ಪಿಎಂಕೇರ್ಸ್ ಮೂಲಕ ಖರೀದಿಸುವ ‘ಅಗ್ವ’ ವೆಂಟಿಲೇಟರ್‌ಗಳ ವಿಶ್ವಾಸಾರ್ಹತೆ ಪ್ರಶ್ನಾರ್ಹ

Update: 2020-06-24 18:11 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜೂ.24: ಕೊರೋನ ಸೋಂಕಿನ ವಿರುದ್ಧ ಸರಕಾರ ನಡೆಸುತ್ತಿರುವ ಉಪಕ್ರಮಗಳ ಅಂಗವಾಗಿ ಪಿಎಂ ಕೇರ್ಸ್ ನಿಧಿ ಮೂಲಕ ನರೇಂದ್ರ ಮೋದಿ ಸರಕಾರ ಖರೀದಿಸಲಿರುವ ಕಡಿಮೆ ಬೆಲೆಯ 10,000 ವೆಂಟಿಲೇಟರ್ಗಳ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಸರಕಾರ ನೇಮಿಸಿದ ಎರಡು ಸಮಿತಿಗಳು ಆತಂಕ ವ್ಯಕ್ತಪಡಿಸಿರುವುದು ದಾಖಲೆಪತ್ರಗಳಿಂದ ತಿಳಿದು ಬಂದಿದೆ ಎಂದು ‘huffingtonpost. in’ ವರದಿ ಮಾಡಿದೆ.

   
ವೈದ್ಯರನ್ನೊಳಗೊಂಡ ಸಮಿತಿ 2020ರ ಜೂನ್ 1ರಂದು ನೀಡಿರುವ ಕ್ಲಿನಿಕಲ್ (ಚಿಕಿತ್ಸೆಗೆ ಸಂಬಂಧಿಸಿದ) ಮೌಲ್ಯಮಾಪನ ವರದಿಯಲ್ಲಿ, ಭಾರತದ ನವೋದ್ಯಮ ‘ಅಗ್ವ ಹೆಲ್ತ್ಕೇರ್’ ಸಂಸ್ಥೆಯು ತಯಾರಿಸಿರುವ ಈ ವೆಂಟಿಲೇಟರ್ಗಳನ್ನು ಮೋದಿ ಸರಕಾರ ಖರೀದಿಸಬಹುದು. ಆದರೆ ಇವನ್ನು ತೃತೀಯ ಆರೈಕೆ ಆಸ್ಪತ್ರೆಯ ಐಸಿಯು(ತೀವ್ರ ನಿಗಾ ಘಟಕ)ಗಳಲ್ಲಿ ಬಳಸುವ ಉನ್ನತ ಮಟ್ಟದ ವೆಂಟಿಲೇಟರ್ಗಳಿಗೆ ಪರ್ಯಾಯವೆಂದು ಪರಿಗಣಿಸಬಾರದು. ಅಲ್ಲದೆ ಇವನ್ನು ಬಳಸುವ ಆಸ್ಪತ್ರೆಗಳಲ್ಲಿ ಬದಲಿ ವೆಂಟಿಲೇಟರ್ಗಳನ್ನು ವ್ಯವಸ್ಥೆಗೊಳಿಸಬೇಕು ಎಂದು ತಿಳಿಸಲಾಗಿದೆ.

ಇದಕ್ಕೂ ಮೊದಲು, ಮೇ 16ರಂದು ಮತ್ತೊಂದು ಸಮಿತಿ ನೀಡಿದ ಕ್ಲಿನಿಕಲ್ ಮೌಲ್ಯಮಾಪನ ವರದಿಯಲ್ಲಿ, ಇವುಗಳ ಬಳಕೆಗೆ ಅನುಮೋದನೆ ನೀಡುವ ಮೊದಲು ಇನ್ನಷ್ಟು ತಾಂತ್ರಿಕ ದೃಢೀಕರಣ ನಡೆಸಬೇಕು ಎಂದು ತಿಳಿಸಲಾಗಿತ್ತು. ಜಾಗತಿಕ ಮಟ್ಟದಲ್ಲಿ ವೆಂಟಿಲೇಟರ್ಗಳ ಕೊರತೆಯಿರುವುದನ್ನು ಗಮನಿಸಿ, ವೆಂಟಿಲೇಟರ್ಗಳ ಪೂರೈಕೆಗೆ ಕರೆದ ಟೆಂಡರ್ನಲ್ಲಿ ಭಾರತದ ಸಂಸ್ಥೆಗಳಿಗೆ ಅವಕಾಶ ನೀಡಲಾಗಿದೆ. ವೆಂಟಿಲೇಟರ್ಗಳ ಪೂರೈಕೆಗೆ ಆರ್ಡರ್ ನೀಡಿದ ನಂತರ, ತಜ್ಞರ ಸಮಿತಿ ಅನುಮೋದನೆ ನೀಡಿದ ಬಳಿಕವಷ್ಟೇ ಸರಕಾರ ಈ ಸಾಧನಗಳನ್ನು ಸ್ವೀಕರಿಸುತ್ತದೆ ಎಂದು ಟೆಂಡರ್ನಲ್ಲಿ ತಿಳಿಸಲಾಗಿದೆ.

ಭಾರತದ ಸ್ಕನ್ರೇ ಟೆಕ್ನಾಲಜೀಸ್ ಸಂಸ್ಥೆಯ ಸಹಯೋಗದಲ್ಲಿ ಸರಕಾರಿ ಸ್ವಾಮ್ಯದ ಸಂಸ್ಥೆ ಭಾರತ್ ಇಲೆಕ್ಟ್ರಾನಿಕ್ಸ್ ಲಿ. 30,000 ವೆಂಟಿಲೇಟರ್ಗಳನ್ನು ಸರಕಾರಕ್ಕೆ ಪೂರೈಸಿದ್ದು ಇವನ್ನು ಯಾವುದೇ ಪೂರ್ವ ಷರತ್ತುಗಳಿಲ್ಲದೆ ಸರಕಾರ ಅನುಮೋದಿಸಿದೆ ಎಂದು ಸಂಸ್ಥೆ ತಿಳಿಸಿದೆ. ಈ ಮಧ್ಯೆ, ಕ್ಲಿನಿಕಲ್ ಮೌಲ್ಯಮಾಪನ ಸಮಿತಿಗಳು ಸೂಚಿಸಿರುವ ಎಲ್ಲಾ ಲೋಪಗಳನ್ನು ಸರಿಪಡಿಸಲಾಗಿದ್ದು ಸಂಸ್ಥೆ ತಯಾರಿಸಿರುವ 10,000 ವೆಂಟಿಲೇಟರ್ಗಳು ಪೂರೈಕೆಗೆ ಸಿದ್ಧವಾಗಿದೆ ಎಂದು ಅಗ್ವ ಸಂಸ್ಥೆಯ ಸಹಸಂಸ್ಥಾಪಕ ದಿವಾಕರ್ ವೈಶ್ ಹೇಳಿರುವುದಾಗಿ ‘huffingtonpost.in’ ವರದಿ ತಿಳಿಸಿದೆ.

20 ಲಕ್ಷಕ್ಕೂ ಹೆಚ್ಚು ವೆಚ್ಚದ ವೆಂಟಿಲೇಟರ್ ಖರೀದಿಸುವ ಬಗ್ಗೆ ವೈದ್ಯರು ಮತ್ತು ಉತ್ಪಾದನಾ ಸಂಸ್ಥೆಗಳ ಮಧ್ಯೆ ಒಳಒಪ್ಪಂದ ನಡೆದಿರುತ್ತದೆ. ಇದರಲ್ಲಿ ಸಾಕಷ್ಟು ಕಮಿಷನ್ ದೊರಕುತ್ತದೆ. ಆದರೆ ನಮ್ಮದು ಅಗ್ಗದ ವೆಂಟಿಲೇಟರ್ಗಳು. ಇಲ್ಲಿ ಯಾವುದೇ ಕಮಿಷನ್ ಅಥವಾ ಒಳ ಒಪ್ಪಂದಕ್ಕೆ ಆಸ್ಪದವಿಲ್ಲ. ಆದ್ದರಿಂದಲೇ ನಮ್ಮ ವೆಂಟಿಲೇಟರ್ಗಳ ಬಗ್ಗೆ ಗೊಂದಲ ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದವರು ಆರೋಪಿಸಿದ್ದಾರೆ.
ಆದರೆ ವೆಂಟಿಲೇಟರ್ಗಳ ಅಗತ್ಯ ಇರುವುದರಿಂದ ನೀವದನ್ನು ಖರೀದಿಸುತ್ತೀರಿ. ಆದರೆ ವೆಂಟಿಲೇಟರ್ಗಳಿಗೆ ಪರ್ಯಾಯ ವೆಂಟಿಲೇಟರ್ಗಳ ಅಗತ್ಯ ಇದೆ ಎಂದಾದರೆ ಆ ಪರ್ಯಾಯ ವೆಂಟಿಲೇಟರ್ಗಳನ್ನು ಎಲ್ಲಿಂದ ಖರೀದಿಸುವುದು? ಈಗಾಗಲೇ ವೆಂಟಿಲೇಟರ್ಗಳ ಕೊರತೆಯಿದೆ. ಹಾಗಿರುವಾಗ ಪರ್ಯಾಯ ವೆಂಟಿಲೇಟರ್ಗಳನ್ನು ಎಲ್ಲಿಂದ ತರುವುದು ಎಂದು ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಬಯೊಎಥಿಕ್ಸ್ನ ಮಾಜಿ ಅಧ್ಯಕ್ಷ, ವೈದ್ಯ ಡಾ. ಅನಂತ್ ಬಾನ್ ಪ್ರಶ್ನಿಸುತ್ತಾರೆ.

