ವಿಶ್ವನಾಥ್ ಎಂಬ ಬಳಸಿ ಎಸೆದ ಬಾಳೆಯೆಲೆ

Update: 2020-06-20 04:59 GMT

ಬಿಜೆಪಿಯ ಪಂಜರದೊಳಗಿಂದ ರೆಕ್ಕೆ ಹರಿದ ಹಳ್ಳಿ ಹಕ್ಕಿಯ ಆರ್ತನಾದ ಕೇಳ ತೊಡಗಿದೆ. ತನ್ನನ್ನು ತಾನು ಅಹಿಂದ ನಾಯಕನೆಂದು ಕರೆದುಕೊಳ್ಳುತ್ತಾ ರಾಜಕೀಯದಲ್ಲಿ ಉತ್ಕರ್ಷ ಕಂಡು, ಬಳಿಕ ಅಧಿಕಾರ ಹಣ ಇತ್ಯಾದಿಗಳ ಬೆನ್ನು ಹತ್ತಿ ಸಿದ್ಧಾಂತಕ್ಕೆ ಎಳ್ಳು ನೀರು ಬಿಟ್ಟು ಬಿಜೆಪಿ ಸೇರಿದ ವಿಶ್ವನಾಥ್ ಅವರಿಗೆ ಏನಾಗಿದೆಯೋ ಅದು ಅನಿರೀಕ್ಷಿತವಂತೂ ಖಂಡಿತಾ ಅಲ್ಲ. ಕಾಂಗ್ರೆಸ್, ಜೆಡಿಎಸ್‌ನೊಳಗೇ ಹೆಚ್ಚು ಕಾಲ ಬಾಳದ ವಿಶ್ವನಾಥ್ ಅವರು ಬಿಜೆಪಿಯೊಳಗೆ ಇನ್ನೂ ಉಸಿರಾಡುತ್ತಿರುವುದು ಅವರಿಗೆ ಸೇರುವುದಕ್ಕೆ ಯಾವುದೇ ಹೊಸ ಪಕ್ಷ ಇಲ್ಲ ಎನ್ನುವ ಕಾರಣಕ್ಕಾಗಿ. ಇಲ್ಲವಾದರೆ ಈಗಾಗಲೇ ಬಿಜೆಪಿಯನ್ನು ತೊರೆದು ಇನ್ನೊಂದು ಪಕ್ಷ ಸೇರಿ, ಆರೆಸ್ಸೆಸ್ ವಿರುದ್ಧ ಹೇಳಿಕೆ ನೀಡುತ್ತಾ ಓಡಾಡುತ್ತಿದ್ದರು.

ಸದ್ಯಕ್ಕೆ ವಿಧಾನಪರಿಷತ್ ಸದಸ್ಯ ಸ್ಥಾನದಿಂದಲೂ ವಿಶ್ವನಾಥ್ ಅವರ ಹೆಸರು ಕೈ ಬಿಡಲಾಗಿದೆ. ಮುಂದಕ್ಕೆ ಬಿಜೆಪಿ ಕೊಟ್ಟದ್ದನ್ನೇ ಪ್ರಸಾದ ಎಂದು ಸ್ವೀಕರಿಸಿ, ಉಳಿದ ರಾಜಕೀಯ ಬದುಕನ್ನು ಕಳೆಯಬೇಕಾದ ಅನಿವಾರ್ಯ ಸ್ಥಿತಿಗೆ ಅವರು ತಲುಪಿದ್ದಾರೆ. ಈಗಾಗಲೇ ಬಿಜೆಪಿಯ ವರಿಷ್ಠರು ಹೊಸ ಮುಖಗಳ ಆದ್ಯತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಆರೆಸ್ಸೆಸ್‌ನ ಒಳಮನೆಯಲ್ಲಿ ಯಡಿಯೂರಪ್ಪರನ್ನೇ ಬದಿಗಿಡುವ ಸಂಚು ನಡೆಯುತ್ತಿರುವ ಹೊತ್ತಿನಲ್ಲಿ, ಸುಪ್ರೀಂಕೋರ್ಟ್‌ನಿಂದಲೂ, ಮತದಾರರ ಕೋರ್ಟಿನಿಂದಲೂ ‘ಅನರ್ಹ ಶಾಸಕ’ ಎಂದು ಹಣೆಯಲ್ಲಿ ಹಚ್ಚೆ ಹಾಕಿಸಿಕೊಂಡಿರುವ ವಿಶ್ವನಾಥ್ ಅವರಿಗೆ ಬಿಜೆಪಿ ಕರೆದು, ಅಧಿಕಾರ ನೀಡುವುದು ದೂರದ ಮಾತು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಪತನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಎಚ್.