702 ಕೋಟಿ ರೂ. ಅವ್ಯವಹಾರ ಆರೋಪ: ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ ಎಸಿಬಿ

Update: 2020-06-19 12:33 GMT

ಬೆಂಗಳೂರು, ಜೂ19: ಕೊಳವೆ ಬಾವಿ ಮತ್ತು ನೀರು ಶುದ್ಧೀಕರಣ ಘಟಕಗಳ ನಿರ್ಮಾಣ ಕಾಮಗಾರಿಯಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಎಸಿಬಿ ಪೊಲೀಸರು ಬಿಬಿಎಂಪಿಯ ಐದು ವಲಯಗಳ ಹಿಂದಿನ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಹಾಗೂ ಕಾರ್ಯಪಾಲಕ ಅಭಿಯಂತರರ ವಿರುದ್ಧ ಎಫ್‍ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

2016-17ರಿಂದ 2019ರ ಅವಧಿಯಲ್ಲಿ ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ ಮತ್ತು ದಾಸರಹಳ್ಳಿ ವಲಯಗಳಲ್ಲಿ ಕೊಳವೆ ಬಾವಿ ಮತ್ತು ಆರ್.ಒ ಘಟಕಗಳ ನಿರ್ಮಾಣದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರು.

ಈ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 702 ಕೋಟಿ ರೂ.ಗಳ ಬೃಹತ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಎಸಿಬಿಗೆ ಸೂಚನೆ ನೀಡಿದ್ದರು.

ಐದು ವಲಯಗಳ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಉದ್ದೇಶದಿಂದ 9,588 ಕೊಳವೆ ಬಾವಿ ಹಾಗೂ 976 ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಬಿಬಿಎಂಪಿ ಅನುಮೋದನೆ ನೀಡಿತ್ತು. ಕೊಳವೆ ಬಾವಿ ಮತ್ತು ಆರ್.ಒ ಘಟಕ ನಿರ್ಮಾಣಕ್ಕೆ 702 ಕೋಟಿ ರೂ. ಮೀಸಲಿರಿಸಲಾಗಿತ್ತು. ಆದರೆ, ಐದು ವಲಯಗಳ ಜಂಟಿ ಆಯುಕ್ತರುಗಳು, ಮುಖ್ಯ ಅಭಿಯಂತರರು ಹಾಗೂ ಕಾರ್ಯಪಾಲಕ ಅಭಿಯಂತರರು ಈ ಕಾಮಗಾರಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅನುದಾನದ ಶೇ.20ರಷ್ಟು ಹಣ ಮಾತ್ರ ಬಳಕೆ ಮಾಡಿ ಉಳಿದ ಕೋಟ್ಯಂತರ ರೂ.ಗಳನ್ನು ಗುಳುಂ ಮಾಡಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದರು.

ಈ ಅವ್ಯವಹಾರ ಕುರಿತಂತೆ ಸಮಗ್ರ ತನಿಖೆ ನಡೆಸಿರುವ ಎಸಿಬಿ ಪೊಲೀಸರು ಐದು ವಲಯಗಳ ಹಿಂದಿನ ಜಂಟಿ ಆಯುಕ್ತರು, ಸಿಇ ಮತ್ತು ಇಇಗಳು ಸೇರಿದಂತೆ ಗುತ್ತಿಗೆದಾರರ ವಿರುದ್ಧ ಎಫ್‍ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News