ದೇಶದ ಗಡಿಯಲ್ಲಷ್ಟೇ ಅಲ್ಲ, ಒಳಗೂ ಆತಂಕದ ಸ್ಥಿತಿ

Update: 2020-06-21 19:30 GMT

ಗಡಿಭಾಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತಂತೆ ದೇಶ ಆತಂಕ ಪಡುತ್ತಿದೆ. ನಮ್ಮ 20ಕ್ಕೂ ಅಧಿಕ ಯೋಧರು ಚೀನಾ ಸೈನಿಕರ ಜೊತೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾಗಿದ್ದಾರೆ. ಆದರೆ ಅವರ ತ್ಯಾಗ, ಬಲಿದಾನ ಯಾವ ಕಾರಣಕ್ಕಾಗಿ ನಡೆಯಿತು ಎನ್ನುವುದನ್ನು ವಿವರಿಸಲು ದೇಶದ ಪ್ರಧಾನಿಯವರು ಸಂಪೂರ್ಣ ವಿಫಲರಾಗಿದ್ದಾರೆ. ಗಡಿಭಾಗದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತಂತೆ ಅವರ ಅಸ್ಪಷ್ಟ ಹೇಳಿಕೆಗಳು ನಮ್ಮ ಶತ್ರು ರಾಷ್ಟ್ರಕ್ಕೆ ಪೂರಕವಾಗಿವೆ ಮಾತ್ರವಲ್ಲ, ಭಾರತ ಮುಜುಗರ ಅನುಭವಿಸುವಂತಿದೆ. ಮಾಜಿ ರಕ್ಷಣಾ ಮುಖ್ಯಸ್ಥರೂ ಸೇರಿದಂತೆ ಹಲವು ನಾಯಕರು ಅವರ ಹೇಳಿಕೆಗೆ ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ, ದೇಶದ ಗಡಿಯ ಒಳಗೂ ಯಾವುದೂ ತೃಪ್ತಿಕರವಾಗಿಲ್ಲ ಎನ್ನುವಂತಹ ಬೆಳವಣಿಗೆಗಳು ನಡೆಯುತ್ತಿವೆ. ಈ ದೇಶದ ಹಿತಾಸಕ್ತಿಗಾಗಿ ಧ್ವನಿಯೆತ್ತಿದ್ದ ಚಿಂತಕರು, ಹೋರಾಟಗಾರರು ದೇಶದ್ರೋಹಿಗಳಾಗಿ ಜೈಲು ಸೇರುತ್ತಿದ್ದರೆ, ಹಿಜ್ಬುಲ್ ಮುಜಾಹಿದೀನ್ ಉಗ್ರರ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಂಡಿದ್ದ ಶಂಕಿತ ಉಗ್ರನೊಬ್ಬನಿಗೆ ಪೊಲೀಸರ ವೈಫಲ್ಯದಿಂದಾಗಿ ನ್ಯಾಯಾಲಯ ಜಾಮೀನು ನೀಡಿದೆ. ‘ಮೋದಿಯ ಕೈಯಲ್ಲಿ ದೇಶ ಸುರಕ್ಷಿತವಾಗಿದೆ’ ಎಂದಾದರೆ, ಗಡಿಯಲ್ಲಿ ಚೀನಾ, ನೇಪಾಳ, ಪಾಕಿಸ್ತಾನದ ಸೈನಿಕರು ಯಾಕೆ ವಿಜೃಂಭಿಸುತ್ತಿದ್ದಾರೆ? ಇದೇ ಸಂದರ್ಭದಲ್ಲಿ ಈ ದೇಶದ ಸಂಸತ್ತಿನ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಗಲ್ಲಿಗೇರಿದ ಅಫ್ಝಲ್‌ಗುರುವಿನೊಂದಿಗೇ ನೇರ ಸಂಬಂಧವನ್ನು ಹೊಂದಿದ್ದಾನೆ ಎಂದು ಶಂಕಿತನಾಗಿರುವ ಮಾಜಿ ಪೊಲೀಸ್ ಅಧಿಕಾರಿ ದವೀಂದರ್ ಸಿಂಗ್‌ಗೆ ಇಷ್ಟು ಸುಲಭದಲ್ಲಿ ಹೇಗೆ ಜಾಮೀನು ಸಿಗುತ್ತದೆ? ಎಂದು ದೇಶದ ಜನರು ಬಹಿರಂಗವಾಗಿಯೇ ಸರಕಾರವನ್ನು ಪ್ರಶ್ನಿಸತೊಡಗಿದ್ದಾರೆ.

