ಚೀನಾ ವಸ್ತುಗಳ ಬಹಿಷ್ಕಾರ: ವಾಸ್ತವಕ್ಕಿಳಿಯುವುದು ಎಂದು?

Update: 2020-06-19 06:10 GMT

ಲಡಾಖ್ ಗಡಿಭಾಗದಲ್ಲಿ ಭಾರತ-ಚೀನಾ ಯೋಧರ ಮಧ್ಯೆ ನಡೆದ ಹಿಂಸಾತ್ಮಕ ಘರ್ಷಣೆಯ ಬಳಿಕ ಭಾರತದೊಳಗೆ ಯುದ್ಧದ ಉನ್ಮಾದ ತೀವ್ರವಾಗಿದೆೆ. ಗಡಿಭಾಗದ ಸದ್ಯದ ಸಂದರ್ಭದ ಗಂಭೀರತೆಯನ್ನು ಅರಿತುಕೊಳ್ಳದೆ ಕೆಲವು ಮಾಧ್ಯಮಗಳು ಸರಕಾರಕ್ಕೆ ಬೇಕಾಬಿಟ್ಟಿ ಸಲಹೆಗಳನ್ನು ನೀಡುತ್ತಿವೆ. ‘ಯುದ್ಧ ನಡೆದೇ ಬಿಡಲಿ’ ಎಂಬಂತೆ ಸರಕಾರವನ್ನು ಹುರಿದುಂಬಿಸುತ್ತಿವೆ. ಮೊನ್ನೆಯ ಘರ್ಷಣೆಯಲ್ಲಿ ಭಾರತ ಕಳೆದುಕೊಂಡ ಜೀವಗಳ ಕುರಿತಂತೆ ಇವರಿಗೆ ಯಾವ ಕಾಳಜಿಯೂ ಇದ್ದಂತಿಲ್ಲ. ಟಿವಿ ಪೆಟ್ಟಿಗೆಯೊಳಗೆ ಅವಿತು ‘ಯುದ್ಧಕ್ಕೆ ಕರೆ’ ನೀಡುವುದು ಸುಲಭ. ಹಿಮಚ್ಛಾದಿತ ಪ್ರದೇಶದಲ್ಲಿ ಪ್ರತಿ ದಿನವೂ ಹವಾಮಾನದ ಜೊತೆಗೆ ಹೋರಾಟ ನಡೆಸುತ್ತಾ ಬಂದಿರುವ ಸೈನಿಕರು ಇಂದು ಏಕಾಏಕಿ ‘ಹುತಾತ್ಮ’ರಾಗಿ ಶವಪೆಟ್ಟಿಗೆಯಲ್ಲಿ ತಾಯ್ನಾಡಿಗೆ ಮರಳಿದ್ದಾರೆ. ಚೀನಾದಂತಹ ಬೃಹತ್ ದೇಶದ ಜೊತೆಗೆ ಭಾರತ ಯುದ್ಧಕ್ಕಿಳಿದರೆ ಆಗುವ ಸಾವು ನೋವುಗಳನ್ನು ಕಲ್ಪಿಸುವುದಕ್ಕೂ ಅಸಾಧ್ಯ. ಒಂದು ಸಣ್ಣ ಘರ್ಷಣೆಯೇ ಈ ಮಟ್ಟಿನ ಹಿಂಸಾಚಾರಕ್ಕೆ ಕಾರಣವಾಗಿದೆಯಾದರೆ, ಯುದ್ಧದ ಪರಿಣಾಮ ಏನಾಗಬಹುದು ಎನ್ನುವ ಕಲ್ಪನೆ ನಮ್ಮ ಟಿವಿ ಪೆಟ್ಟಿಗೆಯೊಳಗಿರುವ ಯೋಧರಿಗಿರಬೇಕಾಗಿದೆ.