ವಿಶ್ವನಾಥ್ ಅವರೂ ಒಬ್ಬರು ಎನ್ನುವುದರಲ್ಲಿ ಎರಡು ಮಾತಿಲ್ಲ. ಮೂಲತಃ ಬಂಡಾಯ ಮನಸ್ಥಿತಿಯನ್ನು ಹೊಂದಿರುವ ವಿಶ್ವನಾಥ್, ಜೆಡಿಎಸ್‌ನೊಳಗಿನ ಕುಟುಂಬ ರಾಜಕೀಯಕ್ಕೆ ಬಹುಕಾಲ ತಲೆಬಾಗುವುದು ಸಾಧ್ಯವೂ ಇರಲಿಲ್ಲ. ಜೆಡಿಎಸ್‌ನ ಮುನ್ನೆಲೆಯಲ್ಲಿ ದೇವೇಗೌಡರಿದ್ದರೂ, ಅದರ ಸಂಪೂರ್ಣ ನಿಯಂತ್ರಣ ಅವರ ಮಕ್ಕಳ ಕೈಯಲ್ಲೇ ಇತ್ತು. ದೇವೇಗೌಡರು ಸದಾ ವಿಶ್ವನಾಥರ ಬೆನ್ನು ಸವರಿ ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತಿದ್ದರಾದರೂ, ಪಕ್ಷದೊಳಗೆ ತನ್ನ ಹಿಡಿತವನ್ನು ಹೆಚ್ಚಿಸುವ ವಿಶ್ವನಾಥರ ಪ್ರಯತ್ನ ಸಫಲವಾಗುತ್ತಿರಲಿಲ್ಲ. ಪದೇ ಪದೇ ಕಿರಿಯರ ಮುಂದೆ ಮುಜುಗರ ಅನುಭವಿಸುವುದು ವಿಶ್ವನಾಥರಿಗೆ ಕಿರಿಕಿರಿ ಎನಿಸುತ್ತಿತ್ತು.

ಜೆಡಿಎಸ್‌ನೊಳಗೆ ವಿಶ್ವನಾಥ್ ಅವರ ಭಿನ್ನಮತಕ್ಕೆ ಕಾರಣವಾದ ಅಂಶ ತೀರಾ ವೈಯಕ್ತಿಕವಾದುದು. ಸಿದ್ಧಾಂತವನ್ನು ಮುಂದಿಟ್ಟುಕೊಂಡು ಅವರು ಜೆಡಿಎಸ್‌ನೊಳಗೆ ಭಿನ್ನಮತವನ್ನು ತಾಳಿದವರಾದರೆ, ಭ್ರಷ್ಟ ಮತ್ತು ಬ್ರಾಹ್ಮಣ್ಯದ ಪ್ರತಿಪಾದಕ ಬಿಜೆಪಿಯ ಹಿಂದೆ ಹೋಗುತ್ತಲೇ ಇರಲಿಲ್ಲ. ತನ್ನ ವೈಯಕ್ತಿಕ ವರ್ಚಸ್ಸಿಗೆ, ಸ್ವಾರ್ಥಕ್ಕೆ ಧಕ್ಕೆಯಾಯಿತು ಎನ್ನುವ ಒಂದು ಕಾರಣ ಬಿಟ್ಟರೆ, ಸರಕಾರವನ್ನು ಉರುಳಿಸಲು ವಿಶ್ವನಾಥ್ ಬಳಿ ಯಾವ ಸಮರ್ಥನೆಯೂ ಇದ್ದಿರಲಿಲ್ಲ. ಸಿದ್ದರಾಮಯ್ಯ ಜೊತೆಗಿನ ಹಳೆಯ ಹಗೆತನವೂ ಮೈತ್ರಿ ಸರಕಾರದ ಕುರಿತಂತೆ ಅವರ ಅಸಹನೆಯನ್ನು ಹೆಚ್ಚಿಸಿತ್ತು. ಅಂತಿಮವಾಗಿ, ಯಾರದೋ ಮೇಲಿನ ಸಿಟ್ಟಿಗೆ ವಿಶ್ವನಾಥ್ ತನ್ನ ಮೂಗನ್ನು ಕುಯ್ದುಕೊಂಡರು. ಬಿಜೆಪಿಗೆ ಅಧಿಕಾರ ಸಿಕ್ಕಿತು. ಆದರೆ ಕಳೆದುಕೊಂಡ ಮೂಗನ್ನು ಮತ್ತೆ ಜೋಡಿಸುವ ಶಸ್ತ್ರಕ್ರಿಯೆ ಸಂಪೂರ್ಣ ವಿಫಲವಾಯಿತು. ಇಂದು ವಿಶ್ವನಾಥ್ ಅವರ ರಾಜಕೀಯ ಬದುಕಿಗೆ ಮೂಗೇ ಇಲ್ಲದ ಸ್ಥಿತಿಯಾಗಿದೆ.

