ಭಾರತೀಯ ಹೈಕಮಿಷನ್ ಸಿಬ್ಬಂದಿಗೆ ರಾಡ್‍ ಗಳಿಂದ ಥಳಿಸಿ, ಕೊಳಕು ನೀರು ಕುಡಿಸಿದ್ದ ಪಾಕ್ ಅಧಿಕಾರಿಗಳು: ಆರೋಪ

Update: 2020-06-16 08:23 GMT

ಹೊಸದಿಲ್ಲಿ: ಇಸ್ಲಾಮಾಬಾದ್‍ ನಲ್ಲಿರುವ ಭಾರತೀಯ ಹೈಕಮಿಷನ್‍ ನ ಇಬ್ಬರು ಸಿಬ್ಬಂದಿಯನ್ನು ಹೈಕಮಿಷನ್ ಪಕ್ಕದ ಪೆಟ್ರೋಲ್ ಬಂಕ್‍ನಿಂದ ವಶಕ್ಕೆ ಪಡೆದುಕೊಂಡು 12 ಗಂಟೆಗಳ ನಂತರ ಬಿಡುಗಡೆಗೊಳಿಸಲಾಗಿತ್ತು. ಈ ಪ್ರಕರಣ ಭಾರೀ ಸುದ್ದಿಯಾಗಿರುವ ನಡುವೆಯೇ ಈ ಇಬ್ಬರು ಸಿಬ್ಬಂದಿಗೆ ಸತತವಾಗಿ ರಾಡ್‍ ಗಳಿಂದ ಹಾಗೂ ಮರದ ಬೆತ್ತಗಳಿಂದ ಥಳಿಸಿ ಕೊಳಕು ನೀರು ಕುಡಿಯುವಂತೆ ಮಾಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಸೋಮವಾರ ಪಾಕಿಸ್ತಾನ ಕಾಲಮಾನ ಬೆಳಗ್ಗೆ 8:30ರ ಸುಮಾರಿಗೆ ಇವರನ್ನು ಆರು ವಾಹನಗಳಲ್ಲಿ ಬಂದ ಸುಮಾರು 15ರಿಂದ 16 ಸಶಸ್ತ್ರಧಾರಿ ವ್ಯಕ್ತಿಗಳ ಗುಂಪು ತನ್ನ  ವಶಕ್ಕೆ ಪಡೆದುಕೊಂಡು ಅವರ ಮುಖಕ್ಕೆ ಬಟ್ಟೆ ಮುಚ್ಚಿ ಕೈಗಳಿಗೆ ಕೋಳ ತೊಡಿಸಿ ನಂತರ ಅನಾಮಿಕ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಸುಮಾರು ಆರು ಗಂಟೆಗಳ ಕಾಲ ವಿಚಾರಣೆಗೊಳಪಡಿಸಲಾಗಿತ್ತಲ್ಲದೆ ಅವರನ್ನು ಥಳಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಎಲ್ಲಾ ಹೈಕಮಿಷನ್ ಅಧಿಕಾರಿಗಳ ಪಾತ್ರ ಹಾಗೂ ಕಾರ್ಯಗಳ ಬಗ್ಗೆ ಅವರನ್ನು ಪ್ರಶ್ನಿಸಲಾಗಿತ್ತು ಎಂದೂ ತಿಳಿದು ಬಂದಿದೆ.

ಆದರೆ ಪಾಕ್ ಮಾಧ್ಯಮ ವರದಿಗಳ ಪ್ರಕಾರ ಈ ಇಬ್ಬರು ಉದ್ಯೋಗಿಗಳ ಕಾರು ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆದ ನಂತರ ಅವರನ್ನು ಬಂಧಿಸಲಾಗಿತ್ತು. ತಾವು ಅಪಘಾತ ನಡೆಸಿರುವುದನ್ನು ಒಪ್ಪಿಕೊಳ್ಳುವ ವೀಡಿಯೋಗಳನ್ನು ತಮ್ಮಿಂದ ಬಲವಂತವಾಗಿ ಮಾಡಿಸಲಾಗಿತ್ತು ಎಂದು ಬಿಡುಗಡೆಗೊಂಡಿರುವ ಹೈಕಮಿಷನ್ ಉದ್ಯೋಗಿಗಳು ಹೇಳಿದ್ದಾರೆ.

ಇಬ್ಬರನ್ನೂ ರಾತ್ರಿ 9 ಗಂಟೆ ಸುಮಾರಿಗೆ ಭಾರತದ ತೀವ್ರ ಆಕ್ಷೇಪದ ನಂತರ ಬಿಡುಗಡೆಗೊಳಿಸಲಾಗಿತ್ತು. ಅವರ ಜೀವಕ್ಕೇನೂ ಅಪಾಯವಾಗಿಲ್ಲದೇ ಇದ್ದರೂ ಮುಖ, ಕತ್ತು ಹಾಗು ತೊಡೆಯ ಭಾಗದಲ್ಲಿ ಗಾಯಗಳಾಗಿವೆ. ಈ ಇಬ್ಬರ ವಿರುದ್ಧದ ಎಫ್‍ಐಆರ್‍ನಲ್ಲಿ ಅವರ ಕಾರಿನಲ್ಲಿ ರೂ 10,000 ಮೌಲ್ಯದ ಪಾಕಿಸ್ತಾನದ ನಕಲಿ ಕರೆನ್ಸಿಯಿತ್ತು ಎಂದು ಆರೋಪಿಸಲಾಗಿದೆ

ಗೂಢಚರ್ಯೆ ಆರೋಪದ ಮೇಲೆ ದಿಲ್ಲಿಯಲ್ಲಿನ ಪಾಕ್ ಹೈಕಮಿಷನ್‍ನ ಇಬ್ಬರು ಅಧಿಕಾರಿಗಳನ್ನು ಭಾರತ ಸರಕಾರ ಮೇ 31ರಂದು ಗಡೀಪಾರುಗೊಳಿಸಿದ್ದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ಭಾರತೀಯ ಹೈಕಮಿಷನ್ ಉದ್ಯೋಗಿಗಳನ್ನು ಬಂಧಿಸಿ ಕಿರುಕುಳ ನೀಡಲಾಗಿದೆ ಎಂದೇ ತಿಳಿಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News