಾರಿಗಳು ಇದನ್ನು ಮನುಷ್ಯ ಜೀವಕ್ಕೆ ಅಪಾಯಕಾರಿ ಎಂದು ಘೋಷಿಸಿದ್ದು, ಉಳಿದ ಜೀವಿತಾವಧಿಯನ್ನು ಕಂಬಿ ಹಿಂದೆಯೇ ಇದು ಕಳೆಯಬೇಕಾಗುತ್ತದೆ.

ಐದು ವರ್ಷಗಳ, 180 ಕೆ.ಜಿ. ತೂಕದ ಈ ಹುಲಿ ಮಹಾರಾಷ್ಟ್ರದ ಚಂದ್ರಾಪುರದಿಂದ ಮಧ್ಯಪ್ರದೇಶದ ಪಲಸ್‌ಪಾನಿ ನಡುವಿನ 510 ಕಿಲೋಮೀಟರ್ ಅಂತರ ಕ್ರಮಿಸುವ ವೇಳೆ ಮೂವರನ್ನು ಸಾಯಿಸಿದೆ. ತನ್ನ ಹೊಸ ವ್ಯಾಪ್ತಿ ಹುಡುಕಿಕೊಂಡು 2018ರ ಅಗಸ್ಟ್‌ನಿಂದ ಡಿಸೆಂಬರ್ ಮಧ್ಯೆ ಈ ದಾಖಲೆ ದೂರ ಕ್ರಮಿಸಿತ್ತು. ಇದನ್ನು ಸಾತ್ಪುರ ಹುಲಿ ಅಭಯಾರಣ್ಯದಲ್ಲಿ 2018ರ ಡಿಸೆಂಬರ್ 10ರಂದು ಸೆರೆ ಹಿಡಿಯಲಾಗಿತ್ತು. ಬಳಿಕ ಕನ್ಹಾಗೆ ಸ್ಥಳಾಂತರಿಸಿ 45 ದಿನಗಳ ಕಾಲ ಬೋನಿನಲ್ಲಿ ಇರಿಸಲಾಗಿತ್ತು.

ಇದೀಗ ವನವಿಹಾರ ಈ ಹುಲಿಯ ಹೊಸ ಮನೆಯಾಗಲಿದ್ದು, ಇತರ 14 ಹುಲಿಗಳ ಜತೆ ಇದೂ ವಾಸ ಮಾಡಲಿದೆ. ಆದರೆ ಅಪಾಯಕಾರಿ ಎಂಬ ಕಾರಣಕ್ಕೆ ಸಾರ್ವಜನಿಕರಿಗೆ ಇದರ ದರ್ಶನ ಸಿಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News