ವಿಶ್ವನಾಥ್ ಅವರು ಬರೇ ಹಣಬಲದಿಂದ ರೂಪುಗೊಂಡ ಮಾಮೂಲಿ ರಾಜಕಾರಣಿಯಾಗಿದ್ದಿದ್ದರೆ ಇಲ್ಲಿ ಅವರ ಬಗ್ಗೆ ಚರ್ಚೆ ನಡೆಸುವ ಅಗತ್ಯವೇ ಇದ್ದಿರಲಿಲ್ಲ. ಅವರು ಒಂದು ಸಿದ್ಧಾಂತದ ಜೊತೆಗೆ ತನ್ನ ರಾಜಕೀಯ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬಂದವರು. ಆಳದಲ್ಲಿ ಸಂವೇದನಾ ಶೀಲರೂ ಹೌದು. ಹಿಂದುಳಿದ ವರ್ಗದ ಧ್ವನಿಯಾಗಲು ಹವಣಿಸಿದವರು. ಒಂದು ಕಾಲದಲ್ಲಿ, ಸಿದ್ದರಾಮಯ್ಯರ ಜೊತೆಗೆ ನಿಂತು ‘ಅಹಿಂದ’ ರಾಜಕೀಯ ಚಳವಳಿಯೊಂದನ್ನು ಕಟ್ಟಿದವರು.ಶೋಷಿತ ಸಮುದಾಯದಿಂದ ಬಂದ ವಿಶ್ವನಾಥ್ ಕುರಿತಂತೆ ಸಮಾಜಕ್ಕೆ ಬಹುದೊಡ್ಡ ನಿರೀಕ್ಷೆಯಿತ್ತು. ಸಿದ್ದರಾಮಯ್ಯ ಅವರ ಜೊತೆಗೆ ಭಿನ್ನಮತ ಸೃಷ್ಟಿಯಾಯಿತೆಂಬ ಒಂದೇ ಕಾರಣಕ್ಕಾಗಿ, ತನ್ನ ಸಿದ್ಧಾಂತದಿಂದ ಹಿಂದೆ ಸರಿಯುವ ಅನಿವಾರ್ಯತೆಯೇನೂ ಅವರಿಗಿರಲಿಲ್ಲ. ಜೆಡಿಎಸ್‌ನಲ್ಲಿ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಮುಂದಕ್ಕೆ ಹೆಜ್ಜೆಯಿಡುವ ಅವಕಾಶ ಅವರಿಗಿತ್ತು. ಆದರೆ ಅವರು ತನ್ನ ಸಿದ್ಧಾಂತ, ವರ್ಚಸ್ಸೆಲ್ಲವನ್ನು ಬಿಜೆಪಿಗೆ ಅತಿ ಕಡಿಮೆ ದರಕ್ಕೆ ಮಾರಾಟ ಮಾಡಿದರು. ಆಪರೇಶನ್ ಕಮಲಕ್ಕೆ ಬಲಿಯಾಗಿ ಬಿಜೆಪಿ ಸೇರುವ ಮೂಲಕ ಧಕ್ಕೆಯಾಗಿದ್ದು ವಿಶ್ವನಾಥ್ ಅವರ ವರ್ಚಸ್ಸಿಗೆ ಮಾತ್ರವಲ್ಲ, ಅಹಿಂದ ಚಳವಳಿಯ ಮೇಲೂ ಅದು ಪರಿಣಾಮ ಬೀರಿದೆ. ಜನರ ನಡುವೆ ಅಹಿಂದ ಚಳವಳಿ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ.
