ದೇಶದಲ್ಲಿ 2.5 ಲಕ್ಷ ದಾಟಿದ ಕೊರೋನ ವೈರಸ್ ಸೋಂಕು

Update: 2020-06-08 03:45 GMT

ಹೊಸದಿಲ್ಲಿ : ಲಾಕ್‌ಡೌನ್ ಬಳಿಕ ಹಲವು ಸಾರ್ವಜನಿಕ ಸ್ಥಳಗಳು ತೆರೆದುಕೊಳ್ಳುವ ಮುನ್ನ ದಿನವಾದ ರವಿವಾರ ದೇಶದಲ್ಲಿ 10,749 ಹೊಸ ಕೊರೋನ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.5 ಲಕ್ಷ ದಾಟಿದೆ ಹಾಗೂ ಮೃತಪಟ್ಟವರ ಸಂಖ್ಯೆ 7,000ದ ಗಡಿ ದಾಟಿದೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,57,334 ಆಗಿದ್ದು, ಎರಡು ಲಕ್ಷದಿಂದ 50 ಸಾವಿರ ಪ್ರಕರಣ ಹೆಚ್ಚಳವಾಗಲು ಕೇವಲ 5 ದಿನಗಳನ್ನು ತೆಗೆದುಕೊಂಡಿದೆ. ದೇಶದಲ್ಲಿ ಸತತ ಎರಡನೇ ದಿನ 10 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.

ದೇಶದಲ್ಲಿ ಮೊದಲ ಪ್ರಕರಣ ವರದಿಯಾದ 74 ದಿನಗಳ ಬಳಿಕ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.
ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಸತತ ಐದನೇ ದಿನ 250ಕ್ಕಿಂತ ಅಧಿಕವಾಗಿದೆ. ರವಿವಾರ ದೇಶದಲ್ಲಿ 262 ಸಾವು ಸಂಭವಿಸಿದ್ದು, ಶುಕ್ರವಾರ (295) ಮತ್ತು ಶನಿವಾರ (297)ಕ್ಕೆ ಹೋಲಿಸಿದರೆ ಇದು ಕಡಿಮೆ. ಒಟ್ಟು ಮೃತಪಟ್ಟವರ ಸಂಖ್ಯೆ 7201ಕ್ಕೇರಿದೆ.

ಮಹಾರಾಷ್ಟ್ರದಲ್ಲಿ ರವಿವಾರ 3,007 ಪ್ರಕರಣಗಳು ವರದಿಯಾಗಿವೆ. ಮೇ 24ರಂದು ದಾಖಲಾದ 3041 ಪ್ರಕರಣಗಳನ್ನು ಹೊರತುಪಡಿಸಿದರೆ ಗರಿಷ್ಠ ಸಂಖ್ಯೆಯ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಒಂದೇ ದಿನ ದಾಖಲಾಗಿವೆ.

ತಮಿಳುನಾಡು (1515), ಜಮ್ಮು ಮತ್ತು ಕಾಶ್ಮೀರ (620), ಹರ್ಯಾಣ (496) ಮತ್ತು ಬಂಗಾಳ (449)ದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. ದೇಶದ 32 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಂದ ರವಿವಾರ ಹೊಸ ಪ್ರಕರಣಗಳು ವರದಿಯಾಗಿದ್ದು, 18 ರಾಜ್ಯಗಳಲ್ಲಿ ಕೊರೋನ ಸಂಬಂಧಿ ಸಾವು ಸಂಭವಿಸಿದೆ. ದೇಶದಲ್ಲಿ ಸೋಂಕು ವ್ಯಾಪಕವಾಗಿ ಹರಡಿದೆ ಎನ್ನುವುದರ ಸ್ಪಷ್ಟ ಸೂಚನೆ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News