ನೊಂದವರ ಪರ ಮಾತನಾಡಿದರೆ ಅಸಹನೆ ಏಕೆ?

Update: 2020-06-10 06:22 GMT

ಕೊರೋನ ನಂತರದ ಲಾಕ್‌ಡೌನ್ ಅವಧಿಯಲ್ಲಿ ನೆಲೆ ತಪ್ಪಿದ ವಲಸೆ ಕಾರ್ಮಿಕರು ಇನ್ನೂ ಅತಂತ್ರ ಸ್ಥಿತಿಯಲ್ಲೇ ಇದ್ದಾರೆ. ಅವರ ಬಗ್ಗೆ ಕೇಂದ್ರ ಸರಕಾರ ತಾಳಿದ ತಾತ್ಸಾರದ ಧೋರಣೆ ವ್ಯಾಪಕವಾಗಿ ಖಂಡನೆಗೆ ಒಳಗಾಗಿದೆ. ಈ ಕುರಿತು ವಿವಿಧ ಹೈಕೋರ್ಟ್ ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಸಲ್ಪಟ್ಟಿವೆ. ಹೈಕೋರ್ಟ್ ಗಳು ಕೂಡ ತ್ವರಿತವಾಗಿ ಸ್ಪಂದಿಸಿ ಸರಕಾರದ ಲೋಪದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿವೆ. ಸುಪ್ರೀಂಕೋರ್ಟ್ ಕೂಡ ಈ ಬಗ್ಗೆ ವಿಚಾರಣೆ ನಡೆಸಿ ಆದೇಶ ಹೊರಡಿಸಿದೆ. ನಮ್ಮ ದೇಶದ ಸಾಂವಿಧಾನಿಕ ನ್ಯಾಯಾಲಯಗಳಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹೊಸದಲ್ಲ. ಮಕ್ಕಳ ಮೇಲಿನ ದೌರ್ಜನ್ಯವಿರಲಿ, ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ಇರಲಿ, ನೈಸರ್ಗಿಕ ಸಂಪತ್ತಿನ ಲೂಟಿ ನಡೆದಿರಲಿ, ವಿಚಾರಣಾಧೀನ ಕೈದಿಗಳ ಸಮಸ್ಯೆಗಳಿರಲಿ ಪ್ರತಿಯೊಂದು ಸಂದರ್ಭದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಬಳಸಿಕೊಂಡು ಜನರ ಹಕ್ಕುಗಳನ್ನು ಸಂವಿಧಾನದ ಚೌಕಟ್ಟಿನಲ್ಲಿ ರಕ್ಷಣೆ ಮಾಡುತ್ತಾ ಬಂದಿವೆ. ಹಿಂದಿನ ಸರಕಾರಗಳು ಕೂಡ ಇಂತಹ ಸಂದರ್ಭಗಳಲ್ಲಿ ಸಕಾರಾತ್ಮಕವಾಗಿ ವರ್ತಿಸಿವೆ. ಆದರೆ ಇಂದಿನ ಸರಕಾರದ ಮತ್ತು ಸಾಲಿಸಿಟರ್ ಜನರಲ್ ಅವರ ವರ್ತನೆಯ ಬಗ್ಗೆ ಈಗ ಟೀಕೆ ವ್ಯಕ್ತವಾಗುತ್ತಿದೆ.

