ಲೈಸೆನ್ಸ್ ಗೆ ಅರ್ಜಿ ಸಲ್ಲಿಸುವ ವೇಳೆ ‘ಕೊರೋನಗೆ ಔಷಧಿ’ ಎಂದು ಪತಂಜಲಿ ಹೇಳಿರಲಿಲ್ಲ: ಅಧಿಕಾರಿಯ ಆರೋಪ

Update: 2020-06-25 10:46 GMT

ಹೊಸದಿಲ್ಲಿ: ಪತಂಜಲಿ ಆರ್ಯುವೇದ ಸಂಸ್ಥೆಯು ತನ್ನ ಹೊಸ ಔಷಧಿಗೆ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸುವ ವೇಳೆ ಅದು ಕೊರೋನವೈರಸ್‍ ಔಷಧಿ ಎಂದು ಬಹಿರಂಗಪಡಿಸಿರಲಿಲ್ಲ ಎಂದು ಉತ್ತರಾಖಂಡದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೊರೋನವೈರಸ್ ಸೋಂಕನ್ನು ಏಳೇ ದಿನಗಳಲ್ಲಿ ಗುಣಪಡಿಸಬಹುದು ಎಂದು ಹೇಳಿಕೊಂಡು  ಯೋಗಗುರು ಬಾಬಾ ರಾಮದೇವ್ ಬಿಡುಗಡೆಗೊಳಿಸಿದ ಈ ಔಷಧಿಗೆ ಇನ್ನಷ್ಟು ಸಮಸ್ಯೆಗಳು ಎದುರಾಗುವುದು ಇದರಿಂದ ನಿಶ್ಚಿತವಾಗಿದೆ.

‘ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ಕೆಮ್ಮು ಮತ್ತು ಜ್ವರ ಗುಣಪಡಿಸುವ’  ಔಷಧಿಗೆ ಪತಂಜಲಿ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿತ್ತು, ಆದರೆ ಕೋವಿಡ್‍ ಗೆ ಔಷಧಿ ಎಂದು ಏಕೆ ಮುಚ್ಚಿಡಲಾಗಿತ್ತು ಎಂದು ನೋಟಿಸ್ ಜಾರಿಗೊಳಿಸಲಾಗುವುದು ಎಂದು ಉತ್ತರಾಖಂಡ ಆರ್ಯುವೇದ ಇಲಾಖೆಯ ಲೈಸನ್ಸಿಂಗ್ ಅಧಿಕಾರಿ ವೈ ಎಸ್ ರಾವತ್ ಹೇಳಿದ್ದಾರೆ

ತಮ್ಮ ಸಂಸ್ಥೆಯ ಔಷಧಿ ಶೇ 100ರಷ್ಟು ಪರಿಣಾಮಕಾರಿ ಎಂದು ಔಷಧಿ ಬಿಡುಗಡೆಗೊಳಿಸಿದ  ನಂತರ ಬಾಬಾ ರಾಮದೇವ್ ಹೇಳಿದ ಬೆನ್ನಿಗೇ ಔಷಧಿಯನ್ನು ಸಂಬಂಧಿತ ಪ್ರಾಧಿಕಾರ ಪರಿಶೀಲನೆಗೊಡ್ಡುವ ಮುನ್ನ ಅದನ್ನು ಪ್ರಚುರಪಡಿಸುವುದನ್ನು ನಿಲ್ಲಿಸಬೇಕೆಂದು ಸರಕಾರ ಹೇಳಿತ್ತು. ಅಷ್ಟೇ ಅಲ್ಲದೆ ಉತ್ತರಾಖಂಡ ಸರಕಾರದ ಲೈಸನ್ಸಿಂಗ್ ಪ್ರಾಧಿಕಾರದಿಂದ ಔಷಧಿಗೆ ನೀಡಲಾದ ಅನುಮತಿ ಕುರಿತಾದ ದಾಖಲೆಗಳನ್ನು ನೀಡುವಂತೆಯೂ ತಿಳಿಸಿತ್ತು.

“ರಾಮದೇವ್ ಆವರ ಸಂಸ್ಥೆ  ಕೋವಿಡ್‍ಗೆ ಹೊಸ ಔಷಧಿ ಕಂಡುಹಿಡಿದಿರುವುದು ಒಳ್ಳೆಯ ಸಂಗತಿಯಾದರೂ ಅದು ಆಯುಷ್ ಸಚಿವಾಲಯದಿಂದ ಸೂಕ್ತ ಅನುಮತಿ ಪಡೆಯಬೇಕಿದೆ. ಔಷಧಿ ಕುರಿತ ದಾಖಲೆಗಳನ್ನು ಸಚಿವಾಲಯಕ್ಕೆ ಪತಂಜಲಿ ಬುಧವಾರವಷ್ಟೇ ಕಳುಹಿಸಿದೆ'' ಎಂದು ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News