     

 ಬಿಜೆಪಿ ಸೇರಿದ ಶೋಷಿತ ಸಮುದಾಯದ ನಾಯಕರ ಸ್ಥಿತಿ ಆನಂತರ ಏನಾಯಿತು ಎನ್ನುವುದರ ವಿವರ ವಿಶ್ವನಾಥ್ ಅವರಿಗೆ ಗೊತ್ತಿಲ್ಲದೇ ಇಲ್ಲ. ಜಾತ್ಯತೀತವಾದ ಅಂಶಗಳನ್ನು ಇನ್ನೂ ಅಲ್ಪಸ್ವಲ್ಪ ಉಳಿಸಿಕೊಂಡ ಕಾಂಗ್ರೆಸ್, ಜೆಡಿಎಸ್‌ನಲ್ಲೇ ಅವರಿಗೆ ಉಸಿರಾಡುವುದು ಕಷ್ಟವಾಗಿತ್ತು. ಹೀಗಿರುವಾಗ, ಬಿಜೆಪಿ ತನಗೆ ಸೂಕ್ತವಾದ ವಾತಾವರಣ ಇರುವ ಸ್ಥಳವೆಂದು ವಿಶ್ವನಾಥ್ ಹೇಗೆ ಭಾವಿಸಿದರು? ಆರೆಸ್ಸೆಸ್ ಎಂಬ ಹೈಕಮಾಂಡ್‌ನ ನಿಯಂತ್ರಣದಲ್ಲಿರುವ ಬಿಜೆಪಿ ವಿಶ್ವನಾಥ್ ಅವರ ಸೈದ್ಧಾಂತಿಕ ಹಿನ್ನೆಲೆಯನ್ನು ಹೇಗೆ ಸಹಿಸಲು ಸಾಧ್ಯ? ಒಂದು ವೇಳೆ ವಿಶ್ವನಾಥ್ ಅವರನ್ನು ಪಕ್ಷದೊಳಗೆ ಬೆಳೆಸಿದರೆ ಅವರೇ ಪಕ್ಷಕ್ಕೆ ಮುಳ್ಳಾಗಬಹುದು ಎನ್ನುವ ಭಯ ಆರೆಸ್ಸೆಸ್‌ನೊಳಗಿರುವ ನಾಯಕರಿಗೂ ಇದೆ. ಈಶ್ವರಪ್ಪ ಅವರು ಈಗಾಗಲೇ ಹಿಂದುಳಿದ ವರ್ಗಗಳನ್ನು ಸಂಘಟಿಸುವ ಪ್ರಯತ್ನವನ್ನು ಬಿಜೆಪಿಯೊಳಗೆ ಮಾಡಿದ್ದಾರೆ. ಅದೇ ಕೆಲಸವನ್ನು ವಿಶ್ವನಾಥ್ ಕೂಡ ಮಾಡಲು ಆರಂಭಿಸಿದರೆ ಬಿಜೆಪಿಯ ‘ಹಿಂದುತ್ವ’ದ ಗತಿಯೇನು? ಇಷ್ಟಕ್ಕೂ ವಿಶ್ವನಾಥ್ ಅವರು ಯಡಿಯೂರಪ್ಪರಿಗೆ ನಿಷ್ಠರೇ ಹೊರತು, ಆರೆಸ್ಸೆಸ್ ಮತ್ತು ಬಿಜೆಪಿಗೆ ನಿಷ್ಠರಾಗಿ ಬಂದವರಲ್ಲ. ಮೇಲಿನೆಲ್ಲ ಕಾರಣದಿಂದಲೇ, ವಿಧಾನಸಭಾ ಚುನಾವಣೆಯಲ್ಲಿ ವಿಶ್ವನಾಥ್ ಅವರನ್ನು ಸೋಲಿಸಲು ಬಿಜೆಪಿಯೊಳಗಿರುವ ನಾಯಕರೇ ಕೆಲಸ ಮಾಡಿದ್ದಾರೆ. ಉಳಿದ ಅನರ್ಹ ಶಾಸಕರಿಗೆ ಸಿಕ್ಕಿರುವ ವಿನಾಯಿತಿ ಬಿಜೆಪಿಯೊಳಗೆ ವಿಶ್ವನಾಥ್ ಅವರಿಗೆ ಸಿಗುತ್ತಿಲ್ಲ. ಪಕ್ಷದೊಳಗೆ ಯಡಿಯೂರಪ್ಪ ಅವರ ವಿರುದ್ಧ ಆರೆಸ್ಸೆಸ್‌ನ ಮುಖಂಡರೂ ಆಗಿರುವ ಸಂತೋಷ್ ಒಳಗೊಳಗೆ ಸಂಚು ಹೂಡುತ್ತಿರುವುದರಿಂದ, ವಿಶ್ವನಾಥ್ ಪರವಾಗಿ ಬಲವಾಗಿ ನಿಲ್ಲುವಲ್ಲಿ ಯಡಿಯೂರಪ್ಪ ಅವರಿಗೆ ಸಾಧ್ಯವಾಗಿಲ್ಲ. ತನಗೆ ಅರ್ಹ ಅಧಿಕಾರ ನೀಡಲಿಲ್ಲ ಎಂದು ಬಿಜೆಪಿಯ ವಿರುದ್ಧ ಯಾವುದೇ ಆರೋಪ ಮಾಡುವ ನೈತಿಕತೆಯೂ ವಿಶ್ವನಾಥ್ ಅವರಿಗಿಲ್ಲ. ಎಲ್ಲ ಸಾಮಾಜಿಕ ಬದ್ಧತೆಗಳನ್ನು ಕಸದ ಬುಟ್ಟಿಗೆ ಎಸೆದು ಬಿಜೆಪಿ ಸೇರಿದ ವಿಶ್ವನಾಥ್ ಅವರು ಇದೀಗ ಬಿಜೆಪಿಯಿಂದ ಬದ್ಧತೆಯನ್ನು ನಿರೀಕ್ಷಿಸುವುದೇ ಹಾಸ್ಯಾಸ್ಪದ. ಆಪರೇಷನ್ ಕಮಲ ಎನ್ನುವುದೇ ಅನೈತಿಕ. ಜೆಡಿಎಸ್‌ಗೆ ವಿಶ್ವನಾಥ್ ವಂಚಿಸಬಹುದಾದರೆ, ವಿಶ್ವನಾಥ್‌ಗೆ ಸಂದರ್ಭ ಬಂದಾಗ ಬಿಜೆಪಿ ಯಾಕೆ ವಂಚಿಸಬಾರದು? ಸುಪ್ರೀಂಕೋರ್ಟ್‌ನಿಂದ ಅನರ್ಹರೆಂದು ಘೋಷಿತರಾಗಿ, ಚುನಾವಣೆಯಲ್ಲೂ ಮತದಾರರಿಂದ ತಿರಸ್ಕೃತರಾಗಿರುವ ವಿಶ್ವನಾಥ್ ಅವರಿಗೆ ಬಿಜೆಪಿ ಈಗ ನೀಡಿರುವ ಸಣ್ಣ ಸ್ಥಾನವೇ ಯಡಿಯೂರಪ್ಪ ಅವರ ಕೃಪೆಯಿಂದ ದೊರಕಿರುವುದು. ವಿಶ್ವನಾಥ್ ಸದ್ಯಕ್ಕೆ ಅದರಲ್ಲೇ ತೃಪ್ತಿ ಪಡಬೇಕಾಗಿದೆ. ತಾನೇ ಬೇಡಿ ಪಡೆದುಕೊಂಡ ಅವಮಾನವಿದು. ಇದಕ್ಕಾಗಿ ವಿಶ್ವನಾಥ್ ಅವರು ತಮ್ಮನ್ನು ತಾವೇ ದೂಷಿಸಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News