ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ: ಕೆಟ್ಟು ಕೂತ ಬದುಕಿನ ಬಂಡಿ

Update: 2020-06-24 05:05 GMT

ಒಂದು ಕಾಲವಿತ್ತು. ಸರಕಾರ ಪೆಟ್ರೋಲ್‌ಗೆ 50 ಪೈಸೆ ಹೆಚ್ಚಿಸಿದರೂ, ಅದು ಪತ್ರಿಕೆಗಳ ಮುಖಪುಟದ ಮುಖ್ಯಸುದ್ದಿಯಾಗಿ ಪ್ರಕಟವಾಗುತ್ತಿತ್ತು. ಜನರು ಬೀದಿಗಿಳಿದು ಗದ್ದಲ ಎಬ್ಬಿಸುತ್ತಿದ್ದರು. ಅದಕ್ಕೆ ಕಾರಣವೂ ಇತ್ತು. ಪೆಟ್ರೋಲ್ ಬೆಲೆಯೇರಿಕೆ ಉಳಿದೆಲ್ಲ ಸರಕುಗಳ ಬೆಲೆಯೇರಿಕೆಗಳ ತಾಯಿ. ಜನರ ಸೇವೆಗಾಗಿ ಇರುವ ಸರಕಾರಿ ವಾಹನಗಳು ಅನಿವಾರ್ಯವಾಗಿ ತನ್ನ ಟಿಕೆಟ್‌ದರವನ್ನು ಹೆಚ್ಚಿಸಬೇಕಾಗುತ್ತದೆ. ಸರಕು ಸಾಗಾಟದ ವೆಚ್ಚವೂ ಅಧಿಕವಾಗುತ್ತದೆ. ಅದರ ಪರಿಣಾಮ ಗ್ರಾಹಕರ ಮೇಲೆ ಬೀಳುತ್ತದೆ. ಪೆಟ್ರೋಲ್ ಬೆಲೆಯೇರಿಕೆ ನಿಧಾನಕ್ಕೆ ಬದುಕನ್ನೇ ದುಬಾರಿಯಾಗಿಸಿ ಬಿಡುತ್ತದೆ. ಆದುದರಿಂದಲೇ, ಬದುಕಿಗೆ ಬೆಂಕಿ ಬಿದ್ದವರಂತೆ ಜನರು ಜಾಗೃತರಾಗಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಕಳೆದ ಒಂದು ದಶಕದಿಂದೀಚೆಗೆ ಜನರಲ್ಲಿ ಪ್ರತಿಭಟನೆಯ ಕಾವು ತಗ್ಗುತ್ತಿದೆ. ದುರ್ಬಲಗೊಂಡ ಕಾರ್ಮಿಕ ಕಾನೂನು, ಕಾರ್ಮಿಕ ಸಂಘಟನೆಗಳ ಹಿನ್ನಡೆ, ನಿರಂಕುಶವಾಗುತ್ತಿರುವ ಪ್ರಭುತ್ವ ಇವೆಲ್ಲದರ ಪರಿಣಾಮಗಳಿಂದ, ಜನರು ಸರಕಾರದ ಜನವಿರೋಧಿ ನೀತಿಗಳನ್ನು ಧ್ವನಿಯೆತ್ತಿ ವಿರೋಧಿಸುವುದಕ್ಕೆ ಹಿಂಜರಿಯುತ್ತಿದ್ದಾರೆ. ಪರಿಣಾಮವಾಗಿ ಸರಕಾರ ಇನ್ನಷ್ಟು ರಾಜಾರೋಷವಾಗಿ ಜನರ ಮೇಲೆ ಸಂಕಟಗಳನ್ನು ಹೇರುತ್ತಿದೆ. ಇಡೀ ದೇಶ ಕೊರೋನ ಮತ್ತು ಲಾಕ್‌ಡೌನ್‌ನಿಂದ ತತ್ತರಿಸಿ ಕೂತಿರುವ ಹೊತ್ತಿನಲ್ಲಿ, ಇತ್ತ ದೇಶದಲ್ಲಿ ಪ್ರತಿದಿನ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ. ಸೋಮವಾರ ಬೆಲೆಯೇರಿಕೆಯ 16ನೇ ದಿನವಾಗಿದೆ. ಕಳೆದ 16 ದಿನಗಳಲ್ಲಿ ಪೆಟ್ರೋಲ್ ಬೆಲೆ ಒಟ್ಟು 9.21 ರೂ. ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 8.55ರಷ್ಟು ಏರಿಕೆ ಕಂಡಿದೆ. ಜಾಗತಿಕ ಕಚ್ಚಾತೈಲದ ಬೆಲೆ ಗಂಭೀರ ಪ್ರಮಾಣದಲ್ಲಿ ಇಳಿಕೆಯಾಗಿರುವ ದಿನಗಳಲ್ಲಿ, ಪ್ರತಿ ದಿನ ತೈಲ ಬೆಲೆಯೇರಿಕೆಗೆ ಸರಕಾರ ಯಾವ ಕಾರಣವನ್ನು ನೀಡುತ್ತದೆ? ಇಷ್ಟಕ್ಕೂ ಈ ತೈಲ ಬೆಲೆಯೇರಿಕೆಗೆ ಸರಕಾರದ ಮಧ್ಯ ಪ್ರವೇಶವೇ ನೇರ ಕಾರಣವಾಗಿದೆ. ಸರಕಾರ ತೈಲ ಬೆಲೆಯಲ್ಲಿ ಮೂಗು ತೂರಿಸದೇ ಇದ್ದರೆ, ದೇಶದ ಜನತೆ ಕಚ್ಚಾ ತೈಲ ಬೆಲೆಯ ಇಳಿಕೆಯ ಫಲಾನುಭವಿಗಳಾಗುತ್ತಿದ್ದರು.

ಕೊರೋನ ಮತ್ತು ಇನ್ನಿತರ ಜಾಗತಿಕ ರಾಜಕೀಯ ಬೆಳವಣಿಗೆಗಳ ಕಾರಣದಿಂದ ಈ ವರ್ಷದ ಮಾರ್ಚ್ ಮೊದಲ ವಾರದಿಂದಲೇ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ. 50ರಷ್ಟು ಇಳಿಕೆಯಾಗಿತ್ತು. ಇದರ ಪರಿಣಾಮವಾಗಿ ದೇಶದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶೇ. 25ರಷ್ಟು ಇಳಿಕೆಯಾಗಬೇಕಾಗಿತ್ತು. ಯಾಕೆಂದರೆ, 2014ರ ಬಳಿಕ ತೈಲ ಬೆಲೆಯೇರಿಕೆಯ ಜವಾಬ್ದಾರಿಯಿಂದ ಸರಕಾರ ಕಳಚಿಕೊಂಡಿತ್ತು. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಪೆಟ್ರೋಲ್ ಬೆಲೆ ನಿಗದಿಯಾಗಬೇಕು ಎಂಬ ನಿರ್ಧಾರಕ್ಕೆ ಸರಕಾರ ಬದ್ಧವಾಯಿತು ಮತ್ತು ಒಂದೆರಡು ಬಾರಿ ಕಚ್ಚಾ ತೈಲ ಬೆಲೆ ಇಳಿಕೆಯಾದಾಗ, ಕೆಲವು ಪೈಸೆಯಷ್ಟು ಪೆಟ್ರೋಲ್ ಬೆಲೆ ಇಳಿಕೆಯಾಗಿ, ಗ್ರಾಹಕರ ಮೂಗಿಗೆ ಬೆಣ್ಣೆಯನ್ನು ಸವರಿತು. ಕಚ್ಚಾ ತೈಲದ ಬೆಲೆ ಏರಿಕೆಯಾದರೂ, ಇಳಿಕೆಯಾದರೂ ಅದರ ನೇರ ಲಾಭವನ್ನು, ನಷ್ಟವನ್ನು ಗ್ರಾಹಕರೇ ತನ್ನದಾಗಿಸಿ ಕೊಳ್ಳಬೇಕು ಎನ್ನುವ ನೀತಿಯ ಮೂಲಕ, ಬೆಲೆಯೇರಿಕೆಯ ಆರೋಪಗಳಿಂದ ಸರಕಾರ ಪಾರಾಯಿತು. ಬೆಲೆಯೇರಿಕೆಯಾದಾಗಲೆಲ್ಲ ಅಂತರ್‌ರಾಷ್ಟ್ರೀಯ ಕಚ್ಚಾ ತೈಲದ ಕಡೆಗೆ ಕೈ ತೋರಿಸಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿತ್ತು. ಮಾರ್ಚ್ ತಿಂಗಳ ಹೊತ್ತಿನಲ್ಲಿ ಸೌದಿ ಅರೇಬಿಯಾ-ರಶ್ಯ ನಡುವಿನ ಬೆಲೆ ಸಮರ ತೀವ್ರಗೊಂಡು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೇ. 