ವಲಸೆ ಕಾರ್ಮಿಕರ ಸಂಕಷ್ಟದ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಆಡಿದ ಮಾತುಗಳು ಸರಿಯಲ್ಲ. ‘ವಲಸೆ ಕಾರ್ಮಿಕರ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಂಡ ಕೆಲ ಹೈಕೋರ್ಟ್‌ಗಳು ಪರ್ಯಾಯ ಸರಕಾರಗಳನ್ನು ನಡೆಸುತ್ತಿವೆ’ ಎಂದು ಮೆಹ್ತಾ ಆಡಿದ ಮಾತು ಅವರಿಗೆ ಶೋಭೆ ತರುವುದಿಲ್ಲ. ವಲಸೆ ಕಾರ್ಮಿಕರ ಪರ ಕೆಲಸ ಮಾಡುವವರನ್ನು ರಣಹದ್ದುಗಳೆಂದು ಅವರು ಕರೆದಿದ್ದಾರೆ. ಹೈಕೋರ್ಟ್‌ಗಳು ಕೂಡ ಸಂವಿಧಾನಾತ್ಮಕ ಸ್ಥಾನ ಮಾನಗಳನ್ನು ಹೊಂದಿವೆ. ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ವಿಚಾರಣೆ ನಡೆಸುವ ಸಾಂವಿಧಾನಿಕ ಅಧಿಕಾರ ಅವುಗಳಿಗೂ ಇವೆ. ದೇಶದಲ್ಲಿ ಕಾರ್ಯಾಂಗ ವಿಫಲವಾದಾಗ ನ್ಯಾಯಾಂಗ ಮಧ್ಯೆ ಪ್ರವೇಶ ಮಾಡಿದ ಸಾಕಷ್ಟು ಉದಾಹರಣೆಗಳಿವೆ. ಇದನ್ನು ಕಾರ್ಯಾಂಗದಲ್ಲಿ ಹಸ್ತಕ್ಷೇಪ ಎಂದು ಭಾವಿಸಬಾರದು. ನ್ಯಾಯಾಂಗದಲ್ಲಿ ಉನ್ನತ ಸ್ಥಾನದಲ್ಲಿ ಇರುವವರು ಹೈಕೋರ್ಟ್‌ಗಳು ಪರ್ಯಾಯ ಸರಕಾರ ನಡೆಸುತ್ತಿವೆ ಎಂದು ಹೇಳುವುದು ಅನುಚಿತ ಮಾತ್ರವಲ್ಲ ಆಘಾತಕಾರಿಯಾಗಿದೆ.

ಸಾಲಿಸಿಟರ್ ಜನರಲ್ ಅಂದರೆ ಕೇಂದ್ರ ಸರಕಾರದ ಎರಡನೆಯ ಅತ್ಯಂತ ಹಿರಿಯ ಕಾನೂನು ಅಧಿಕಾರಿ. ಈ ಹುದ್ದೆಯಲ್ಲಿ ಇರುವವರು ಸರಕಾರಕ್ಕೆ ಕಾನೂನು ಸಲಹೆಗಳನ್ನು ನೀಡುತ್ತಾರೆ. ಇಂತಹ ಮಹತ್ವದ ಸ್ಥಾನವನ್ನು ಹೊಂದಿರುವ ತುಷಾರ್ ಮೆಹ್ತಾ ಅವರು ವಲಸೆ ಕಾರ್ಮಿಕರ ತಾಪತ್ರಯಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ವೇಳೆ ಅವರ ಸ್ಥಾನದ ಘನತೆ ಗೆ ತಕ್ಕಂತೆ ನಡೆದುಕೊಳ್ಳಲಿಲ್ಲ ಎನ್ನುವುದು ವಿಷಾದದ ಸಂಗತಿಯಾಗಿದೆ. ವಲಸೆ ಕಾರ್ಮಿಕರ ಬವಣೆಗಳಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರಕಾರದ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯೆಂದು ಭಾವಿಸುವುದು ತಪ್ಪಾಗುತ್ತದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವುದೇ ಅಪರಾಧ ಎಂಬಂತೆ ಸಾಲಿಸಿಟರ್ ಜನರಲ್ ಮಾತನಾಡುತ್ತಿದ್ದಾರೆ. ವಲಸೆ ಕಾರ್ಮಿಕರ ಪರವಾಗಿ ಕೆಲಸ ಮಾಡುವ ಸಂಘಟನೆಗಳ ಕಾರ್ಯಕರ್ತರ ಬಗ್ಗೆ ನ್ಯಾಯಾಲಯದಲ್ಲಿ ಅವರು ಆಡಿದ ಮಾತುಗಳು ಒಬ್ಬ ಅಧಿಕಾರರೂಢ ಪಕ್ಷದ ರಾಜಕಾರಣಿಯಂತಿದ್ದವು ಎಂಬುದು ಆತಂಕದ ಸಂಗತಿಯಾಗಿದೆ.

