ಕಳವು ಆರೋಪಿ ಸೆರೆ: 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

Update: 2020-06-16 12:03 GMT

ಬೆಂಗಳೂರು, ಜೂ.16: ಕಳವು ಪ್ರಕರಣ ಸಂಬಂಧ ವ್ಯಕ್ತಿಯೋರ್ವನನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು, 30 ಲಕ್ಷ ರೂ. ಬೆಲೆಯ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ರಾಯಪತಿ ವೆಂಕಣ್ಣ(44) ಬಂಧಿತ ಆರೋಪಿಯಾಗಿದ್ದು, ಈತ ಆಂಧ್ರಪ್ರದೇಶದ ನಿವಾಸಿ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಂಪೇಗೌಡ ಲೇಔಟ್ ನಿವಾಸಿಯಾಗಿರುವ ಯೋಗೇಶ್ ಎಂಬುವರ ಮನೆ ಬಾಗಿಲು ಒಡೆದು ಜ.30ರಂದು ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರ ಅನ್ವಯ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗೆ ಜೂಜಾಟದ ಹವ್ಯಾಸವಿದ್ದು, ಈತನು 2010ನೇ ಸಾಲಿನಿಂದ ಆಂಧ್ರಪ್ರದೇಶದ ಗುಂಟೂರು ಮತ್ತು ವಿಜಯವಾಡ ಜಿಲ್ಲೆಗಳಲ್ಲಿ 36 ಕನ್ನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಸುಮಾರು 5 ಬಾರಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. 2012 ರಲ್ಲಿ ಬಳ್ಳಾರಿಯಲ್ಲಿ ಒಂದು ಕನ್ನ ಕಳವು ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸಿದ್ದ. ಆಂಧ್ರಪ್ರದೇಶದಿಂದ ಬಂದು ಬೆಂಗಳೂರಿನ ಆರ್.ಎಂ.ಸಿ.ಯಾರ್ಡ್‍ನ ಬಾಡಿಗೆ ಕೊಠಡಿಯಲ್ಲಿ ನೆಲೆಸಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News