31ರಷ್ಟು ಕುಸಿಯಿತು. 1991ರಲ್ಲಿ ಕೊಲ್ಲಿ ಸಮರದ ಬಳಿಕದ ಅತ್ಯಂತ ದೊಡ್ಡ ಕುಸಿತವಿದು. ಭಾರತ ತನ್ನ ಶೇ. 84ಕ್ಕೂ ಅಧಿಕ ಕಚ್ಚಾ ತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಈ ಹಿಂದೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯೇರಿಕೆಯಾಗಿದ್ದಾಗ ಅಧಿಕ ದುಡ್ಡು ಪಾವತಿಸಿದ್ದ ಭಾರತೀಯರಿಗೆ ಈ ಕುಸಿತದ ಲಾಭ ಪಡೆಯುವ ಎಲ್ಲ ಹಕ್ಕುಗಳು ಇದ್ದವು. ವಿಪರ್ಯಾಸವೆಂದರೆ, ಸರಕಾರ ಈ ದೇಶದ ಜನತೆಯ ಬೆನ್ನಿಗೆ ಚೂರಿ ಹಾಕಿತು. ಈವರೆಗೆ ಬೆಲೆ ನಿಗದಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಬೆಲೆಯೇರಿಕೆಯನ್ನು ಸಮರ್ಥಿಸುತ್ತಾ ಬಂದ ಸರಕಾರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಯುತ್ತಿದ್ದಂತೆಯೇ, ಆಮದು ಮಾಡುವ ತೈಲದ ಮೇಲೆ ಭಾರೀಅಬಕಾರಿ ಸುಂಕವನ್ನು ವಿಧಿಸಿತು. ಗ್ರಾಹಕರ ಕಿಸೆ ಸೇರಬೇಕಾಗಿದ್ದ ಲಾಭ ಇದೀಗ ಸರಕಾರದ ಕಿಸೆ ಸೇರುತ್ತಿದೆ. ಸರಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶದ ಆರ್ಥಿಕತೆ ಸಂಪೂರ್ಣ ಕುಸಿದಿದೆ. ಆದರೆ ಅದಕ್ಕಾಗಿ ಜನಸಾಮಾನ್ಯರು ದಂಡ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮೇ ತಿಂಗಳಿಂದ ಮತ್ತೆ ನಿಧಾನಕ್ಕೆ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವುದರಿಂದ, ಪ್ರತಿ ದಿನವೂ ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ದೇಶದ ಆರ್ಥಿಕತೆ ನೆಲಕಚ್ಚಿ ಕೂತಿರುವ ಹೊತ್ತಿನಲ್ಲೇ ಕೊರೋನವನ್ನು ಎದುರಿಸುವುದಕ್ಕಾಗಿ ಲಾಕ್‌ಡೌನ್ ವಿಧಿಸಲಾಯಿತು. ಇದೀಗ ದೇಶಾದ್ಯಂತ ಲಾಕ್‌ಡೌನ್ ಸಡಿಲಿಕೆಯಾಗಿದೆಯಾದರೂ, ಜನರು ಆರ್ಥಿಕವಾಗಿ ಸಂಪೂರ್ಣ ನಾಶವಾಗಿದ್ದಾರೆ. ಹೊಸದಾಗಿ ಬದುಕನ್ನು ಕಟ್ಟುವಂತಹ ಸನ್ನಿವೇಶದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಾ ಹೋದರೆ, ಜನರು ತಮ್ಮ ಬದುಕನ್ನು ಪುನರ್ ನಿರ್ಮಿಸುವುದಾದರೂ ಹೇಗೆ? ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಿಗೇ ಎಲ್ಲ ಸಾರಿಗೆ ವಾಹನಗಳೂ ಪ್ರಯಾಣ ದರವನ್ನು ವಿಪರೀತ ಏರಿಸಿವೆ. ಆಟೊರಿಕ್ಷಾಗಳ ಕನಿಷ್ಠ ದರವೂ ಹೆಚ್ಚಳವಾಗಿದೆ. ಏರುತ್ತಿರುವ ಪೆಟ್ರೋಲ್ ಬೆಲೆಯನ್ನು ಅವರು ಸಮರ್ಥನೆಯಾಗಿ ನೀಡುತ್ತಿದ್ದಾರೆ. ಸರಕಾರವೂ ಪ್ರಯಾಣ ದರ ಏರಿಕೆಗೆ ಪೂರ್ಣ ಸಮ್ಮತಿಯನ್ನು ನೀಡಿದೆ. ಇದರಿಂದಾಗಿ ಸರಕು ಸಾಗಾಟ ವೆಚ್ಚವೂ ಹೆಚ್ಚಳವಾಗಿದೆ. ಸಾಗಾಟ ವೆಚ್ಚ ಅಧಿಕವಾದಂತೆ, ಮಾರುವ ಸರಕುಗಳ ಬೆಲೆಯೂ ಸಹಜವಾಗಿಯೇ ಹೆಚ್ಚಾಗುತ್ತದೆ. ರೈತರ ಕೃಷಿ ಪದಾರ್ಥಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲ ಸರಕುಗಳು ನಿಧಾನಕ್ಕೆ ತನ್ನ ಬೆಲೆಯನ್ನು ಹೆಚ್ಚಿಸಿಕೊಂಡಿವೆ. ಬೇಡಿಕೆ ಕಡಿಮೆಯಾದಂತೆ ಸರಕುಗಳ ಬೆಲೆ ಕಡಿಮೆಯಾಗಬೇಕು. ಆದರೆ ಇಲ್ಲಿ ಎಲ್ಲವೂ ತಿರುವು ಮುರುವಾಗಿದೆ. ಲಾಕ್‌ಡೌನ್‌ನಿಂದ ಒಂದೆಡೆ ಜನರು ಸರಕುಗಳನ್ನು ಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ಸರಕುಗಳು ತಮ್ಮ ಬೆಲೆಯನ್ನೂ ಹೆಚ್ಚಿಸಿಕೊಳ್ಳುತ್ತಿವೆ. ಪ್ರಯಾಣ ಮಾಡಲು ನಗರದಲ್ಲಿ ಜನರೇ ಇಲ್ಲ ಎನ್ನುವಂತಹ ಸ್ಥಿತಿಯಿದ್ದರೂ, ಸಾರಿಗೆ ವಾಹನಗಳು ಪ್ರಯಾಣದರವನ್ನು ಹೆಚ್ಚಿಸಿವೆ.

ಏರುತ್ತಿರುವ ಪೆಟ್ರೋಲ್ ಬೆಲೆಯಿಂದಾಗಿ ಲಾಕ್‌ಡೌನ್‌ನಲ್ಲಿ ಕಂಕೆಟ್ಟ ಜನರು ಶಾಶ್ವತವಾಗಿ ಮನೆಯಲ್ಲೇ ಕೂರುವ ಸ್ಥಿತಿ ನಿರ್ಮಾಣವಾಗಿದೆ. ಆದುದರಿಂದ, ತಕ್ಷಣ ಸರಕಾರ ಕಚ್ಚಾ ತೈಲದ ಮೇಲಿನ ಹೆಚ್ಚುವರಿ ಸುಂಕವನ್ನು ಹಿಂದೆಗೆಯಬೇಕು. ಕೆಟ್ಟು ನಿಂತ ಜನಸಾಮಾನ್ಯರ ಬದುಕಿನ ಬಂಡಿ ಚಲಿಸಬೇಕಾದರೆ, ಮೊದಲು ತೈಲ ಬೆಲೆ ಇಳಿಕೆಯಾಗಬೇಕು. ಹಾಗೆಯೇ, ಹೆಚ್ಚಳವಾಗಿರುವ ಸಾರಿಗೆ ವಾಹನಗಳ ಪ್ರಯಾಣದರವನ್ನು ಮತ್ತೆ ಇಳಿಸುವ ಕಡೆಗೆ ಸರಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News