ಕೋವಿಡ್ ಮೋಡೆಲ್ ಎಂಬ ಹೆಸರಿನ ವೆಂಟಿಲೇಟರ್ಗಳನ್ನು ಅಗ್ವ ಸಂಸ್ಥೆ ಮಾರುತಿ ಸುಝುಕಿಯ ಸಹಯೋಗದೊಂದಿಗೆ ಉತ್ಪಾದಿಸುತ್ತದೆ. ಮಾರುತಿ ಸುಝುಕಿ ಸಂಸ್ಥೆಯ ತಜ್ಞರು ಅಗ್ವ ಸಂಸ್ಥೆಗೆ ನೆರವಾಗಲಿದ್ದು ದಿನಕ್ಕೆ 600 ವೆಂಟಿಲೇಟರ್ಗಳನ್ನು ನಿರ್ಮಿಸುವ ಯೋಜನೆಯನ್ನು ಸಂಸ್ಥೆ ಹಾಕಿಕೊಂಡಿದೆ. ಅಗ್ವ- ಮಾರುತಿ ಸುಝುಕಿ ನಡುವಿನ ಒಪ್ಪಂದಕ್ಕೆ ಭಾರೀ ಜಾಹೀರಾತಿನ ಮೂಲಕ ಪ್ರಚಾರ ನೀಡಲಾಗಿದ್ದು, ಮೋದಿ ಸರಕಾರ ಕೂಡಾ ಈ ನವೋದ್ಯಮ ಸಂಸ್ಥೆಯ ಹೆಸರನ್ನು ಆಗಿಂದಾಗ್ಗೆ ಉಲ್ಲೇಖಿಸುತ್ತಿದೆ. ಈ ಮಧ್ಯೆ ಕೊರೋನ ವೈರಸ್ ವಿರುದ್ಧ ದೇಶ ನಡೆಸುತ್ತಿರುವ ಹೋರಾಟಕ್ಕೆ ಪಿಎಂ ಕೇರ್ಸ್ಗೆ ದೇಣಿಗೆ ನೀಡುವ ಸಂಸ್ಥೆಗಳೂ ಅಗ್ವ ತಯಾರಿಸಿದ ವೆಂಟಿಲೇಟರ್ಗಳ ಕೊಡುಗೆ ನೀಡುತ್ತಿರುವ ವಿದ್ಯಮಾನವೂ ನಡೆದಿದೆ ಎಂದು ‘huffingtonpost.in’ ವರದಿ ತಿಳಿಸಿದೆ.

ಪ್ರಥಮ ಮೌಲ್ಯಮಾಪನ ಸಮಿತಿ ಹೊಸದಿಲ್ಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ರೋಗಿಗಳ ಮೇಲೆ ನಡೆಸಲಾದ ಪರೀಕ್ಷಾ ಪ್ರಯೋಗದ ಆಧಾರದಲ್ಲಿ ಮೇ 16ರಂದು ವರದಿ ನೀಡಿತ್ತು. ಆಗ್ವ ಸಂಸ್ಥೆಯ ವೆಂಟಿಲೇಟರ್ಗಳು ಉಸಿರಾಟದ ನಿಯತಾಂಕಗಳನ್ನು (ರೋಗಿಯ ಶ್ವಾಸಕೋಶಕ್ಕೆ ಪಂಪ್ ಮಾಡಲಾದ ಗ್ಯಾಸ್ನ ಪ್ರಮಾಣ ಇತ್ಯಾದಿ) ಒಳಗೊಂಡಿಲ್ಲ. ಈ ವೆಂಟಿಲೇಟರ್ಗಳಿಗೆ ಇನ್ನಷ್ಟು ತಾಂತ್ರಿಕ ದೃಢೀಕರಣದ ಅಗತ್ಯವಿದೆ ಎಂದು ವರದಿ ತಿಳಿಸಿತ್ತು.
ಮೇ 27ರಂದು ವರದಿ ಸಲ್ಲಿಸಿದ ಮತ್ತೊಂದು ಸಮಿತಿ, ಅಗ್ವ ವೆಂಟಿಲೇಟರ್ಗಳಲ್ಲಿ ಕಂಡು ಬಂದಿದ್ದ ದೋಷಗಳನ್ನು ಸರಿಪಡಿಸಲಾಗಿದೆ ಎಂಬ ಸಂಸ್ಥೆಯ ಹೇಳಿಕೆಯ ಆಧಾರದಲ್ಲಿ ಈ ವೆಂಟಿಲೇಟರ್ಗಳಿಗೆ ಜೂನ್ 1ರಂದು ಅನುಮೋದನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News