ಯುದ್ಧದಲ್ಲಿ ಹುತಾತ್ಮರಾದವರೆಲ್ಲ ನಮ್ಮ ಮನೆಯ ಹುಡುಗರೆಂದು ಭಾವಿಸಿ, ಸರಕಾರಕ್ಕೆ ಸಲಹೆಗಳನ್ನು ನೀಡಬೇಕು. ಇದೇ ಸಂದರ್ಭದಲ್ಲಿ ಚೀನಾ, ನೇಪಾಳ ಮೂಲದ ಸಹಸ್ರಾರು ಸಂಖ್ಯೆಯ ಜನರು ಭಾರತದಲ್ಲಿ ಉದ್ಯೋಗ ಮಾಡುತ್ತಾ ಬದುಕುತ್ತಿದ್ದಾರೆ. ಅಲ್ಲಿನ ಸರಕಾರದ ಮೇಲಿನ ದ್ವೇಷಕ್ಕಾಗಿ ಈ ತರುಣರ ಮೇಲೆ ದ್ವೇಷ ಹರಡುವ ಕೆಲಸವೂ ನಡೆಯುತ್ತಿದೆ. ಚೀನಾ ಸರಕಾರದ ರಾಜಕೀಯದ ಜೊತೆಗೆ ಯಾವೊಂದು ಸಂಬಂಧವೂ ಇಲ್ಲದೆ ಈ ಜನರು ಒಂದು ಹೊತ್ತಿನ ತುತ್ತನ್ನು ಅರಸಿ ಭಾರತದಲ್ಲಿ ನೆಲೆಸಿದ್ದಾರೆ. ಇವರ ಕುರಿತಂತೆ ನಾವು ಬಿತ್ತುವ ದ್ವೇಷ ಪರೋಕ್ಷವಾಗಿ ನಮ್ಮ ಮೇಲೆ ನಾವೇ ಹೇರಿಕೊಳ್ಳುವ ಹಿಂಸೆಯಾಗಿದೆ. ಹೇಗೆ ನೇಪಾಳ, ಚೀನಾದ ಜನರು ನಮ್ಮ ನೆಲದಲ್ಲಿ ಬದುಕು ಅರಸುತ್ತಿದ್ದಾರೆಯೋ, ಹಾಗೆಯೇ ನೇಪಾಳ, ಚೀನಾದಲ್ಲಿ ಭಾರತೀಯರೂ ಬದುಕು ಕಟ್ಟಿಕೊಂಡಿದ್ದಾರೆ. ಪತಂಜಲಿಯ ಮುಖ್ಯಸ್ಥರಲ್ಲಿ ಒಬ್ಬರಾದ ಬಾಲಕೃಷ್ಣ ಅವರ ತಾಯ್ನೆಲ ನೇಪಾಳವೇ ಆಗಿದೆ. ಪತಂಜಲಿಯ ಬೇರು ನೇಪಾಳದಲ್ಲೂ ಹರಡಿಕೊಂಡಿದೆ. ಚೀನಾದಲ್ಲೂ ಸಹಸ್ರಾರು ಭಾರತೀಯರು ನೆಲೆ ಕಂಡುಕೊಂಡಿದ್ದಾರೆ. ಚೀನಾದಲ್ಲಿ ನೂರಾರು ಭಾರತೀಯ ವಿದ್ಯಾರ್ಥಿಗಳು ನೆಲೆಸಿದ್ದಾರೆ. ನಾವು ಚೀನಾ ದೇಶೀಯರ ಕುರಿತಂತೆ ಅಸಹನೆ ಬೆಳೆಸುತ್ತಾ ಹೋದರೆ ಅಲ್ಲಿರುವ ಭಾರತೀಯರು ಅಲ್ಲಿನ ಜನರ ಅಸಹನೆಗೆ ಬಲಿಯಾಗಬೇಕಾಗುತ್ತದೆ.

