"ಸಮಯಕ್ಕೆ ಸರಿಯಾಗಿ ಊಟ ಇಲ್ಲ, ಶುಚಿತ್ವದ ವ್ಯವಸ್ಥೆಯಿಲ್ಲ"

Update: 2020-06-16 15:08 GMT

#ಯಾವುದೇ ದೂರು ಬಂದಿಲ್ಲ ಎಂದ ಬಿಬಿಎಂಪಿ ಆಯುಕ್ತ

ಬೆಂಗಳೂರು, ಜೂ.16: ಹೊರ ರಾಜ್ಯ, ವಿದೇಶಗಳಿಂದ ಬರುವವರನ್ನು ರಾಜ್ಯ ಸರಕಾರ ಕ್ವಾರಂಟೈನ್ ಗೆ ಒಳಪಡಿಸುತ್ತಿದೆ. ಆದರೆ, ಕ್ವಾರಂಟೈನ್ ಕೇಂದ್ರಗಳಲ್ಲಿ ಸೌಲಭ್ಯಗಳೇ ಇಲ್ಲ ಎಂದು ಕ್ವಾರಂಟೈನ್ ನಲ್ಲಿ ಇರುವವರು ಆರೋಪಿಸಿದ್ದಾರೆ.

ಶಿವಾಜಿನಗರದ ಖಾಸಗಿ ಹೊಟೇಲ್ ನಲ್ಲಿ ಏಳು ದಿನದ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರುವ ರವೂಫ್ ಎಂಬುವವರು ಈ ಕುರಿತು ಮಾತನಾಡಿದ್ದು, ಈ ಹೊಟೇಲ್ ನಲ್ಲಿ 40 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಒಬ್ಬರು ದಿನವೊಂದಕ್ಕೆ 1600 ರೂ. ಪಾವತಿಸುತ್ತಿದ್ದಾರೆ. ಈ ಹೋಟೇಲ್ ನಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಸಮಯಕ್ಕೆ ಸರಿಯಾಗಿ ಊಟ ನೀಡುತ್ತಿಲ್ಲ. ಕಳಪೆ ಮಟ್ಟದ ಆಹಾರ ನೀಡಲಾಗುತ್ತಿದೆ. ಅಲ್ಲದೇ ಆಹಾರದಲ್ಲಿ ಹುಳಗಳು ಇರುತ್ತವೆ ಎಂದು ದೂರಿದ್ದಾರೆ.

ಅಲ್ಲದೇ ಕ್ವಾರಂಟೈನ್ ಒಳಗಾಗಿರುವವರಲ್ಲಿ ಹಿರಿಯರು, ರೋಗಿಗಳು ಇದ್ದಾರೆ. ಹೊಟೇಲ್ ನಲ್ಲಿ ವಾಟರ್ ಬಾಟಲ್ ನೀಡುತ್ತಿಲ್ಲ. ಎಲ್ಲರಿಗೂ ಒಂದೇ ನೀರಿನ ಡ್ರಂ ಇಡಲಾಗಿದೆ. ಬಾತ್ ರೂಂ ಶುಚಿತ್ವವಾಗಿಲ್ಲ. ಇಲ್ಲಿ ಯಾರಿಗೂ ಸ್ಯಾನಿಟೈಸರ್ ನೀಡಿ. ಬೆಡ್ ಗಳಲ್ಲಿ ರಕ್ತದ ಕಲೆಗಳಿವೆ ಎ‌ಂದು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ಅನಿಲ್‍ ಕುಮಾರ್, ಕ್ವಾರಂಟೈನ್ ಕೇಂದ್ರಗಳಲ್ಲಿರುವವರ ಸ್ಥಿತಿಗತಿ ತಿಳಿಯಲು ವಿಶೇಷ ತಂಡಗಳನ್ನು ರಚನೆ ಮಾಡಿ, ಕ್ವಾರಂಟೈನ್ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಲಾಗಿದೆ. ಪ್ರತಿ ತಂಡದಲ್ಲಿ ಐವರು ಅಧಿಕಾರಿಗಳಿರಲಿದ್ದು, ಅವರು ಕ್ವಾರಂಟೈನ್ ಹೊಟೇಲ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುತ್ತಿದ್ದಾರೆ. ಶಿವಾಜಿನಗರದ ಖಾಸಗಿ ಹೊಟೇಲ್ ನಲ್ಲಿ ಇರುವವರಿಂದ ಯಾವುದೇ ದೂರು ಕೇಳಿ ಬಂದಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News