ಬೆಂಗಳೂರು: ಕೊರೋನ ಸೋಂಕಿಗೆ ಮತ್ತೆ ಆರು ಮಂದಿ ಸಾವು, 107 ಪ್ರಕರಣಗಳು ದೃಢ

Update: 2020-06-23 16:21 GMT

ಬೆಂಗಳೂರು, ಜೂ.23: ನಗರದಲ್ಲಿ ಮಂಗಳವಾರ ಹೊಸದಾಗಿ 107 ಕೊರೋನ ಪ್ರಕರಣ ದೃಢಪಟ್ಟಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ 24 ಮಂದಿ ಬಿಡುಗಡೆಯಾಗಿದ್ದು, 71 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ 1,505 ಸೋಂಕಿತರು ಪತ್ತೆಯಾಗಿದ್ದು, 996 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 73 ಜನರು ಸೋಂಕಿಗೆ ಬಲಿಯಾಗಿದ್ದು, ಮಂಗಳವಾರ 24 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 15,493 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.

6 ಮಂದಿ ಮೃತ: ರೋಗಿ ನಂ 7623, ಬೆಂಗಳೂರಿನ 47 ವರ್ಷದ ಮಹಿಳೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರನ್ನು ಜೂ.14ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ಜ್ವರ, ಉಸಿರಾಟದ ತೊಂದರೆ, ಕೆಮ್ಮು, ಡಯಾಬಿಟಿಸ್ ಮತ್ತು ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂ.20ರಂದು ನಿಧನರಾಗಿದ್ದಾರೆ.

ರೋಗಿ ನಂ. 8870, ಬೆಂಗಳೂರಿನ 85 ವರ್ಷದ ವೃದ್ಧೆ. ವಿಷಮ ಶೀತ ಜ್ವರದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂ.17ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ, ಹೃದಯ ಸಂಬಂಧ ಕಾಯಿಲೆ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂ.22 ರಂದು ನಿಧನರಾಗಿದ್ದಾರೆ.

ರೋಗಿ ನಂ. 8996, ಬೆಂಗಳೂರಿನ 81 ವರ್ಷದ ವೃದ್ಧ. ವಿಷಮ ಶೀತ ಜ್ವರದ ಲಕ್ಷಣ ಕಾಣಿಸಿಕೊಂಡಿದ್ದವು. ಜೂ.19ರಂದು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಚಿಕಿತ್ಸೆ ಫಲಕಾರಿಯಾಗದೇ ಜೂ.22ರಂದು ನಿಧನರಾಗಿದ್ದಾರೆ.

ರೋಗಿ ನಂ. 9503, ಬೆಂಗಳೂರಿನ 32 ವರ್ಷದ ಪುರುಷ, ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂ.18ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ, ಜ್ವರ, ಉಸಿರಾಟದ ತೊಂದರೆ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು.

ರೋಗಿ ನಂ. 9508, ಬೆಂಗಳೂರಿನ 67 ವರ್ಷದ ಪುರುಷ, ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂ.20ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂ.21ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಜ್ವರ, ಉಸಿರಾಟದ ತೊಂದರೆ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು.

ರೋಗಿ ನಂ 9518, ಬೆಂಗಳೂರಿನ 40 ವರ್ಷದ ಪುರುಷ. ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂ.20ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜೂ.21ರಂದು ಸಾವನ್ನಪ್ಪಿದ್ದಾರೆ.