ಇದೇ ಸಂದರ್ಭದಲ್ಲಿ ‘ಚೀನಾ ವಸ್ತುಗಳನ್ನು ಬಹಿಷ್ಕರಿಸಿ’ ಎಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಈಗಾಗಲೇ ಈ ಬಗ್ಗೆ ಸರಕಾರಕ್ಕೆ ಮನವಿಯನ್ನು ನೀಡಿದೆ. ಬಿಜೆಪಿಯ ಮುಖಂಡರೇ ಚೀನಾದಿಂದ ಆಮದು ಕಡಿಮೆ ಮಾಡಬೇಕು ಎಂದು ಸರಕಾರಕ್ಕೆ ಕರೆ ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಸರಕಾರದ ಭಾಗವೇ ಆಗಿರುವ ಕೇಂದ್ರ ಸಚಿವ ರಾಮ್‌ದಾಸ್ ಅಠವಳೆ ಅವರು, ಚೀನಾದ ಆಹಾರ ಪದಾರ್ಥಗಳನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ. ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಕರೆ ಈ ದೇಶದಲ್ಲಿ ಮೊಳಗುತ್ತಿರುವುದು ಇಂದು ನಿನ್ನೆಯಲ್ಲ. ಈ ಹಿಂದೆ ಭಾರತದ ವಿರುದ್ಧ ಚೀನಾ ತಕರಾರು ತೆಗೆದಂತೆಲ್ಲ, ‘ಚೀನಾ ವಸ್ತುಗಳನ್ನು ಬಹಿಷ್ಕರಿಸಿ’ ಎಂದು ಬಲಪಂಥೀಯ ಸಂಘಟನೆಗಳು ಬೀದಿಗಿಳಿಯುತ್ತಿದ್ದವು. ಚೀನಾದ ಕುರಿತಂತೆ ಸಂಘಪರಿವಾರಕ್ಕೆ ವೈಯಕ್ತಿಕವಾಗಿಯೇ ಅಸಹನೆಯಿದೆ. ಆ ಅಸಹನೆಯ ಹಿಂದಿರುವುದು ಸೈದ್ಧಾಂತಿಕ ಭಿನ್ನಮತ. ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದಾಗ, ಆರೆಸ್ಸೆಸ್‌ನ ಒತ್ತಡದ ಕಾರಣದಿಂದಲಾದರೂ ಚೀನಾದ ಮೇಲಿನ ಬಹಿಷ್ಕಾರ ಹೆಚ್ಚಬಹುದು, ಹಂತಹಂತವಾಗಿ ಚೀನಾದ ವಸ್ತುಗಳನ್ನು ತಿರಸ್ಕರಿಸಿ, ಭಾರತ ಸ್ವದೇಶಿ ವಸ್ತುಗಳ ಉತ್ಪಾದನೆಗೆ ಒತ್ತು ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು.

ಅಚ್ಚರಿಯ ಬೆಳವಣಿಗೆಯಲ್ಲಿ ಮೋದಿ ಸರಕಾರ, ಭಾರತದ ಸಕಲವನ್ನು ಜಗತ್ತಿಗೆ ಮುಕ್ತವಾಗಿಟ್ಟಿತು. ಇಲ್ಲಿಯ ಚಿಲ್ಲರೆ ವ್ಯಾಪಾರಗಳಿಂದ ಹಿಡಿದು, ರಕ್ಷಣಾ ಇಲಾಖೆಗೆ ಸಂಬಂಧಿಸಿದ ವ್ಯವಹಾರದ ವರೆಗೆ ಎಲ್ಲವನ್ನೂ ವಿದೇಶೀಯರಿಗೆ ತೆರೆದಿಡಲಾಯಿತು. ಲಾಭದಾಯಕವಾಗಿರುವ ಹತ್ತು ಹಲವು ಸ್ವದೇಶಿ ಸಂಸ್ಥೆಗಳು ಮೋದಿ ಆಡಳಿತದಲ್ಲಿ ಮುಚ್ಚಲ್ಪಟ್ಟವು. ಹಿಂದೂಸ್ತಾನ್ ಏರೋನಾಟಿಕ್ಸ್‌ನ್ನು ಸಂಪೂರ್ಣ ಹಾಳುಗೆಡವಿದ ಹೆಗ್ಗಳಿಕೆ ಮೋದಿ ಸರಕಾರಕ್ಕೆ ಸೇರಬೇಕು. ರಫೇಲ್ ಹಗರಣ ಹುಟ್ಟಿದ್ದೇ ಎಚ್‌ಎಎಲ್‌ನ್ನು ಹಾಳುಗೆಡಹುವ ಮೂಲಕ. ಹಲವು ಲಾಭದಾಯಕ ಸಾರ್ವಜನಿಕ ವಲಯಗಳನ್ನು ಸರಕಾರ ಯಾವ ಕರುಣೆಯೂ ಇಲ್ಲದೆ ಖಾಸಗಿಯವರಿಗೆ ಒಪ್ಪಿಸಿತು. ಮೇಕ್ ಇನ್ ಇಂಡಿಯಾ ಬರೇ ಘೋಷಣೆಯಾಗಿಯೇ ಉಳಿಯಿತು. ಇದರ ಜೊತೆಗೇ ನೋಟು ನಿಷೇಧ ಈ ದೇಶದ ಸಣ್ಣ ಪುಟ್ಟ ಉದ್ದಿಮೆಗಳನ್ನು ಸರ್ವನಾಶ ಮಾಡಿದರೆ, ಲಾಕ್‌ಡೌನ್ ಭಾರತದ ಸ್ವದೇಶಿ ಕನಸುಗಳ ಮೇಲೆ ನಡೆದ ಎರಡನೆಯ ಭೀಕರ ದಾಳಿಯಾಗಿದೆ. ಇಂದು ಆರ್ಥಿಕವಾಗಿ ಸಂಪೂರ್ಣವಾಗಿ ನೆಲಕಚ್ಚಿ ಕೂತಿರುವ ಭಾರತ, ಆತ್ಮನಿರ್ಭರತೆಯ ಬಗ್ಗೆ ಮಾತನಾಡುವುದೇ ತಮಾಷೆಯ ವಿಷಯವಾಗಿದೆ. ಕನಿಷ್ಠ ಚೀನಾವನ್ನಾದರೂ ಭಾರತದ ಆರ್ಥಿಕತೆಯಿಂದ ದೂರ ಇಡುವ ಪ್ರಯತ್ನವನ್ನು ಮೋದಿ ನೇತೃತ್ವದ ಸರಕಾರ ಕಳೆದ ಆರು ವರ್ಷಗಳಲ್ಲಿ ಮಾಡಬಹುದಿತ್ತು.