ಪುಲ್ವಾಮದಲ್ಲಿ ಉಗ್ರನೊಬ್ಬ ಈ ದೇಶದ 40ಕ್ಕೂ ಅಧಿಕ ಜವಾನರನ್ನು ಸ್ಫೋಟಿಸಿ ಬರ್ಬರವಾಗಿ ಕೊಲೆಗೈದ. ಇದರ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಆರೋಪಿಸಿದ ಸರಕಾರ, ‘ಸರ್ಜಿಕಲ್ ಸ್ಟ್ರೈಕ್’ ಪ್ರಹಸನವನ್ನು ಹಮ್ಮಿಕೊಂಡು ಗಡಿಭಾಗದಲ್ಲಿ ಭಾರೀ ಪ್ರಮಾಣದ ಉದ್ವಿಗ್ನತೆಯನ್ನು ಸೃಷ್ಟಿಸಿತು. ‘ಪುಲ್ವಾಮದಲ್ಲಿ ಉಗ್ರನ ದಾಳಿಗೆ ಬಲಿಯಾದ ಸೈನಿಕರಿಗಾಗಿ ಸರ್ಜಿಕಲ್ ಸ್ಟ್ರೈಕ್ ಮೂಲಕ ಭಾರೀ ಪ್ರಮಾಣದ ಉಗ್ರರನ್ನು ಕೊಂದು ಹಾಕಲಾಯಿತು’ ಎಂದು ಸರಕಾರ ದೇಶದ ಜನರನ್ನು ಸಮಾಧಾನಿಸಿತು. ಆದರೆ ಇದೇ ಸಂದರ್ಭದಲ್ಲಿ, ಪೊಲೀಸ್ ಇಲಾಖೆಯೊಳಗೇ ಖಾಕಿ ವೇಷದಲ್ಲಿದ್ದು ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿಗಳೊಂದಿಗೆ ಸಂಪರ್ಕವನ್ನು ಹೊಂದಿದ್ದ, ಉಗ್ರರ ಜೊತೆಗಿರುವಾಗಲೇ ಬಂಧನಕ್ಕೊಳಗಾಗಿದ್ದ ದವೀಂದರ್ ಸಿಂಗ್‌ಗೆ ಜಾಮೀನು ಸಿಗದಂತೆ ನೋಡಿಕೊಳ್ಳುವಲ್ಲಿಯೂ ಸರಕಾರ ವಿಫಲವಾಯಿತು. ಈತನಿಗೆ ಜಾಮೀನು ಸಿಗುವಲ್ಲಿ ಪೊಲೀಸರು ಪರೋಕ್ಷವಾಗಿ ಸಹಕರಿಸಿದ್ದರು. ನಿಯಮದಂತೆ 90 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸುವಲ್ಲಿ ಪೊಲೀಸರಿಗೆ ಸಾಧ್ಯವಾಗದ ಕಾರಣದಿಂದ, ಉಗ್ರರೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾಗಿರುವ ಡಿಎಸ್‌ಪಿ ದರ್ಜೆಯ ಪೊಲೀಸ್ ಅಧಿಕಾರಿಗೆ ನ್ಯಾಯಾಲಯ ಅನಿವಾರ್ಯವಾಗಿ ಜಾಮೀನು ನೀಡಿದೆ.

ಇಷ್ಟಕ್ಕೂ ದವೀಂದರ್ ಸಿಂಗ್ ಉಗ್ರರೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಆರೋಪಗಳಿರುವುದು ಇಂದು ನಿನ್ನೆಯಲ್ಲ. ಈ ದೇಶದ ಸಂಸತ್ ದಾಳಿ ಪ್ರಕರಣದಲ್ಲಿಯೂ ದವೀಂದರ್ ಸಿಂಗ್‌ನ ಹೆಸರು ಕೇಳಿ ಬಂದಿದೆ. ಗಲ್ಲಿಗೇರಿಸಲ್ಪಟ್ಟ ಅಫ್ಝಲ್‌ಗುರು, ಈ ಅಧಿಕಾರಿಯ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿಗಳನ್ನು ನೀಡಿದ್ದಾನೆ, ಲಿಖಿತ ಹೇಳಿಕೆಗಳನ್ನೂ ಕೊಟ್ಟಿದ್ದಾನೆ. ಮಾಧ್ಯಮಗಳಲ್ಲೂ ಈತನ ಹೆಸರನ್ನು ಬಹಿರಂಗಪಡಿಸಿದ್ದಾನೆ. ಸಂಸತ್‌ನ ಮೇಲೆ ದಾಳಿ ನಡೆಸುವುದಕ್ಕೆ ಕೆಲವು ಸಮಯ ಮುಂಚೆ, ತನಗೆ ಕೆಲವು ಯುವಕರು ಬೇಕು ಎಂದು ಅಫ್ಝಲ್‌ಗುರುವಿಗೆ ಬೇಡಿಕೆಯಿಟ್ಟಿರುವುದೇ ಈತ. ಸಂಸತ್‌ನ ಮೇಲೆ ನಡೆದ ದಾಳಿಯಲ್ಲಿ ದವೀಂದರ್ ಸಿಂಗ್ ಕೈವಾಡವಿದೆ ಎನ್ನುವುದು ಬಹಿರಂಗವಾದರೂ ಈತನ ಮೇಲೆ ಸರಕಾರ ವಿಶೇಷ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಆತನಿಗೆ ಸಿಕ್ಕಿದ್ದು ವರ್ಗಾವಣೆಯ ಶಿಕ್ಷೆ. ಬಳಿಕ, ಜಮ್ಮು ಕಾಶ್ಮೀರದ ಗುಪ್ತಚರ ಇಲಾಖೆಗೆ ಈತನನ್ನು ರವಾನಿಸಲಾಯಿತು.

