ಬೆಂಗಳೂರು: ಮೊಮ್ಮಗನ ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡ ಬಳಿಕ ಕೊರೋನ ದೃಢ; ರೈಲ್ವೆ ಅಧಿಕಾರಿ ಅಮಾನತು

Update: 2020-06-25 13:07 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.25: ಇತ್ತೀಚೆಗೆ ಮೊಮ್ಮಗನ ಜನ್ಮದಿನಾಚರಣೆಯಲ್ಲಿ ಭಾಗಿಯಾಗಿದ್ದ ಬೆಂಗಳೂರು ರೈಲ್ವೇ ಅಧಿಕಾರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸುರಕ್ಷಿತ ಅಂತರ ಕಾಯ್ದುಕೊಳ್ಳದೇ ಜನ್ಮದಿನಾಚರಣೆಯಲ್ಲಿ ಭಾಗಿಯಾದ ಆರೋಪದ ಹಿನ್ನೆಲೆ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಬೆಂಗಳೂರು ರೈಲ್ವೇ ವಿಭಾಗದಲ್ಲಿ ಸೀನಿಯರ್ ಟೆಕ್ನಿಶಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಕೆಲ ದಿನಗಳ ಹಿಂದಷ್ಟೇ ಮೊಮ್ಮಗನ ಜನ್ಮದಿನದ ಹಿನ್ನೆಲೆಯಲ್ಲಿ ರೈಲ್ವೇ ಸಿಬ್ಬಂದಿಗಳಿರುವ ಕ್ವಾಟ್ರಸ್‍ ನಲ್ಲಿ ಪಾರ್ಟಿ ಮಾಡಿದ್ದರು. ಪಾರ್ಟಿ ಮಾಡಿದ ಎರಡು ದಿನಗಳಲ್ಲಿಯೇ ವ್ಯಕ್ತಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಇದರ ಜೊತೆಗೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮತ್ತಿಬ್ಬರು ನೌಕರರಲ್ಲಿಯೂ ಕೊರೋನ ದೃಡಪಟ್ಟಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರೈಲ್ವೇ ಇಲಾಖೆಯ ಅಧಿಕಾರಿ ಆಸಿಫ್ ಹಫೀಝ್, ಕೊರೋನ ದೃಢಪಟ್ಟಿರುವ ಅಧಿಕಾರಿ ಬೇಜವಾಬ್ದಾರಿತನದಿಂದ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮಾಡಿದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಕ್ವಾಟ್ರಸ್‍ನಲ್ಲಿ ಒಟ್ಟು 140 ಮನೆಗಳಿದ್ದು, ಅದೃಷ್ಟವಶಾತ್ ಯಾರೊಬ್ಬರು ಪಾರ್ಟಿಯಲ್ಲಿ ಪಾಲ್ಗೊಂಡಿಲ್ಲ. ಹೊರಗಿನಿಂದ ಬಂದಿದ್ದ ಅವರ ಸಂಬಂಧಿಕರಷ್ಟೇ ಪಾಲ್ಗೊಂಡಿದ್ದಾರೆ. ಪಾರ್ಟಿಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News