ಆದರೆ, ವಿಪರ್ಯಾಸವೆಂಬಂತೆ ಭಾರತವನ್ನು ಬೆಸೆಯಲೋಸುಗ 3,000 ಕೋಟಿ ರೂಪಾಯಿ ವೆಚ್ಚದಲ್ಲಿ ಮೋದಿ ನಿರ್ಮಿಸಿದ ವಲ್ಲಭಬಾಯಿ ಪಟೇಲ್ ಅವರ ಯುನಿಟಿ ಸ್ಟಾಚ್ಯು ನಿರ್ಮಾಣದ ಹೊಣೆಯನ್ನು ಚೀನಾದ ಕಂಪೆನಿ ವಹಿಸಿಕೊಂಡಿತು. ಈ ಮೂಲಕ ನಾವು ಅರ್ಥಮಾಡಿಕೊಳ್ಳಬೇಕಾದುದು, ‘ಭಾವನಾತ್ಮಕ ರಾಜಕೀಯ’ವೇ ಬೇರೆ. ಅದು ಚುನಾವಣೆಯ ಸಂದರ್ಭಕ್ಕಷ್ಟೇ ಸೀಮಿತ. ದೇಶಗಳ ಗಡಿ ರೇಖೆಗಳು ಮುಖ್ಯವಾಗುವುದು ಈ ಸಂದರ್ಭದಲ್ಲಿ ಮಾತ್ರ. ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ ಗಡಿಗಳಿಲ್ಲ. ಅವರಿಗೆ ಎಲ್ಲ ದೇಶವೂ ಒಂದೆ. ಈ ಕಾರಣದಿಂದಲೇ, ಬಿಜೆಪಿಯೊಳಗಿರುವ ನಾಯಕರೇ ಪಾಕಿಸ್ತಾನದ ಹಲವು ಪ್ರಮುಖ ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಭಾರತದಲ್ಲಿ ನಿರ್ಮಾಣವಾಗುವ ಸಹಸ್ರಾರು ಕೋಟಿಯ ಸುರಂಗ ಮಾರ್ಗದ ಹೊಣೆಗಾರಿಕೆಯನ್ನು ಚೀನಾದ ಕಂಪೆನಿ ವಹಿಸಿಕೊಳ್ಳುತ್ತದೆ. ಗೋಮಾಂಸದ ರಫ್ತಿನಲ್ಲಿ ಬಿಜೆಪಿಯ ನಾಯಕರೇ ಅಗ್ರಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಾರೆ. ಬೃಹತ್ ಉದ್ಯಮಿಗಳಿಗೆ ಧರ್ಮವಿಲ್ಲ ಮಾತ್ರವಲ್ಲ, ದೇಶವೂ ಇಲ್ಲ. ಆದುದರಿಂದ, ಒಂದು ಟಿವಿಯನ್ನೋ, ಹತ್ತು ಮೊಬೈಲ್‌ನ್ನೋ ಪುಡಿ ಮಾಡಿದಾಕ್ಷಣ ಚೀನಾ ವಸ್ತುಗಳನ್ನು ನಿರಾಕರಿಸಿದಂತಾಗುವುದಿಲ್ಲ. ಭಾರತ ತನ್ನ ಆರ್ಥಿಕ ನೀತಿಯನ್ನು ಸಂಪೂರ್ಣ ಬದಲಿಸಿಕೊಳ್ಳದೆ ಚೀನಾ ವಸ್ತುಗಳನ್ನು ನಿರಾಕರಿಸುವುದು ಸಾಧ್ಯವೇ ಇಲ್ಲ. ಇಷ್ಟಕ್ಕೂ ಚೀನಾ ಭಾರತವೊಂದನ್ನೇ ನೆಚ್ಚಿಕೊಂಡಿಲ್ಲ. ತನ್ನ ಒಟ್ಟಾರೆ ರಫ್ತಿನಲ್ಲಿ ಶೇ. 3ರಷ್ಟು ರಫ್ತಿಗೆ ಅದು ಭಾರತವನ್ನು ನಂಬಿಕೊಂಡಿದೆ.

