‘ಉಳ್ಳವರಿಗಷ್ಟೇ ಶಿಕ್ಷಣ’ ಎನ್ನುವ ಹೊಸ ಶಿಕ್ಷಣ ಪದ್ಧತಿ ಬೇಡ

Update: 2020-06-08 05:45 GMT

ಭಾರತದ ಶಿಕ್ಷಣ ವ್ಯವಸ್ಥೆ ಈಗಾಗಲೇ ‘ಸರಕಾರಿ ಶಾಲೆ-ಖಾಸಗಿ ಶಾಲೆ’ಗಳಾಗಿ ವಿಭಜನೆಗೊಂಡಿದೆ. ‘ಇಂಗ್ಲಿಷ್ ಮೀಡಿಯಂ-ಕನ್ನಡ ಮೀಡಿಯಂ’ ಎಂದು ತೆಳುವಾಗಿ ಗುರುತಿಸಲ್ಪಡುವ ಈ ವಿಭಜನೆ, ಆಳದಲ್ಲಿ ‘ಉಳ್ಳವರಿಗೊಂದು- ಇಲ್ಲದವರಿಗೊಂದು ’ ಶಿಕ್ಷಣದ ವರ್ಗೀಕರಣವಾಗಿದೆ. ದೇಶವನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಎರಡಾಗಿ ಒಡೆಯುವುದರಲ್ಲಿ ಈ ಶಿಕ್ಷಣ ವ್ಯವಸ್ಥೆ ಬಹುತೇಕ ಯಶಸ್ವಿಯಾಗಿದೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರ ದಿನೇ ದಿನೇ ಹೆಚ್ಚಾಗುತ್ತಿದೆ. ಖಾಸಗಿ ಶಾಲೆ ಮತ್ತು ಇಂಗ್ಲಿಷ್ ಮೀಡಿಯಂ ಶಾಲೆಗಳ ಶಿಕ್ಷಣ ಗುಣಮಟ್ಟದ ಜೊತೆಗೆ ಸ್ಪರ್ಧೆಯಲ್ಲಿ ಸರಕಾರಿ ಶಾಲೆಗಳು ಬಹುತೇಕ ವಿಫಲವಾಗುತ್ತಿವೆ. ಸರಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಸಾರ್ವಜನಿಕ ಕ್ಷೇತ್ರದಲ್ಲಿ ಎದುರಾಗುವ ಸ್ಪರ್ಧೆಗಳಲ್ಲಿ ಸೋಲುತ್ತಿದ್ದಾರೆ. ಕನಿಷ್ಠ ಪ್ರೌಢಶಾಲೆಯವರೆಗಾದರೂ ಈ ದೇಶದಲ್ಲಿ ಎಲ್ಲರಿಗೂ ಸಮಾನ ರೀತಿಯ ಶಿಕ್ಷಣ ದೊರಕಬೇಕು ಎನ್ನುವ ಶಿಕ್ಷಣ ತಜ್ಞರ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಸ್ವೀಕರಿಸಿಯೇ ಇಲ್ಲ. ಯಾಕೆಂದರೆ, ಶಾಲೆಗಳೆನ್ನುವುದು ಬರೇ ಜ್ಞಾನ ದೇಗುಲವಾಗಿ ಉಳಿದಿಲ್ಲ. ಅವು ಹಣ ಮಾಡುವ ದಂಧೆಯಾಗಿ ಪರಿವರ್ತನೆಗೊಂಡಿವೆ.

ಪಂಚತಾರಾ ಆಸ್ಪತ್ರೆಗಳಂತೆ, ಪಂಚತಾರಾ ಶಾಲೆಗಳೂ ತೆರೆದುಕೊಳ್ಳುತ್ತಿವೆ ಮತ್ತು ಇದರ ಹಿಂದೆ ಹಣ ಹೂಡುವವರಲ್ಲಿ ರಾಜಕಾರಣಿಗಳು ಮೊದಲ ಪಂಕ್ತಿಯಲ್ಲಿದ್ದಾರೆ. ಒಂದು ಕಾಲದಲ್ಲಿ ಬಡವರು, ದುರ್ಬಲ ಜಾತಿಯ ಜನರಿಗೆ ‘ಜಾತಿ’ ಹೆಸರಲ್ಲೇ ಶಿಕ್ಷಣವನ್ನು ನಿರಾಕರಿಸಲಾಗಿತ್ತು. ಈ ದೇಶ ಸ್ವತಂತ್ರಗೊಂಡ ಬಳಿಕ ಶಿಕ್ಷಣ ಎಲ್ಲರ ಹಕ್ಕಾಗಿ ಸಂವಿಧಾನ ಘೋಷಿಸಿತು. ಆದರೆ ಶಿಕ್ಷಣದ ಖಾಸಗೀಕರಣ ಮತ್ತೆ ಶಿಕ್ಷಣವನ್ನು ಉಳ್ಳವರು ಮತ್ತು ಮೇಲ್ಜಾತಿಯ ಸೊತ್ತಾಗಿಸುತ್ತಿದೆ. ವಿದ್ಯಾರ್ಥಿಗಳ ಕೊರತೆಯಿಂದ ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿವೆ. ಇರುವ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆಗಳಿವೆ. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಶಕ್ತಿಯಿಲ್ಲದೆ ಸರಕಾರಿ ಶಾಲೆಗಳನ್ನೇ ನೆಚ್ಚಿಕೊಂಡಿರುವ ಕುಟುಂಬಗಳು ಎದುರಿಸುತ್ತಿರುವ ಸವಾಲುಗಳು ಒಂದೆರಡಲ್ಲ. ಇವುಗಳ ನಡುವೆಯೂ ಅಪರೂಪಕ್ಕೆ ಕೆಲವು ಸರಕಾರಿ ಶಾಲೆಗಳು ಸಾರ್ವಜನಿಕರ ಬೆಂಬಲದಿಂದ ಸಾಧನೆಗಳನ್ನು ಸಾಧಿಸಿರುವುದನ್ನೂ ಅಲ್ಲಗಳೆಯುವಂತಿಲ್ಲ. ಆದರೆ ಅದು ಅಪರೂಪಕ್ಕೆ ಅಪರೂಪವಾದ ಪ್ರಕರಣಗಳು. ಇದೀಗ ಕೊರೋನೋತ್ತರ ಭಾರತದ ಶಿಕ್ಷಣ ವ್ಯವಸ್ಥೆ ಇನ್ನೊಂದು ಬಗೆಯಲ್ಲಿ ವಿಭಜನೆಗೊಳ್ಳುವ ಸೂಚನೆ ಕಾಣಿಸಿಕೊಳ್ಳುತ್ತಿದೆ. ಅದನ್ನು ಸುಂದರವಾಗಿ ‘ಆನ್‌ಲೈನ್ ಶಿಕ್ಷಣ ವ್ಯವಸ್ಥೆ’ ಎಂದು ಕರೆಯಲು ಮುಂದಾಗಿದ್ದೇವೆ.

ಶಾಲೆಗಳು ತೆರೆದರೆ ಕೊರೋನ ಸೋಂಕು ಇನ್ನಷ್ಟು ವಿಸ್ತರಣೆಗೊಳ್ಳಬಹುದು ಎಂಬ ಆತಂಕದಿಂದ, ಡಿಜಿಟಲ್ ತಂತ್ರಜ್ಞಾನಗಳ ಮೂಲಕ ವಿದ್ಯಾರ್ಥಿಗಳಿಗೆ ಮನೆಗಳನ್ನೇ ಶಾಲೆಗಳನ್ನಾಗಿಸುವುದು ಇದರ ಉದ್ದೇಶ. ಆಯಾ ಶಾಲೆಗಳ ಅಧ್ಯಾಪಕರು ಇಂಟರ್‌ನೆಟ್ ಮೂಲಕ ತರಗತಿಗಳನ್ನು ನಡೆಸುವುದು, ವಿದ್ಯಾರ್ಥಿಗಳು ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್‌ಗಳ ಮೂಲಕ ಮನೆಯಲ್ಲೇ ಅವುಗಳನ್ನು ಆಲಿಸಿ ಪರೀಕ್ಷೆಗೆ ಸಿದ್ಧರಾಗುವ ಪರಿಕಲ್ಪನೆಯನ್ನು ಕಾರ್ಯಗತಗೊಳಿಸಲು ಹಲವು ರಾಜ್ಯಗಳು ಮುನ್ನಡಿಯಿಡುತ್ತಿವೆ. ಪ್ರಧಾನಿ ಮೋದಿ ನೇತೃತ್ವದ ಸರಕಾರದ ಕಳೆದ ಅವಧಿಯ ಆಡಳಿತದ ಸಂದರ್ಭದಲ್ಲಿ ‘ನೋಟು ನಿಷೇಧ’ದ ದುಷ್ಪರಿಣಾಮಗಳನ್ನು ಎದುರಿಸಲು ‘ಡಿಜಿಟಲ್ ಬ್ಯಾಂಕಿಂಗ್’ ಮುನ್ನೆಲೆಗೆ ಬಂದಿತ್ತು. ಆದರೆ, ನಗರದ ಶ್ರೀಮಂತ ಮತ್ತು ಮೇಲ್‌ಮಧ್ಯಮ ವರ್ಗದ ಜನರನ್ನು ಹೊರತು ಪಡಿಸಿ, ಡಿಜಿಟಲ್ ಬ್ಯಾಂಕಿಂಗ್ ಕಲ್ಪನೆ ದೇಶದ ಜನರನ್ನು ತಲುಪಲೇ ಇಲ್ಲ. ಬದಲಿಗೆ, ಬ್ಯಾಂಕಿಂಗ್ ವಲಯದಲ್ಲಿ ಡಿಜಿಟಲ್ ಅಪರಾಧಗಳು ಹೆಚ್ಚಿದವು. ಕಳ್ಳರಿಗೆ ತಿಜೋರಿ ಒಡೆದು ಬ್ಯಾಂಕ್ ದೋಚುವುದಕ್ಕಿಂತ, ಡಿಜಿಟಲ್ ಗೋಡೆ ಮುರಿದು ಬ್ಯಾಂಕ್ ದರೋಡೆಗೈಯುವುದು ಸುಲಭವಾಯಿತು. ಇದೀಗ ಶಿಕ್ಷಣ ವ್ಯವಸ್ಥೆಯ ಉದ್ದೇಶವನ್ನೂ ಡಿಜಿಟಲೀಕರಣ ನಾಶ ಮಾಡಲು ಹೊರಟಿದೆ. ಈವರೆಗೆ ‘ಉಳ್ಳ ವರಿಗೊಂದು ಶಿಕ್ಷಣ-ಇಲ್ಲದವರಿಗೆ ಇನ್ನೊಂದು ಶಿಕ್ಷಣ’ ಎನ್ನುವುದು ಜಾರಿಯಲಿದ್ದರೆ, ಡಿಜಿಟಲೀಕರಣದಿಂದ ‘ಉಳ್ಳವರಿಗೆ ಮಾತ್ರ ಶಿಕ್ಷಣ’ ಎನ್ನುವ ಅಘೋಷಿತ ನಿಯಮಜಾರಿಗೊಳ್ಳುವ ಸಾಧ್ಯತೆಗಳಿದೆ.

ಕೇರಳದಲ್ಲಿ ‘ಪಟಾಕಿ ತಿಂದು ಸತ್ತ’ ಆನೆ ದೇಶಾದ್ಯಂತ ಸುದ್ದಿ ಮಾಡುತ್ತಿರುವಾಗಲೇ, ಅದೇ ರಾಜ್ಯದಲ್ಲಿ ಒಬ್ಬ ದಲಿತ ವಿದ್ಯಾರ್ಥಿನಿಯ ಆತ್ಮಹತ್ಯೆ ಯಾರ ಗಮನಕ್ಕೂ ಬರಲಿಲ್ಲ. ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದ ಈಕೆಯ ಮನೆಯ ಟಿವಿ ಕೆಟ್ಟು ಹೋಗಿತ್ತು. ಅದಾಗಲೇ ಕೇರಳ ಸರಕಾರ ಸೋಮವಾರದಿಂದ ವಿಕ್ಟರ್ಸ್ ಟಿವಿ ಚಾನೆಲ್ ಮೂಲಕ 1 ರಿಂದ 12ರ ತರಗತಿಗಳಿಗೆ ಆನ್‌ಲೈನ್ ಬೋಧನೆಗಳನ್ನು ಶುರು ಮಾಡಿತ್ತು. ಆದುದರಿಂದ ಆಕೆ ಟಿವಿಯನ್ನು ದುರಸ್ತಿ ಮಾಡಲು ತಂದೆಗೆ ಒತ್ತಾಯಿಸುತ್ತಿದ್ದಳು. ತಂದೆ ಕೂಲಿಕಾರ್ಮಿಕ. ಲಾಕ್‌ಡೌನ್ ಕಾರಣದಿಂದಾಗಿ ಎರಡೂವರೆ ತಿಂಗಳಿನಿಂದ ಕೆಲಸವಿಲ್ಲದೆ ಮನೆಯಲ್ಲೇ ಇದ್ದ. ಕೈಯಲ್ಲಿ ದುಡ್ಡೂ ಇರದ ಕಾರಣ ಟಿವಿ ದುರಸ್ತಿ ಮಾಡಿಸುವುದು ಸಾಧ್ಯವಾಗಿರಲಿಲ್ಲ. ಸ್ಮಾರ್ಟ್ ಫೋನ್ ಖರೀದಿಸುವುದಂತೂ ಕನಸಿನ ಮಾತು. ಕಲಿಕೆಯಲ್ಲಿ ಪ್ರತಿಭಾವಂತೆಯಾಗಿದ್ದ ವಿದ್ಯಾರ್ಥಿನಿಗೆ ತನ್ನ ಭವಿಷ್ಯ ನಾಶವಾಗುತ್ತಿದೆ ಎನ್ನುವ ಖಿನ್ನತೆ ಕಾಡತೊಡಗಿತು. ಕಳೆದ ಸೋಮವಾರ ಆಕೆ ನಿರ್ಜನ ಪ್ರದೇಶವೊಂದರಲ್ಲಿ ಸುಟ್ಟು ಕರಕಲಾಗಿದ್ದಳು. ಆತ್ಮಹತ್ಯೆಯ ಪತ್ರದಲ್ಲಿ ‘‘ನಾನು ಹೋಗುತ್ತಿದ್ದೇನೆ’’ ಎಂದಷ್ಟೇ ಬರೆದಿದ್ದಳು. ಸತ್ತ ಆನೆಗಾಗಿ ಕಣ್ಣೀರು ಮಿಡಿದ ಯಾರಿಗೂ, ಈ ದಲಿತ ವಿದ್ಯಾರ್ಥಿನಿಯ ಸಾವು ಕಾಡಲಿಲ್ಲ. ‘ಇದು ಆತ್ಮಹತ್ಯೆಯಲ್ಲ, ಕೊಲೆ’ ಎನ್ನುವುದು ಅರ್ಥವಾಗಲಿಲ್ಲ. ಈ ದೇಶದಲ್ಲಿ ಡಿಜಿಟಲ್ ಮೂಲಕ ಶಿಕ್ಷಣವನ್ನು ನೀಡುವ ತೀರ್ಮಾನಕ್ಕೆ ಬರುವುದೂ, ಬಡ ಶೋಷಿತ ಸಮುದಾಯದ ವಿದ್ಯಾರ್ಥಿಗಳ ಸಾಮೂಹಿಕ ಆತ್ಮಹತ್ಯೆಗೆ ಷರಾ ಬರೆಯುವುದು ಎರಡೂ ಒಂದೇ ಎನ್ನುವುದನ್ನು ಘೋಷಿಸಿ ಹೋಗಿದ್ದಾಳೆ ಕೇರಳದ ಈ ದಲಿತ ವಿದ್ಯಾರ್ಥಿನಿ ದೇವಿಕಾ.

ಬರೇ ಕರ್ನಾಟಕವನ್ನೇ ತೆಗೆದುಕೊಂಡರೆ, ಇಲ್ಲಿ 48 ಲಕ್ಷ ಮಕ್ಕಳ ಪೈಕಿ 26 ಲಕ್ಷ ಮಕ್ಕಳ ಪಾಲಕರ ಕೈಯಲ್ಲಷ್ಟೇ ಸ್ಮಾರ್ಟ್ ಫೋನ್‌ಗಳಿವೆ. ಅಂದರೆ ಸರಕಾರದ ಪ್ರಕಾರವೇ ಸುಮಾರು ಶೇಕಡ 40ರಷ್ಟು ಮಕ್ಕಳು ಶಿಕ್ಷಣದಿಂದ ಹೊರಗುಳಿಯುತ್ತಾರೆ. ಇದೇ ಸಂದರ್ಭದಲ್ಲಿ, ಪಾಲಕರಲ್ಲಿ ಸ್ಮಾರ್ಟ್‌ಫೋನ್‌ಗಳು ಇದ್ದಾಕ್ಷಣ ಅದನ್ನು ಮಕ್ಕಳು ಬಳಕೆ ಮಾಡಬೇಕು ಎಂದೇನೂ ಇಲ್ಲ. ಸ್ಮಾರ್ಟ್ ಫೋನ್‌ಗಳು ಕೆಟ್ಟು ಹೋದರೆ, ಇಂಟರ್‌ನೆಟ್ ಸಂಪರ್ಕ ಸಿಗದೇ ಹೋದರೆ....