ಕೊರೋನ ವಾರಿಯರ್ ಗೂ ಸೋಂಕು

ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ 32 ವರ್ಷದ ವೈದ್ಯರೊಬ್ಬರಿಗೆ ಕೊರೋನ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದೆ. ಅವರ ಜೊತೆ ನೇರ ಸಂಪರ್ಕ ಹೊಂದಿದ್ದ ಎಂಟು ವೈದ್ಯರು, 15 ಶುಶ್ರೂಷಕರು ಹಾಗೂ ಇಬ್ಬರು ಸಹಾಯಕ ಸಿಬ್ಬಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಸೋಂಕು ದೃಢಪಟ್ಟ ವೈದ್ಯರು ಹೊರರೋಗಿಗಳ ವಿಭಾಗದಲ್ಲಿ (ಒಪಿಡಿ) ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ಇತ್ತೀಚೆಗೆ ಶೀತ ಜ್ವರದ ಲಕ್ಷಣ ಕಾಣಿಸಿಕೊಂಡಿತ್ತು. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಅವರು ಗಂಟಲ ದ್ರವವನ್ನು ಪರೀಕ್ಷೆ ಮಾಡಿಸಿಕೊಂಡಿದ್ದರು. ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಸಂಸ್ಥೆಯು ಎಲ್ಲ ಸೇವೆಗಳನ್ನೂ ಮುಂದುವರಿಸಿದೆ. ಒಪಿಡಿ ಸೇವೆಯನ್ನು ಸ್ಥಗಿತಗೊಳಿಸಿಲ್ಲ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

50 ಆಂಬ್ಯುಲೆನ್ಸ್ ಗಳ ವ್ಯವಸ್ಥೆ

ಬಿಬಿಎಂಪಿ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಕೊರೋನ ಸೋಂಕಿತರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು 50 ಆಂಬ್ಯುಲೆನ್ಸ್ ಗಳನ್ನು ನಿಯೋಜನೆ ಮಾಡಲಾಗಿರುತ್ತದೆ. ಅದರಂತೆ 6 ಆಂಬ್ಯುಲೆನ್ಸ್ ಗಳು ಬೆಂಗಳೂರು ನಗರ, 4 ಆಂಬ್ಯುಲೆನ್ಸ್ ಗಳು ಬೆಂಗಳೂರು ಗ್ರಾಮಾಂತರ, ಪಾಲಿಕೆ 8 ವಲಯಗಳಿಗೆ 38 ಆಂಬ್ಯುಲೆನ್ಸ್ ಗಳು ಹಾಗೂ ಹೆಚ್ಚುವರಿಯಾಗಿ 2 ಆಂಬ್ಯುಲೆನ್ಸ್ ಗಳು ಪಾಲಿಕೆ ಕೇಂದ್ರ ಕಚೇರಿಗೆ ನಿಯೋಜನೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಅವುಗಳಿಗೆ ಜಿಪಿಎಸ್ ಅಳವಡಿಸಿ ಅದರ ಮೇಲೆ ನಿಗಾವಹಿಸಲು ಕ್ರಮವಹಿಸಲಾಗಿದೆ.

ನಿಯಂತ್ರಣ ಕೊಠಡಿ ಸ್ಥಾಪನೆ

ಕೊರೋನ ಪಾಸಿಟಿವ್ ಸೋಂಕಿತರನ್ನು ತ್ವರಿತವಾಗಿ ಆಸ್ಪತ್ರೆಗೆ ಕರೆದೊಯ್ಯಲು ಪಾಲಿಕೆ ಕೇಂದ್ರ ಕಚೇರಿ ಅನೆಕ್ಸ್ ಕಟ್ಟಡ-3ರಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದ್ದು, ಸಂಬಂಧಪಟ್ಟ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ಕೊರೋನ ಪಾಸಿಟಿವ್ ಬಂದಿರುವ ಬಗ್ಗೆ ಮಾಹತಿ ನೀಡಿದರೆ, ಆ ಬಗ್ಗೆ ವಲಯ ಜಂಟಿ ಆಯುಕ್ತರು, ಆರೋಗ್ಯಾಧಿಕಾರಿಗಳು ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕೂಡಲೆ ಆಂಬ್ಯುಲೆನ್ಸ್ ಗಳ ವ್ಯವಸ್ಥೆ ಮಾಡಲಿದ್ದಾರೆ.

ಟೆಂಪೋ ಟ್ರಾವೆಲ್ ವ್ಯವಸ್ಥೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನ ಪ್ರಕರಣಗಳು ಕಂಡುಬಂದ ಬಳಿಕ ಪ್ರಥಮ ಸಂಪರ್ಕಿತರು ಹಾಗೂ ದ್ವಿತೀಯ ಸಂಪರ್ಕಿತರ ಸ್ವಾಬ್ ಸಂಗ್ರಹಕ್ಕಾಗಿ ಪಾಲಿಕೆಯ 8 ವಲಯಗಳಿಗೆ ತಲಾ ಒಂದೊಂದು ವಾಹನ, ಬೆಂಗಳೂರು ನಗರಕ್ಕೆ 5 ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಕ್ಕೆ 4 ವಾಹನಗಳು ಸೇರಿ ಒಟ್ಟು 17 ವಾಹನಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಸೋಂಕಿತರ ಸ್ವಾಬ್ ಸಂಗ್ರಹಕ್ಕಾಗಿ ಪ್ರತ್ಯೇಕವಾಗಿ 5 ವಾಹನಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.

