ಇದು ಪರೀಕ್ಷೆಯ ಕಾಲ

Update: 2020-06-25 05:04 GMT

ಕೊನೆಗೂ ಸರಕಾರ ಎಸೆಸೆಲ್ಸಿ ಪರೀಕ್ಷೆ ಬರೆದೇ ತೀರುತ್ತೇನೆ ಎಂದು ಹೊರಟಿದೆ. ರಾಜ್ಯಾದ್ಯಂತ 3,000ಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳಲ್ಲಿ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. ಎಸೆಸೆಲ್ಸಿ ಪರೀಕ್ಷೆಯನ್ನು ಸುರಕ್ಷಿತವಾಗಿ ಬರೆಯುವುದಕ್ಕಾಗಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಮಾರ್ಗಸೂಚಿಗಳನ್ನು ಒಳಗೊಂಡ ಕೈ ಪಿಡಿಯನ್ನು ಈಗಾಗಲೇ ಪ್ರಕಟಿಸಿದೆ. ವಿದ್ಯಾರ್ಥಿಗಳು ಈ ಬಾರಿ ಏಕಕಾಲದಲ್ಲಿ ಎರಡೆರಡು ಪರೀಕ್ಷೆಗಳನ್ನು ಬರೆದು ಪಾಸಾಗಬೇಕಾದ ಒತ್ತಡದಲ್ಲಿದ್ದಾರೆ. ಒಂದೆಡೆ, ಪಠ್ಯ ಪುಸ್ತಕದ ಬದನೆಕಾಯಿ. ಇನ್ನೊಂದೆಡೆ ಕೊರೋನ ಕೈಪಿಡಿಯ ಮೆಣಸಿನ ಕಾಯಿ. ಯಾವುದಕ್ಕೆ ಹೆಚ್ಚು ಆದ್ಯತೆಯನ್ನು ನೀಡಬೇಕು ಎನ್ನುವುದರ ಕುರಿತಂತೆಯೂ ವಿದ್ಯಾರ್ಥಿಗಳಲ್ಲಿ ಗೊಂದಲಗಳಿವೆ. ಸರಕಾರ ಹತ್ತು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ವ್ಯವಸ್ಥೆಗಳನ್ನೂ ಮಾಡಿದೆ. ಆದರೆ ಅವೆಲ್ಲವೂ ಎಷ್ಟರಮಟ್ಟಿಗೆ ವಾಸ್ತವ ರೂಪಕ್ಕೆ ಬರಲಿದೆ ಎನ್ನುವುದು ಅಸ್ಪಷ್ಟ. ಆದುದರಿಂದ, ಈ ಬಾರಿ ಸರಕಾರಕ್ಕೂ ಇದೊಂದು ಬಗೆಯ ಪರೀಕ್ಷೆಯೇ ಸರಿ. ಯಾಕೆಂದರೆ, ಈ ಕೊರೋನ ಪರೀಕ್ಷೆಯಲ್ಲಿ ಫೇಲಾದರೆ ಅದಕ್ಕಾಗಿ ಸರಕಾರ ಭಾರೀ ಬೆಲೆಯನ್ನು ತೆರಬೇಕಾಗಿ ಬರಬಹುದು. ಇಂದು ಶೈಕ್ಷಣಿಕ ಪರೀಕ್ಷೆಯನ್ನು ಎದುರಿಸಲು ಮಕ್ಕಳು ಸಾಕಷ್ಟು ತಯಾರಿಯನ್ನು ಮಾಡಿದ್ದಾರೆ. ಪರೀಕ್ಷೆ ತಯಾರಿಗೆ ಬೇಕಾದ ಸಮಯ ಅವರಿಗೆ ದೊರಕಿದೆ. ಆದರೆ ಸದ್ಯದ ಕೊರೋನ ಬೆಳವಣಿಗೆಗಳು ಸೃಷ್ಟಿಸಿರುವ ಆತಂಕ, ಗೊಂದಲಗಳ ಜೊತೆಜೊತೆಗೆ ಅವರು ಪರೀಕ್ಷೆ ಬರೆಯಬೇಕು. ಇದೇ ಸಂದರ್ಭದಲ್ಲಿ, ಎಸೆಸೆಲ್ಸಿ ಪರೀಕ್ಷೆಗೆ ಸಂಬಂಧಿಸಿ ಸರಕಾರವೂ ಎಷ್ಟರ ಮಟ್ಟಿಗೆ ಸಿದ್ಧಗೊಂಡಿದೆ ಎನ್ನುವುದರ ಬಗ್ಗೆ ಅನುಮಾನಗಳಿವೆ. ಯಾಕೆಂದರೆ, ಮೊನ್ನೆ ಮೊನ್ನೆಯವರೆಗೆ ಎಲ್ಲ ಇಲಾಖೆಗಳು ಲಾಕ್‌ಡೌನ್ ಹೆಸರಿನಲ್ಲಿ ಬಾಗಿಲು ಮುಚ್ಚಿದ್ದವು. ಒಂದು ಹಂತದಲ್ಲಿ, ಈ ವರ್ಷ ಎಸೆಸೆಲ್ಸಿ ಪರೀಕ್ಷೆ ಅನುಮಾನ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಿಗೇ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಿದಂತೆ ಮತ್ತೆ ಲಾಕ್‌ಡೌನ್ ಹೇರುವ ಬಗ್ಗೆ ಸರಕಾರ ಯೋಚಿಸುತ್ತಿದೆ. ಸಾರಿಗೆ ವಾಹನಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಸಾರ್ವಜನಿಕರ ಸೇವೆಗೆ ತೆರೆದುಕೊಂಡಿಲ್ಲ. ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಹಿಂಜರಿಯುವ ಪರಿಸ್ಥಿತಿಯಿದೆ. ಸರಕಾರ ಮುನ್ನೆಚ್ಚರಿಕೆಯ ಕ್ರಮಗಳನ್ನು ಸೂಚಿಸಿದೆಯಾದರೂ, ಅದು ಕಾರ್ಯ ರೂಪಕ್ಕಿಳಿಯುವ ಬಗ್ಗೆ ಅನುಮಾನಗಳಿವೆ.

ಇತ್ತ ವಿದ್ಯಾರ್ಥಿಗಳು ಮತ್ತು ಪೋಷಕರ ಒಳ ಸಂಘರ್ಷಗಳೇ ಬೇರೆ. ಪರೀಕ್ಷೆ ಮುಖ್ಯವೋ- ಮಕ್ಕಳ ಆರೋಗ್ಯ ಮುಖ್ಯವೋ ಎನ್ನುವ ಅಡಕತ್ತರಿಯಲ್ಲಿ ಪಾಲಕರು ಸಿಲುಕಿಕೊಂಡಿದ್ದಾರೆ. ಎಸೆಸೆಲ್ಸಿ ಪರೀಕ್ಷೆಯೆಂದರೆ, ಮಕ್ಕಳ ಭವಿಷ್ಯದ ಹೆಬ್ಬಾಗಿಲು ಎಂದು ಭಾವಿಸಿದ ಪೋಷಕರೇ ನಮ್ಮ ನಡುವೆ ಹೆಚ್ಚಿದ್ದಾರೆ. ಆದುದರಿಂದ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಬಹುದು. ಇದೇ ಸಂದರ್ಭದಲ್ಲಿ, ಉಳಿದೆಲ್ಲ ಮಕ್ಕಳು ಪರೀಕ್ಷೆ ಬರೆದು ಮುಂದಿನ ಶೈಕ್ಷಣಿಕ ವರ್ಷಕ್ಕೆ ಸಿದ್ಧರಾಗುತ್ತಿರುವಾಗ, ತಮ್ಮ ಮಕ್ಕಳು ಮನೆಯಲ್ಲಿ ಕುಳಿತುಕೊಂಡರೆ ಹೇಗೆ? ಎಂದು ಯೋಚಿಸಿ ಅನಿವಾರ್ಯವಾಗಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಗೆ ನೂಕುವ ಪೋಷಕರೂ ಇದ್ದಾರೆ. ಪಠ್ಯಗಳಲ್ಲಿರುವ ಪ್ರಶ್ನೆ ಪತ್ರಿಕೆ ಮತ್ತು ಕೊರೋನ ಪ್ರಶ್ನೆ ಪತ್ರಿಕೆ ಎರಡರ ಕುರಿತಂತೆಯೂ ಮಕ್ಕಳ ತಲೆಗೆ ತುಂಬುವ ಹೊಣೆಗಾರಿಕೆ ಪೋಷಕರು ಮತ್ತು ಶಾಲಾ ಶಿಕ್ಷಕರದು. ಪಠ್ಯದಲ್ಲಿ ಫೇಲಾದರೆ ಮತ್ತೊಮ್ಮೆ ಪರೀಕ್ಷೆ ಬರೆಯಬಹುದು. ಆದರೆ, ಮಕ್ಕಳು ಕೊರೋನ ಸೋಂಕಿನ ಕುರಿತಂತೆ ಅನಗತ್ಯ ಭಯ ಅಥವಾ ತೀವ್ರ ನಿರ್ಲಕ್ಷ ಎರಡನ್ನೂ ಹೊಂದಿದ್ದರೆ ಅದು ಕೆಲವೊಮ್ಮೆ ಭೀಕರ ಪರಿಣಾಮವನ್ನು ಬೀರಬಹುದು. ಕೊರೋನಾ ಪರೀಕ್ಷೋಎಯಲ್ಲಿ ಎರಡನೆಯ ಬಾರಿಗೆ ಪರೀಕ್ಷೆ ಬರೆಯುವುದು ಅಷ್ಟು ಸುಲಭವಿಲ್ಲ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಕೊರೋನ ಕುರಿತಂತೆ ಸಾಕಷ್ಟು ಮಾಹಿತಿಗಳ ಕೊರತೆಗಳಿವೆ. ಟಿವಿ ಮಾಧ್ಯಮಗಳು ಬಿತ್ತರಿಸುತ್ತಿರುವ ಅತಿರಂಜಿತ ವರದಿಗಳಿಂದಾಗಿ ಅವರು ಕೊರೋನ ಕುರಿತಂತೆ ನಿರೀಕ್ಷೆಗಿಂತಲೂ ಹೆಚ್ಚು ಆತಂಕಗೊಂಡಿರುವ ಸಾಧ್ಯತೆಗಳಿವೆ. ಈ ಆತಂಕ, ಪರೀಕ್ಷೆಯ ಒತ್ತಡಗಳ ಜೊತೆಗೆ ಸೇರಿಕೊಂಡರೆ ಅದು ವಿದ್ಯಾರ್ಥಿಗಳನ್ನು ಖಿನ್ನತೆಗೆ ತಳ್ಳಬಹುದು. ಕೊರೋನದ ಬಗ್ಗೆ ಜಾಗೃತಿಯನ್ನು ಬಿತ್ತುವುದು ಎಷ್ಟು ಮುಖ್ಯವೋ, ಅನಗತ್ಯ ಆತಂಕಗಳನ್ನು ಬಿತ್ತದೇ ಇರುವುದೂ ಅಷ್ಟೇ ಮುಖ್ಯ. ಯಾರೋ ಒಬ್ಬ ವಿದ್ಯಾರ್ಥಿ ಕೆಮ್ಮಿದಾಕ್ಷಣ ಅಥವಾ ನೆಗಡಿ ಹೊಂದಿದಾಕ್ಷಣ ಆತನ ಬಗ್ಗೆ ಭಯಪಡುವ ಅಗತ್ಯವಿಲ್ಲ. ಮಳೆಗಾಲವಾಗಿರುವುದರಿಂದ ಕೆಮ್ಮು, ನೆಗಡಿ ಸಾಮಾನ್ಯ. ಈ ಸಂದರ್ಭದಲ್ಲಿ ವಿದ್ಯಾರ್ಥಿಯ ಜೊತೆಗೆ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡರೆ ಅಷ್ಟೇ ಸಾಕು. ಕೊರೋನ ಎನ್ನುವುದು ಅದೇನೋ ಭೀಕರ ರೋಗವೆಂಬ ಭ್ರಮೆಯನ್ನು ಅವರಲ್ಲಿ ಬಿತ್ತದಿರೋಣ. ಈ ನಿಟ್ಟಿನಲ್ಲಿ ಮೊದಲು ಪೋಷಕರು ಕೊರೋನಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಗತ್ಯವಿದೆ. ಅವರೇ ಕೊರೋನಾ ಕುರಿತಂತೆ ಅನಗತ್ಯ ಭೀತಿಯನ್ನು ಹೊಂದಿದ್ದರೆ, ಮಕ್ಕಳಲ್ಲಿ ಹೀಗೆ ಜಾಗೃತಿ ಮೂಡಿಸಬಲ್ಲರು? ಅನಗತ್ಯ ಭೀತಿ ವಿದ್ಯಾರ್ಥಿಗಳನ್ನು ಇನ್ನಿತರ ಮಾನಸಿಕ, ದೈಹಿಕ ಕಾಯಿಲೆಗೆ ಈಡು ಮಾಡುವ ಸಾಧ್ಯತೆಗಳಿವೆ. ತನ್ನ ಪಕ್ಕದಲ್ಲೇ ಇದ್ದ ಸ್ನೇಹಿತ ಕೆಮ್ಮಿದಾಕ್ಷಣ, ತನಗೂ ಕೊರೋನ ಸೋಂಕು ಹರಡಿರಬಹುದು ಎಂದು ವಿದ್ಯಾರ್ಥಿಗಳು ಅನಗತ್ಯ ಆತಂಕಗೊಂಡು ಒಳಗೊಳಗೆ ಕೊರಗುವ ಸಾಧ್ಯತೆಗಳಿವೆ. ಕೊರೋನ ಎಂದರೆ ಏನು, ಅದರ ಲಕ್ಷಣಗಳೇನು, ಅದು ಎಷ್ಟರಮಟ್ಟಿಗೆ ನಮಗೆ ಹಾನಿ ಮಾಡಬಹುದು ಎನ್ನುವುದರ ಕುರಿತಂತೆ ಅತ್ಯಂತ ಸರಳವಾಗಿ ಅವರಿಗೆ ಪೋಷಕರು ವಿವರಿಸಬೇಕಾಗಿದೆ. ಎಲ್ಲ ಮುಂಜಾಗ್ರತೆ ವಹಿಸಿದ ಬಳಿಕವೂ ಆಕಸ್ಮಿಕವಾಗಿ ಸೋಂಕಿತ ವ್ಯಕ್ತಿಯ ಸಂಪರ್ಕವಾದರೂ ಅದರಿಂದ ವಿಶೇಷ ಪರಿಣಾಮವೇನೂ ಆಗುವುದಿಲ್ಲ. ಒಂದು ವೇಳೆ ಕೊರೋನ ಸೋಂಕು ತಗಲಿದ್ದರೂ ಅದು ಏಳು ದಿನಗಳಲ್ಲಿ ತನ್ನಷ್ಟಕ್ಕೇ ವಾಸಿಯಾಗುವ ಕಾಯಿಲೆ. ರೋಗ ನಿರೋಧಕ ಶಕ್ತಿಯ ಕೊರತೆಯಿರುವ ಕೆಲವು ವಿದ್ಯಾರ್ಥಿಗಳ ಮೇಲಷ್ಟೇ ತುಸು ಹೆಚ್ಚು ದುಷ್ಪರಿಣಾಮವನ್ನು ಬೀರಬಹುದು. ಕೊರೋನ ಸಂಬಂಧಿತ ರೋಗ ಲಕ್ಷಣಗಳು ವಿದ್ಯಾರ್ಥಿಗಳಲ್ಲಿ ಕಂಡು ಬಂದರೆ ಯಾವ ಕಾರಣಕ್ಕೂ ಅವರನ್ನು ಪರೀಕ್ಷೆಗೆ ಕಳುಹಿಸದೆ, ಮನೆಯಲ್ಲೇ ಇರಿಸಿ ಅವರನ್ನು ಜೋಪಾನ ಮಾಡುವುದು ಪೋಷಕರ ಜವಾಬ್ದಾರಿ. ಎಸೆಸೆಲ್ಸಿ, ಪಿಯುಸಿ ಪರೀಕ್ಷೆಗಳ ಒತ್ತಡಗಳಿಗೆ ಹೆದರಿ ಪ್ರತಿವರ್ಷ ದೇಶದಲ್ಲಿ ನೂರಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿ ಪರೀಕ್ಷೆಯೊಳಗೊಂದು ಪರೀಕ್ಷೆಯನ್ನು ಎದುರಿಸುವ ಸಂದರ್ಭ. ಆದುದರಿಂದ, ಪೋಷಕರು, ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಎಷ್ಟು ಅಂಕಗಳನ್ನು ಪಡೆಯುತ್ತಾರೆ ಎನ್ನುವುದೂ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳ ಜೊತೆಗೆ ಇವರೂ ಈ ಪರೀಕ್ಷೆಯನ್ನು ಗೆಲ್ಲುವಂತಾಗಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News