ಚೀನಾದಿಂದ ಭಾರತ ಯಾಕೆ ಅತಿ ಹೆಚ್ಚು ಆಮದು ಮಾಡಿಕೊಳ್ಳುತ್ತದೆಯೆಂದರೆ, ಸಾಗಾಟ ವೆಚ್ಚದಿಂದ ಹಿಡಿದು, ಹಲವು ಲಾಭಗಳು ಇಲ್ಲಿನ ಉದ್ಯಮಿಗಳಿಗಿವೆ. ಆದುದರಿಂದಲೇ ನಾವು ರಫ್ತು ಮಾಡುವುದಕ್ಕಿಂತ, ಹಲವು ಪಟ್ಟು ಹೆಚ್ಚು ಆಮದು ಮಾಡುತ್ತಿದ್ದೇವೆ. ಒಂದು ಮೂಲದ ಪ್ರಕಾರ ನಾವು ಮಾಡುವ ರಫ್ತು, 16.7 ಬಿಲಿಯನ್ ಡಾಲರ್ ಬೆಲೆಯದ್ದಾದರೆ, ಮಾಡುವ ಆಮದು 70.3 ಬಿಲಿಯನ್ ಡಾಲರ್. ಪೇಟಿಎಂ ಸೇರಿದಂತೆ ಭಾರತದ ಸ್ಟಾರ್ಟಪ್‌ಗಳಲ್ಲಿ ಚೈನೀಸ್ ಕಂಪೆನಿಗಳು ಹಲವು ಬಿಲಿಯನ್ ಹೂಡಿಕೆಗಳನ್ನು ಮಾಡಿವೆ. ಯಾವುದೇ ದೇಶ, ವಿದೇಶಿ ವಸ್ತುಗಳನ್ನು ನಿರಾಕರಿಸುವ ಮೊದಲು, ಸ್ವದೇಶಿ ಉತ್ಪನ್ನಗಳ ಅಡಿಗಲ್ಲನ್ನು ಗಟ್ಟಿ ಮಾಡಿಕೊಳ್ಳಬೇಕು. ವಿದೇಶಿ ವಸ್ತುಗಳನ್ನು ಅದರಲ್ಲೂ ಚೀನಾದ ವಸ್ತುಗಳನ್ನು ಸ್ವೀಕರಿಸುವುದಿಲ್ಲ ಎನ್ನುವಾಗ, ಅದಕ್ಕೆ ಪರ್ಯಾಯವಾಗಿ ನಮ್ಮಲ್ಲೇನಿದೆ? ಎನ್ನುವ ಪ್ರಶ್ನೆ ಸೃಷ್ಟಿಯಾಗುತ್ತದೆ. ‘ಗೋ ಕೊರೋನ ಗೋ’ ಎಂದು ಕೊರೋನದ ವಿರುದ್ಧ ಬೀದಿಯಲ್ಲಿ ನಿಂತು ಪ್ರತಿಭಟಿಸಿದ ಕೇಂದ್ರ ಸಚಿವ ಅಠವಳೆ, ಇದೀಗ ಚೀನಾದ ವಿರುದ್ಧ ‘ಗೋ ಚೀನಾ ಗೋ’ ಎಂಬಂತಹ ಹೇಳಿಕೆ ನೀಡಿದ್ದಾರೆ.

