ಪರಿಶಿಷ್ಟ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಪರೀಕ್ಷಾ ಪೂರ್ವ ತರಬೇತಿ: ಡಿಸಿಎಂ ಕಾರಜೋಳ ಸೂಚನೆ

Update: 2020-06-16 07:22 GMT

ಬೆಂಗಳೂರು. ಜೂ.16: ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಸಿದ್ಧತಾ ತರಬೇತಿಯನ್ನು ಪ್ರತಿಷ್ಠಿತ ತರಬೇತಿ ಸಂಸ್ಥೆಗಳಿಂದ ಆಯೋಜಿಸಿ, ಐಎಎಸ್/ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ  ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವವರ ವಿವರವನ್ನು ಸಂಗ್ರಹಿಸಬೇಕು ಎಂದು ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಸೂಚಿಸಿದರು.

ವಿಕಾಸಸೌಧದಲ್ಲಿ ನಡೆದ ರಾಜ್ಯಮಟ್ಟದ ಉನ್ನತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

2019-20ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು 24.8 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 11 ಕೋಟಿ ರೂ. ಅನುದಾನ ಒದಗಿಸಲಾಗಿದೆ. 52 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆ ನಡೆಸಿ, 2,754 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ವಿಭಾಗ ವ್ಯಾಪ್ತಿಯ ಜಿಲ್ಲೆಗಳ 900 ಅಭ್ಯರ್ಥಿಗಳಿಗೆ ತರಬೇತಿ ಪಡೆಯಲು ಆದೇಶ ಹೊರಡಿಸಲಾಗಿದೆ ಎಂದವರು ಮಾಹಿತಿ ನೀಡಿದರು.

2020-12ನೇ ಸಾಲಿನಲ್ಲಿ ಸ್ವರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಕ್ರಮಕ್ಕಾಗಿ 14 ಕೋಟಿ ರೂ.ನ್ನು ಮೀಸಲಿಡಲಾಗಿದೆ. ಈ ವರ್ಷದಿಂದ ನ್ಯಾಯಾಲಯವು ನಡೆಸುವ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ಪ್ರಾರಂಭಿಸಲಾಗುವುದು. ನರ್ಸಿಂಗ್ ಕೋರ್ಸುಗಳ ತರಬೇತಿಯನ್ನು ಹೆಚ್ಚು ಅಭ್ಯರ್ಥಿಗಳಿಗೆ ನೀಡಬೇಕು. ಜೆಇಇ ಮತ್ತು ನೀಟ್ ಗಳಿಗೆ ತರಬೇತಿಯನ್ನು ಅತ್ಯುತ್ತಮವಾಗಿ ನೀಡಬೇಕು.  ಮಿಲಿಟರಿ ಪೂರ್ವ ತರಬೇತಿಯನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ನೀಡಬೇಕು. ಪರೀಕ್ಷಾ ಪೂರ್ವ ತರಬೇತಿಯಿಂದ ಸಾಕಷ್ಟು ಅನುಕೂಲಗಳಿವೆ. ಆದರೆ ಗುಣಮಟ್ಟದ ತರಬೇತಿ ನೀಡಿ, ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯಾಗುವಂತೆ ಕ್ರಮ ಕೈಗೊಳ್ಳಬೇಕು. ಅಭ್ಯರ್ಥಿಗಳು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಯಶಸ್ವಿಯಾಗುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಡಿಸಿಎಂ ತಿಳಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಕುಮಾರ್ ನಾಯಕ್, ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯ ಸಲಹೆಗಾರ ಇ.ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರವಿಕುಮಾರ್ ಸುರಪುರ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ್ ಸುರಳೀಕರ, ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮುಖ್ಯಸ್ಥ ಮಹೇಶ್, ಡಿಸಿಎಂ ಆಪ್ತ ಕಾರ್ಯದರ್ಶಿ ವಿ. ಶ್ರೀನಿವಾಸ್, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಸಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News