ಸಂಸತ್‌ನ ಮೇಲಿನ ದಾಳಿಯನ್ನು ಸರಕಾರ ಅದೆಷ್ಟು ಹಗುರವಾಗಿ ತೆಗೆದುಕೊಂಡಿತು ಎನ್ನುವುದನ್ನು ಇದು ತಿಳಿಸುತ್ತದೆ. ಸರಕಾರಕ್ಕೆ ಸಂಸತ್ ದಾಳಿಗೆ ಸಂಬಂಧಿಸಿ ಒಂದು ನಿರ್ದಿಷ್ಟ ಸಮುದಾಯದ ಹೆಸರಷ್ಟೇ ಬೇಕಾಗಿತ್ತು. ದಾಳಿಯ ಹಿಂದಿರುವ ರೂವಾರಿಗಳು ಬೇಕಾಗಿರಲಿಲ್ಲ. ಇಂತಹ ಶಕ್ತಿಗಳನ್ನು ನಮ್ಮ ಭದ್ರತಾ ಇಲಾಖೆಯೊಳಗೆ ಸಾಕುತ್ತಾ, ‘ಪುಲ್ವಾಮ ದಾಳಿಯನ್ನು ಇನ್ನಾವುದೋ ದೇಶ ಸಂಘಟಿಸಿತು’ ಎಂದು ನಾವು ಅಲವತ್ತುಕೊಳ್ಳುವುದರಿಂದ ಯಾವ ಪ್ರಯೋಜನವೂ ಇಲ್ಲ. ಸಂಸತ್ ದಾಳಿ ಮತ್ತು ಪುಲ್ವಾಮ ದಾಳಿಗಳೆರಡರ ಕುರಿತಂತೆಯೂ ಹಲವು ತಜ್ಞರು, ರಾಜಕೀಯ ಚಿಂತಕರು ತಮ್ಮ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವು ರಾಜಕೀಯ ಶಕ್ತಿಗಳೇ ಈ ದಾಳಿಗಳನ್ನು ಪ್ರಾಯೋಜಿಸಿರುವ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಇದೀಗ ದವೀಂದರ್ ಸಿಂಗ್‌ಗೆ ಸುಲಭವಾಗಿ ಸಿಕ್ಕಿರುವ ಜಾಮೀನು ಅವರ ಅನುಮಾನಗಳನ್ನು ಪುಷ್ಟೀಕರಿಸುತ್ತದೆ.

ವಿಪರ್ಯಾಸವೆಂದರೆ ಈ ದೇಶದಲ್ಲಿ ಶಂಕಿತ ಭಯೋತ್ಪಾದಕರಿಗೆ ಜಾಮೀನು ಸಿಗುವುದು, ಬಿಡುಗಡೆ ಸಿಗುವುದು ಇದೇ ಮೊದಲೇನೂ ಅಲ್ಲ. ಮಾಲೆಗಾಂವ್ ಸ್ಫೋಟ ಆರೋಪಿ ಪ್ರಜ್ಞಾ ಸಿಂಗ್‌ಗೆ ಜಾಮೀನು ದೊರಕಿದ್ದು ಮಾತ್ರವಲ್ಲ, ಆಕೆಯನ್ನು ಸ್ವತಃ ಬಿಜೆಪಿಯೇ ಟಿಕೆಟ್ ಕೊಟ್ಟು ಸಂಸತ್‌ಗೆ ಕಾಲಿಡುವಂತೆ ಮಾಡಿತು. ಸಂಸತ್‌ನ ಮೇಲೆ ಉಗ್ರರು ಮಾಡಿದ ದಾಳಿಗೂ, ಒಬ್ಬ ಶಂಕಿತ ಉಗ್ರಗಾಮಿಯನ್ನು ಟಿಕೆಟ್ ಕೊಟ್ಟು ಆಕೆಯನ್ನು ಸಂಸತ್‌ನೊಳಗೆ ಕಾಲಿಡುವಂತೆ ಮಾಡುವುದಕ್ಕೆ ದೊಡ್ಡ ಅಂತರವೇನೂ ಇಲ್ಲ. ಬಹುಶಃ ಇದಕ್ಕೆ ಹೋಲಿಸಿದರೆ, ದವೀಂದರ್ ಸಿಂಗ್‌ಗೆ ದೊರಕಿರುವ ಜಾಮೀನು ಏನೇನೂ ಅಲ್ಲ. ಸ್ವಾಮಿ ಅಸೀಮಾನಂದ ಸೇರಿದಂತೆ ಹಲವು ಶಂಕಿತ ಉಗ್ರರು ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಈ ದೇಶದ ಹಿತಾಸಕ್ತಿಯನ್ನು ಚಿಂತಿಸುತ್ತಿದ್ದ ಉಪನ್ಯಾಸಕರು, ಸಾಮಾಜಿಕ ಹೋರಾಟಗಾರರು, ಪರಿಸರವಾದಿಗಳು ಜೈಲಿನಲ್ಲಿದ್ದಾರೆ. ದಲಿತ ಚಳವಳಿಗೆ ಅಗಾಧ ಕೊಡುಗೆಯನ್ನು ನೀಡಿರುವ ಆನಂದ್‌ತೇಲ್ತುಂಬ್ಡೆಯಂತಹ ಲೇಖಕರು ಜಾಮೀನು ಸಿಗದೆ, ದೇಶವಿರೋಧಿ ಕಾಯ್ದೆಯ ಕುಣಿಕೆಯಲ್ಲಿ ಒದ್ದಾಡುತ್ತಿರುವಾಗಲೇ, ದವೀಂದರ್ ಸಿಂಗ್‌ನಿಗೆ ಜಾಮೀನು ದೊರಕಿದೆ. ಸಿಎಎ ಕಾಯ್ದೆಯ ವಿರುದ್ಧ ಹೋರಾಟ ನಡೆಸಿದ ಹಲವು ಹೋರಾಟಗಾರರು, ವಿದ್ಯಾರ್ಥಿಗಳು, ಮಹಿಳೆಯರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಪ್ರಜಾಸತ್ತಾತ್ಮಕವಾದ ಎಲ್ಲ ಹೋರಾಟಗಳನ್ನು ದಮನಿಸುತ್ತಾ, ಶಂಕಿತ ಉಗ್ರರನ್ನು ದೇಶಾದ್ಯಂತ ಮುಕ್ತವಾಗಿ ಓಡಾಡಲು ಬಿಡುತ್ತಿರುವ ಸರಕಾರ, ಈ ಮೂಲಕ ಎಂತಹ ದೇಶ ಕಟ್ಟಲು ಹೊರಟಿದೆ ಎನ್ನುವುದನ್ನು ನಾವು ಇನ್ನಾದರೂ ಅರ್ಥಮಾಡಿಕೊಳ್ಳಬೇಕಾಗಿದೆ. ಹೊರಗಿನ ಶತ್ರುಗಳಿಗಿಂತ, ಸರಕಾರದ ನೆರಳಲ್ಲೇ ಕಾರ್ಯಾಚರಿಸುತ್ತಿರುವ ಒಳಗಿನ ಈ ಶತ್ರುಗಳೇ ಹೆಚ್ಚು ಅಪಾಯಕಾರಿ. ದೇಶ ಒಳಗಿನಿಂದಲೂ, ಹೊರಗಿನಿಂದಲೂ ಏಕಕಾಲದಲ್ಲಿ ಅಪಾಯವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಪ್ರಜಾಸತ್ತೆಯ ಜೊತೆಗೆ ನಂಬಿಕೆಯನ್ನು ಹೊಂದಿರುವ ಸರ್ವರೂ ಒಂದಾಗಿ ದೇಶ ಉಳಿಸುವ ಕಾರ್ಯಕ್ಕೆ ಕೈಜೋಡಿಸಬೇಕಾದ ದಿನ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News