ಸಿಎಂ ಯಡಿಯೂರಪ್ಪ ಗೃಹ ಕಚೇರಿಯ ಪೊಲೀಸ್ ಸಿಬ್ಬಂದಿ ಪತಿಗೆ ಕೊರೋನ: ಕಚೇರಿ ಇಂದು ಬಂದ್

Update: 2020-06-19 12:06 GMT

ಬೆಂಗಳೂರು: ಶೇಷಾದ್ರಿಪುರಂನ ಕುಮಾರಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗೃಹ ಕಚೇರಿ `ಕೃಷ್ಣಾ'ದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಕಾನ್‍ ಸ್ಟೇಬಲ್ ಒಬ್ಬರ ಪತಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗೃಹ ಕಚೇರಿಯನ್ನು ಒಂದು ದಿನದ ಮಟ್ಟಿಗೆ ಶುಕ್ರವಾರ ಮುಚ್ಚಲಾಗಿದೆ.

ಬಿಬಿಎಂಪಿ ಸಿಬ್ಬಂದಿ ಇಡೀ ಕಟ್ಟಡವನ್ನು ಸ್ಯಾನಿಟೈಸ್ ಮಾಡಿದ್ದಾರೆಂದು ಬಿಬಿಎಂಪಿ ಆಯಕ್ತ ಬಿ. ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ

ಇಂದಿನ ದಿನ ಸಿಎಂ ಅವರ ಗೃಹ ಕಚೇರಿಯಲ್ಲಿ ನಿಗದಿಯಾಗಿದ್ದ ಎಲ್ಲಾ ಪ್ರಮುಖ ಸಭೆಗಳನ್ನು ವಿಧಾನಸೌಧದ ಕಚೇರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಅದೇ ರಸ್ತೆಯಲ್ಲಿರುವ `ಕಾವೇರಿ' ನಿವಾಸದಲ್ಲಿ ಇರುವುದರಿಂದ ಅವರಿಗೆ ಯಾವುದೇ ಸಮಸ್ಯೆಯಿಲ್ಲ, ಕಚೇರಿಯ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಪಲ್ಸ್ ಒಕ್ಸಿಮೀಟರ್ ಬಳಸಿ ಆಗಾಗ ಆರೋಗ್ಯ ತಪಾಸಣೆ ಹಾಗೂ ಥರ್ಮಲ್ ಸ್ಕ್ರೀನಿಂಗ್‍ ಗೂ ಅವರನ್ನು ಒಳಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉದ್ಯೋಗಿಯೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಿಕಾಸ ಸೌಧ ಕಟ್ಟಡವನ್ನು ಮಂಗಳವಾರ ಮುಚ್ಚಲಾಗಿತ್ತು. ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಉದ್ಯೋಗಿಗಳೂ ಮನೆಯಿಂದಲೇ ಕೆಲಸ ಮಾಡುವಂತೆ ಸರಕಾರ ಇಂದು ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News