ಇನ್ನೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಇದೇ ಮೆಹ್ತಾ ಅವರು ಇಂದು 11 ಗಂಟೆಯ ಹೊತ್ತಿನಲ್ಲಿ ( ಮಾರ್ಚ್ 31 ರಂದು) ದೇಶದಲ್ಲಿ ಎಲ್ಲೂ ವಲಸೆ ಕಾರ್ಮಿಕರು ರಸ್ತೆಯ ಮೇಲಿಲ್ಲ. ಅವರನ್ನೆಲ್ಲ ಹತ್ತಿರದ ಆಶ್ರಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಹೇಳಿದ್ದರು. ಆದರೆ ಆ ದಿನವೂ ಸಹಸ್ರಾರು ವಲಸೆ ಕಾರ್ಮಿಕರು ತಮ್ಮ ತಮ್ಮ ಊರಿಗೆ ತಲುಪಲು ಪರದಾಡುತ್ತಿದ್ದರು.ಸಾಲಿಸಿ ಟರ್ ಜನರಲ್ ಸುಪ್ರೀಂಕೋರ್ಟ್‌ನಲ್ಲಿ ನೀಡಿದ ಹೇಳಿಕೆ ಸತ್ಯಾಂಶದಿಂದ ಕೂಡಿರಲಿಲ್ಲ. ವಲಸೆ ಕಾರ್ಮಿಕರ ಬಿಕ್ಕಟ್ಟು ಮಾನವ ಹಕ್ಕುಗಳ ರಕ್ಷಣೆಯ ಪ್ರಶ್ನೆ, ಮನುಷ್ಯರ ಯಾತನೆಗೆ ಸಂಬಂಧಿಸಿದ್ದು. ಇಂತಹ ಪ್ರಶ್ನೆಯಲ್ಲಿ ಯಾರೂ ಕುಹಕದ ಮಾತನ್ನಾಡಬಾರದು.

ವಲಸೆ ಕಾರ್ಮಿಕರ ಪರವಾಗಿ ಧ್ವನಿಯೆತ್ತುವವರನ್ನು ಕೆಡುಕಿನ ಪ್ರತಿಪಾದಕರು, ಆರಾಮ ಕುರ್ಚಿ ಚಿಂತಕರು ಎಂದು ತುಷಾರ್ ಮೆಹ್ತಾ ಲೇವಡಿ ಮಾಡುವುದರ ಮೂಲಕ ಅವರ ಸ್ಥಾನದ ಘನತೆಗೆ ಚ್ಯುತಿ ತಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸರಕಾರದ ಲೋಪ ದೋಷಗಳನ್ನು ಟೀಕಿಸುವವರು, ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ನ್ಯಾಯಾಲಯದ ಗಮನಕ್ಕೆ ತರುವವರು ಕೆಡುಕಿನ ಪ್ರತಿಪಾದಕರೂ ಅಲ್ಲ, ಆರಾಮ ಕುರ್ಚಿ ಚಿಂತಕರೂ ಅಲ್ಲ. ಸರಕಾರದ ಸಕಲ ಸವಲತ್ತುಗಳನ್ನು ಪಡೆದು ಐಷಾರಾಮಿ ಜೀವನವನ್ನು ನಡೆಸುವವರು ಮಾತ್ರ ಋಣ ತೀರಿಸಲು ಇಂತಹ ಮಾತನ್ನು ಆಡುತ್ತಾರೆ ಅಂದರೆ ಅತಿಶಯೋಕ್ತಿಯಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News