ಈ ಕೋವಿಡ್-19 ರೋಗಿಯ ಆಸ್ಪತ್ರೆ ಬಿಲ್ ಎಷ್ಟು ಗೊತ್ತೇ ?

Update: 2020-06-14 05:28 GMT

ವಾಷಿಂಗ್ಟನ್ : ಕೋವಿಡ್-19 ಸೋಂಕಿನಿಂದಾಗಿ ಬಹುತೇಕ ಸಾವಿನ ದವಡೆಗೆ ಸಿಲುಕಿದ್ದ ವ್ಯಕ್ತಿಯೊಬ್ಬರು ಕೊನೆಗೂ ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದಾರೆ. ಆದರೆ ಅವರ ಚಿಕಿತ್ಸೆಗೆ 11 ಲಕ್ಷ ಡಾಲರ್ ವೆಚ್ಚವಾಗಿದೆ ಎಂದು ಸಿಯಾಟೆಲ್ ಟೈಮ್ಸ್ ವರದಿ ಮಾಡಿದೆ.

ಮೈಕೆಲ್ ಫ್ಲೋರ್ ಎಂಬವರನ್ನು ಮಾರ್ಚ್ 4ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. 62 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಅವರು ಸಾವಿನ ಕದ ತಟ್ಟಿದ್ದರು. ಆಸ್ಪತ್ರೆ ನರ್ಸ್, ಅವರ ಪತ್ನಿ ಹಾಗೂ ಮಕ್ಕಳಿಗೆ ಕರೆ ಮಾಡಿ ಗುಡ್‌ಬೈ ಹೇಳಬಹುದು ಎಂದು ಹೇಳಿದ್ದರು. ಆದರೆ ಅವರು ಮೇ 5ರಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅದರ ಜತೆಗೆ 181 ಪುಟಗಳ ಬಿಲ್ ಅವರ ಕೈಸೇರಿದ್ದು, 11.22 ಲಕ್ಷ ಡಾಲರ್ ಪಾವತಿಸುವಂತೆ ಆಸ್ಪತ್ರೆ ಸೂಚಿಸಿದೆ ಎಂದು ಪತ್ರಿಕೆ ವರದಿ ಮಾಡಿದೆ.

ಇದರಲ್ಲಿ ತೀವ್ರ ನಿಗಾ ಘಟಕದ ಕೊಠಡಿ ಬಾಡಿಗೆ ದಿನಕ್ಕೆ 9736 ಡಾಲರ್, ಅದನ್ನು 42 ದಿನ ಸ್ಟೆರೈಲ್ ರೂಮ್ ಆಗಿ ಮಾರ್ಪಡಿಸಿದ್ದಕ್ಕೆ 4.09 ಲಕ್ಷ ಡಾಲರ್, 29 ದಿನ ವೆಂಟಿಲೇಟರ್ ಬಳಕೆಗೆ 82 ಸಾವಿರ ಡಾಲರ್ ಹಾಗೂ ಜೀವಾಪಾಯ ಲಕ್ಷಣ ನಿಭಾಯಿಸಿದ್ದಕ್ಕೆ ಎರಡು ದಿನಕ್ಕೆ ಒಂದು ಲಕ್ಷ ಡಾಲರ್ ವೆಚ್ಚ ಸೇರಿದೆ.

ಸರ್ಕಾರಿ ವಿಮೆ ಯೋಜನೆಯಡಿ ಇವರಿಗೆ ಸುರಕ್ಷೆ ಇರುವುದರಿಂದ ಇವರು ಜೇಬಿನಿಂದ ಹಣ ಪಾವತಿಸಬೇಕಿಲ್ಲ. ವಿಶ್ವದಲ್ಲೇ ಅತಿ ದುಬಾರಿ ವೈದ್ಯಕೀಯ ಚಿಕಿತ್ಸೆಗೆ ಅಮೆರಿಕ ಹೆಸರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News