ತನ್ನದೇ ಸಮುದಾಯದ ವಿರುದ್ಧ ತನ್ನದೇ ದೇಶದೊಳಗಿರುವ ‘ಸಾಮಾಜಿಕ ಬಹಿಷ್ಕಾರ’ವನ್ನು ಅರ್ಥಮಾಡಿಕೊಳ್ಳಲಾಗದ ಅಠವಳೆ, ಚೀನಾದ ವಿರುದ್ಧ ‘ಆರ್ಥಿಕ ಬಹಿಷ್ಕಾರ’ದ ಮಾತುಗಳನ್ನಾಡಿದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಹೇಗೆ? ಮೋದಿ ಸರಕಾರದ ಆರ್ಥಿಕ ನೀತಿಗಳಿಂದಾಗಿ ಚೀನಾ ವಸ್ತುಗಳ ಸಂಪೂರ್ಣ ಬಹಿಷ್ಕಾರ ಅಸಾಧ್ಯವಾಗಿದೆ. ದೇಶಪ್ರೇಮದ ಹೆಸರಿನಲ್ಲಿ ಚೀನಾವನ್ನು ಬದಿಗಿಟ್ಟು ಬೇರೆ ದೇಶಗಳಿಂದ ದುಬಾರಿ ಬೆಲೆಗೆ ಸರಕು ಕೊಂಡುಕೊಳ್ಳುವ ಶಕ್ತಿಯೂ ಈ ದೇಶಕ್ಕಿಲ್ಲ. ಆದುದರಿಂದ ಸದ್ಯಕ್ಕೆ ಇಂತಹ ಬಹಿಷ್ಕಾರದಿಂದ ನಾವು ಲಡಾಖ್ ವಿವಾದವನ್ನು ಇತ್ಯರ್ಥಗೊಳಿಸುವುದು ಅಸಾಧ್ಯ. ಹೆಚ್ಚೆಂದರೆ ಬೀದಿಗಳಲ್ಲಿ ಯುದ್ಧ ಉನ್ಮಾದಗಳನ್ನಷ್ಟೇ ಸೃಷ್ಟಿಸಬಹುದು. ಸದ್ಯದ ಸಂದರ್ಭದಲ್ಲಿ, ಅನಗತ್ಯ ಹೇಳಿಕೆಗಳನ್ನು ನೀಡಿ ಪರಿಸ್ಥಿತಿಯನ್ನು ಇನ್ನಷ್ಟು ಉದ್ವಿಗ್ನಗೊಳಿಸದಂತೆ ನೋಡಿಕೊಳ್ಳುವುದು ರಾಜಕಾರಣಿಗಳು ಮತ್ತು ಮಾಧ್ಯಮಗಳ ಹೊಣೆಗಾರಿಕೆಯಾಗಿದೆ. ಶುಕ್ರವಾರದ ಸರ್ವಪಕ್ಷ ಸಭೆ ಗಡಿ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಚರ್ಚಿಸಲಿ. ‘ಚೀನಾಕ್ಕೆ ಅವರದೇ ಭಾಷೆಯಲ್ಲಿ ಉತ್ತರಿಸಿ’ ಎಂದು ಸರಕಾರಕ್ಕೆ ವಿರೋಧ ಪಕ್ಷಗಳು ಸಲಹೆ ನೀಡುವುದು ಸುಲಭ. ಆದರೆ ವಾಸ್ತವ ಅಷ್ಟು ಸರಳವಾಗಿಲ್ಲ ಎನ್ನುವುದು ವಿರೋಧ ಪಕ್ಷಗಳಿಗೂ ಚೆನ್ನಾಗಿ ಗೊತ್ತು. ಸರಕಾರವನ್ನು ಮುಜುಗರಕ್ಕೆ ಸಿಲುಕಿಸುವುದಕ್ಕಾಗಿ ಗಡಿಯನ್ನು ಬಳಸದೆ, ಸೈನಿಕರ ಪ್ರಾಣ, ಮಾನ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರಕ್ಕೆ ಸೂಕ್ತ ಮಾರ್ಗದರ್ಶನವನ್ನು ವಿರೋಧಪಕ್ಷಗಳು ನೀಡಬೇಕು. ಇದೇ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿರುವ ಮುತ್ಸದ್ದಿಗಳ ಸಲಹೆಗಳನ್ನು ಸ್ವೀಕರಿಸಲು ಮೋದಿ ಸರಕಾರ ಯಾವ ಕಾರಣಕ್ಕೂ ಸಂಕೋಚ ಪಟ್ಟುಕೊಳ್ಳಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News