ಶ್ರದ್ಧಾಂಜಲಿಗೆ ವಾಹನ ವ್ಯವಸ್ಥೆ

ಕೊರೋನ ಸೋಂಕಿನಿಂದ ಮೃತಪಟ್ಟವರನ್ನು ಸಾಗಿಸಲು ಪಾಲಿಕೆಯ 8 ವಲಯಗಳಿಗೆ ಒಂದೊಂದು ಶ್ರದ್ದಾಂಜಲಿ ವಾಹನಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಕೊರೋನ ಸೋಂಕಿತರು ಮೃತರಾದರೆ ಆ ಆಸ್ಪತ್ರೆಗೆ ಶ್ರದ್ಧಾಂಜಲಿ ವಾಹನ ತೆರಳಿ ಮೃತ ವ್ಯಕ್ತಿಯನ್ನು ನಿಗದಿತ ಚಿತಾಗಾರಕ್ಕೆ ಕೊಂಡೊಯ್ಯುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಸೋಂಕು ಶಾಸ್ತ್ರಜ್ಞರ ನಿಯೋಜನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 8 ಮಂದಿ ಸೋಂಕು ಶಾಸ್ತ್ರಜ್ಞರನ್ನು ನಿಯೋಜನೆ ಮಾಡಿಕೊಳ್ಳಲಾಗಿದ್ದು, ಕೊರೋನ ಪ್ರಕರಣ ಕಂಡುಬಂದ ಸೋಂಕಿತ ವ್ಯಕ್ತಿಯ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಪತ್ತೆ ಹಚ್ಚುವ ಕಾರ್ಯ ನಿರ್ವಹಿಸಲಿದ್ದಾರೆ.

ಪ್ರತ್ಯೇಕ ಆಸ್ಪತ್ರೆಗಳು ನಿಗದಿ

ಕೊರೋನ ಚಿಕಿತ್ಸೆಗಾಗಿ ಮೂರು ಆಸ್ಪತ್ರೆಗಳನ್ನು ಮೀಸಲಿಡಲಾಗಿದ್ದು, ವಿಕ್ಟೋರಿಯಾ ಆಸ್ಪತ್ರೆ, ಬೋರಿಂಗ್ ಆಸ್ಪತ್ರೆ ಹಾಗೂ ರಾಜೀವ್ ಗಾಂಧಿ ಆಸ್ಪತ್ರೆಗಳಲ್ಲಿ ಸೋಂಕಿತ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಅದಲ್ಲದೆ 8 ಆಸ್ಪತ್ರೆಗಳಾದ ಕಮಾಂಡ್ ಆಸ್ಪತ್ರೆ, ಲೆಪ್ರೆಸಿ ಆಸ್ಪತ್ರೆ(ಮಾಗಡಿ ರಸ್ತೆ), ಇಡಿ ಆಸ್ಪತ್ರೆ, ಇ.ಎಸ್.ಐ ಆಸ್ಪತ್ರೆ (ಇಂದಿರಾನಗರ, ರಾಜಾಜಿನಗರ, ಪೀಣ್ಯ). ಸಿ.ವಿ.ರಾಮನ್ ನಗರ ಜನರಲ್ ಆಸ್ಪತ್ರೆ ಹಾಗೂ ಜಯನಗರ ಜನರಲ್ ಆಸ್ಪತ್ರೆಗಳನ್ನು ಕೊರೋನ ಆರೋಗ್ಯ ಕೇಂದ್ರಗಳನ್ನಾಗಿಸಲಾಗಿದೆ. ಜೊತೆಗೆ ಹಜ್ ಭವನವನ್ನು ಕೊರೋನ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News