ಇತ್ಯಾದಿ ‘ರೆ’ಗಳ ನಡುವೆ ನಡೆಯುವ ಆನ್‌ಲೈನ್ ಶಿಕ್ಷಣ ಮಧ್ಯಮವರ್ಗ ಮತ್ತು ಬಡವರ ಮಕ್ಕಳಿಗೆ ಚಿತ್ರಹಿಂಸೆಯೇ ಸರಿ. ಇಂತಹ ಆನ್‌ಲೈನ್ ತರಗತಿಗಳ ಸದುಪಯೋಗ ಮೇಲ್‌ಮಧ್ಯಮ ಮತ್ತು ಶ್ರೀಮಂತವರ್ಗವಷ್ಟೇ ತನ್ನದಾಗಿಸಿಕೊಂಡೀತು. ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗಂತೂ ಆನ್‌ಲೈನ್ ತರಗತಿಗಳು ಮುಗಿಲ ಮಲ್ಲಿಗೆ. ಶಾಲೆಯ ನಾಲ್ಕು ಕೊಠಡಿಗಳ ಮಧ್ಯೆ ಕಲಿಯುವುದರಿಂದಷ್ಟೇ ಹುಡುಗಿಯರು ಸಮರ್ಥವಾಗಿ ಶಿಕ್ಷಣ ಪಡೆಯುವುದಕ್ಕೆ ಸಾಧ್ಯವಾಗುತ್ತಿದೆ. ಮನೆಯೇ ಶಾಲೆಯಾದರೆ, ಹುಡುಗರಿಗೆ ನೀಡುವ ಪ್ರೋತ್ಸಾಹವನ್ನು ಪಾಲಕರು ಬಾಲಕಿಯರಿಗೂ ನೀಡುವ ಸಾಧ್ಯತೆಗಳು ಕಡಿಮೆ.

ಬಡ ವಿದ್ಯಾರ್ಥಿಗಳು ಮಾತ್ರವಲ್ಲದೆ, ವಿದ್ಯಾರ್ಥಿನಿಯರೂ ಆನ್‌ಲೈನ್ ಕಾರಣದಿಂದಾಗಿ ಶಿಕ್ಷಣ ವಂಚಿತರಾಗುವ ಸಾಧ್ಯತೆಗಳಿವೆ. ಆಟೋಟ, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಶ್ರೀಮಂತ ವರ್ಗ ಬೇರೆ ಬೇರೆ ಮಾಧ್ಯಮಗಳನ್ನು ಆಶ್ರಯಿಸಬಹುದು. ಆದರೆ ಈ ನೆಲದ ಬಡ ದಲಿತ ಸಮುದಾಯದ ಮಕ್ಕಳು ಶಾಲೆಯ ಮೈದಾನದಲ್ಲಿ, ಸಭಾಂಗಣಗಳಲ್ಲಷ್ಟೇ ಅವುಗಳನ್ನು ತನ್ನದಾಗಿಸಿಕೊಳ್ಳಬಲ್ಲರು. ಆದುದರಿಂದ ಆನ್‌ಲೈನ್ ಶಿಕ್ಷಣದ ಹೆಸರಿನಲ್ಲಿ ‘ಉಳ್ಳವರಿಗಷ್ಟೇ ಶಿಕ್ಷಣ’ ಪದ್ಧತಿಯೊಂದು ಯಾವ ಕಾರಣಕ್ಕೂ ಜಾರಿಗೊಳ್ಳಬಾರದು. ಎರಡು ತಿಂಗಳು ತಡವಾದರೂ ಪರವಾಗಿಲ್ಲ, ಶಾಲೆಗಳಲ್ಲೇ ಪಠ್ಯ ಚಟುವಟಿಕೆಗಳು ಆರಂಭವಾಗಲಿ. ಎಲ್ಲರೂ ಸಮಾನ ಶಿಕ್ಷಣ ಪಡೆಯದೇ ಇದ್ದರೂ ಪರವಾಗಿಲ್ಲ, ಜೊತೆಯಾಗಿ ಶಿಕ್ಷಣವನ್ನು ಪಡೆಯುವಂತಾಗಲಿ. ಯಾರೂ ಆನ್‌ಲೈನ್ ಕಾರಣದಿಂದ ಶಿಕ್ಷಣದಿಂದ ಹೊರಗೆ ಉಳಿಯುವಂತಾಗದಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News