2011ರ ಜನಗಣತಿ ಪ್ರಕಾರ ವಾರ್ಡ್ ಪುನರ್ ವಿಂಗಡನೆ: ಬಿಬಿಎಂಪಿಯ ಕೆಲ ವಾರ್ಡ್ ಗಳ ಹೆಸರು ಬದಲಾವಣೆ

Update: 2020-06-25 13:09 GMT

ಬೆಂಗಳೂರು, ಜೂ.25: ರಾಜ್ಯ ಸರಕಾರ 2011ರ ಜನಗಣತಿ ಪ್ರಕಾರ ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆ ಮಾಡಿ ಅಧಿಸೂಚನೆ ಹೊರಡಿಸಿದ್ದು, ಕೆಲ ವಾರ್ಡ್ ಗಳ ಹೆಸರುಗಳನ್ನು ಬದಲಾವಣೆ ಮಾಡಿದೆ.

ಈಗಿರುವ 198 ವಾರ್ಡ್ ಗಳ ಸಂಖ್ಯೆ ಹಾಗೆಯೇ ಇರಲಿದ್ದು, ಕೆಲ ಸಣ್ಣಪುಟ್ಟ ವಾರ್ಡ್ ಗಳನ್ನು ಕೈಬಿಟ್ಟು ಕೆಲವು ವಾರ್ಡ್ ಗಳ ಹೆಸರು ಬದಲಾವಣೆ ಮಾಡಿ 198 ವಾರ್ಡ್ ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಬಿಬಿಎಂಪಿಯು 2007ರಲ್ಲಿ ರಚನೆಯಾಗಿದ್ದು, 198 ವಾರ್ಡ್ ಗಳನ್ನು ಅಂದಿನ ಜನಸಂಖ್ಯೆ ಮಾಹಿತಿ ಆಧರಿಸಿ ವಿಂಗಡಿಸಲಾಗಿತ್ತು. ನಂತರ 2011ರ ಜನಗಣತಿ ಆಧಾರದ ಮೇಲೆ ಪುನರ್ ವಿಂಗಡಿಸುವ ಪ್ರಕ್ರಿಯೆ ಇತ್ತೀಚೆಗೆ ಶುರುವಾಗಿತ್ತು. ಕಳೆದ ಮಾರ್ಚ್‍ನಲ್ಲಿ ವಾರ್ಡ್ ವಾರು ಕ್ಷೇತ್ರ ಪುನರ್ ವಿಂಗಡಿಸಿ ಕರಡು ಅಧಿಸೂಚನೆ ಹೊರಡಿಸಿ 15 ದಿನಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಅದರಂತೆ ಸಲ್ಲಿಕೆಯಾಗಿದ್ದ ಆಕ್ಷೇಪಣೆಗಳು, ಸಲಹೆಗಳನ್ನು ಪರಿಶೀಲಿಸಿ ಕೆಲವನ್ನು ಪರಿಗಣಿಸಲಾಗಿತ್ತು. ಅದರಂತೆ 2011ರ ಜನಗಣತಿಯ ಆಧಾರದ ಮೇರೆಗೆ ಬಿಬಿಎಂಪಿಯ 198 ವಾರ್ಡ್ ಗಳನ್ನು ಪುನರ್‍ವಿಂಗಡಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಬಿಬಿಎಂಪಿ ಆಡಳಿತಾವಧಿ ಸೆಪ್ಟೆಂಬರ್ 10ರಂದು ಕೊನೆಗೊಳ್ಳಲಿದ್ದು, ಈಗಾಗಲೇ ವಾರ್ಡ್ ಪುನರ್ವಿಂಗಡಣೆ ಅಧಿಸೂಚನೆ ಹೊರಬಿದ್ದಿರುವುದರಿಂದ ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ನಡೆಯುವುದು ಬಹುತೇಕ ನಿಶ್ಚಿತವಾಗಿದೆ ಎನ್ನಲಾಗುತ್ತಿದೆ.

ಹೊಸ ವಾರ್ಡ್ ಗಳು: ಕೋಗಿಲು, ಗುಂಡಾಂಜನೇಯ ದೇವಸ್ಥಾನ, ಅಮೃತಹಳ್ಳಿ, ರಾಮಚಂದ್ರಪುರ, ಚಿಕ್ಕಸಂದ್ರ, ಬೃಂದಾವನ ನಗರ, ಹೆಣ್ಣೂರು, ಚಳ್ಳಕೆರೆ, ಕಲ್ಕೆರೆ, ಜೆಸಿ ನಗರ, ಮಾರುತಿನಗರ, ಸುಂಕದಕಟ್ಟೆ, ಗೊಲ್ಲರಪಾಳ್ಯ ಹೊಸಳ್ಳಿ, ಸರ್.ಎಂ.ವಿಶ್ವೇಶ್ವರಯ್ಯ, ಶೇಷಾದ್ರಿಪುರಂ, ವೈಟ್‍ಫೀಲ್ಡ್, ಮಾರೇನಹಳ್ಳಿ, ಹನುಮಗಿರಿ ದೇವಸ್ಥಾನ, ಕಲ್ಯಾಣನಗರ, ನಾಗದೇವನಹಳ್ಳಿ, ದೊಡ್ಡಕನ್ನಹಳ್ಳಿ, ಧರ್ಮಗಿರಿ ಮಂಜುನಾಥ ಸ್ವಾಮಿ, ಸುಬ್ರಹ್ಮಣ್ಯಪುರ, ಕೂಡ್ಲು, ದೇವರಚಿಕ್ಕನಹಳ್ಳಿ ಹಾಗೂ ಕಾಳೇನ ಅಗ್ರಹಾರ ಹೊಸ ವಾರ್ಡ್ ಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News