ತುರ್ತುಪರಿಸ್ಥಿತಿ ವಿರುದ್ಧ ಹೋರಾಡಿದವರ ತ್ಯಾಗವನ್ನು ದೇಶ ಮರೆಯದು: ಮೋದಿ ಟ್ವೀಟ್

Update: 2020-06-25 15:05 GMT

ಹೊಸದಿಲ್ಲಿ,ಜೂ.25: ತುರ್ತು ಪರಿಸ್ಥಿತಿ ಹೇರಿಕೆಗೆ 45 ವರ್ಷಗಳಾದ ಹಿನ್ನೆಲೆಯಲ್ಲಿ ಗುರುವಾರ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತದ ಪ್ರಜಾಪ್ರಭುತ್ವದ ರಕ್ಷಣೆಗೆ ಹೋರಾಡಿದ ಜನರ ತ್ಯಾಗವನ್ನು ಮರೆಯಲಾಗದು ಎಂದು ಹೇಳಿದ್ದಾರೆ.

 1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ವಿರುದ್ಧ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಅವರ ಅಧಿಕಾರಕ್ಕೆ ಕೆಳಗಿಳಿಯಬೇಕಾದಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಇದನ್ನು ತಡೆಯಲು ಅವರು ದೇಶಾದ್ಯಂತ ತುರ್ತುಪರಿಸ್ಥಿತಿ ಹೇರಿದ್ದರು. ಎಲ್ಲಾ ಸಾಂವಿಧಾನಿಕ ಹಕ್ಕುಗಳನ್ನು ಸ್ಥಗಿತಗೊಳಿಸಿ, ಹಲವಾರು ಪ್ರತಿಪಕ್ಷ ನಾಯಕರನ್ನು ಜೈಲಿಗೆ ತಳ್ಳಿದ್ದರು.

 ತುರ್ತುಪರಿಸ್ಥಿತಿಯನ್ನು ಜೂನ್ 1975ರಿಂದ ಮಾರ್ಚ್ 1977ರವರೆಗೆ ಹೇರಲಾಗಿತ್ತು.

‘‘ಇಂದಿಗೆ ನಿಖರವಾಗಿ 45 ವರ್ಷಗಳ ಹಿಂದೆ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. ಈ ಸಮಯದಲ್ಲಿ ದೇಶದ ಪ್ರಜಾಪ್ರಭುತ್ವದ ರಕ್ಷಣೆಗೆ ಹೋರಾಡಿದ ಜನರು ಚಿತ್ರಹಿಂಸೆ ಅನುಭವಿಸಿದರು, ಅವರೆಲ್ಲರಿಗೂ ನನ್ನ ನಮನಗಳು. ಅವರ ತ್ಯಾಗವನ್ನು ದೇಶವು ಎಂದಿಗೂ ಮರೆಯದು’’ ಎಂದು ಮೋದಿ ಹಿಂದಿಯಲ್ಲಿ ಟ್ವೀಟಿಸಿದ್ದಾರೆ.

  ‘‘ತುರ್ತು ಪರಿಸ್ಥಿತಿ ಹೇರಿಕೆಯಾದಾಗ, ಅದಕ್ಕೆ ವ್ಯಕ್ತವಾದ ವಿರೋಧವು ಕೇವಲ ರಾಜಕೀಯ ವರ್ಗಕ್ಕೆ ಸೀಮಿತವಾಗಿರಲಿಲ್ಲ, ಪ್ರತಿಯೊಬ್ಬರನ್ನೂ ಅಸಮಾಧಾನಗೊಳ್ಳುವಂತೆ ಮಾಡಿತು. ಕಳೆದುಹೋದ ಪ್ರಜಾಪ್ರಭುತ್ವವನ್ನು ಮರಳಿ ಪಡೆಯು ವುದಕ್ಕಾಗಿ ಜನರು ರೋಷತಪ್ತರಾಗಿದ್ದರು. ತಮ್ಮಿಂದ ಏನೋ ಒಂದನ್ನು ಕಿತ್ತುಕೊಳ್ಳಲಾಗಿದೆ ಎಂದು ಪ್ರತಿಯೊಬ್ಬ ನಾಗರಿಕನೂ ಭಾವಿಸಿದ್ದನು ’’ ಎಂದು ಪ್ರಧಾನಿಯವರು ತನ್ನ ಟ್ವೀಟ್ ಜೊತೆ ಶೇರ್ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.

  ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಹಾಗೂ ಗಾಂಧಿ ಪರಿವಾರವನ್ನು ಗುರಿಯಿರಿಸಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಅಧಿಕಾರಕ್ಕಾಗಿ ಒಂದು ಕುಟುಂಬದ ದುರಾಸೆಯು, ದೇಶವನ್ನು ರಾತ್ರೋರಾತ್ರಿ ಬಂಧಿಖಾನೆಯಾಗಿ ಪರಿವರ್ತಿಸಿತು ಎಂದು ಹೇಳಿದ್ದಾರೆ.

‘‘ ಮಾಧ್ಯಮ, ನ್ಯಾಯಾಲಯಗಳು, ಮುಕ್ತ ಸ್ವಾತಂತ್ರ್ಯ ಹೀಗೆ ಎಲ್ಲವನ್ನೂ ತುಳಿಯಲಾಯಿತು. ಬಡವರು ಹಾಗೂ ದಮನಿತರ ಮೇಲೆ ದೌರ್ಜನ್ಯಗಳನ್ನು ಎಸಗಲಾಯಿತು’’ ಎಂದು ಶಾ ಟ್ವೀಟಿಸಿದ್ದಾರೆ .

 ಲಕ್ಷಾಂತರ ಜನರ ಪರಿಶ್ರಮದಿಂದಾಗಿ ತುರ್ತುಪರಿಸ್ಥಿತಿಯನ್ನು ರದ್ದುಗೊಂಡಿತು. ಭಾರತದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಗೊಂಡಿತು. ಆದಾಗ್ಯೂ ಕಾಂಗ್ರೆಸ್‌ನಲ್ಲಿ ಅದು ಬಾರಲೇ ಇಲ್ಲ. ಒಂದು ಪಕ್ಷದ ಹಿತಾಸಕ್ತಿಗಿಂತ ಮಿಗಿಲಾಗಿ ಒಂದು ಕುಟುಂಬದ ಹಿತಾಸಕ್ತಿಯೇ ಮೇಲುಗೈ ಪಡೆಯಿತು. ಇಂದಿನ ಕಾಂಗ್ರೆಸ್ ಪಕ್ಷದ ಶೋಚನೀಯ ಸ್ಥಿತಿ ಇದಾಗಿದೆ ಎಂದು ಗೃಹ ಸಚಿವರು ಟ್ವೀಟ್ ಮಾಡಿದ್ದಾರೆ.

ಎರಡು ವ್ಯಕ್ತಿಗಳ ಸರಕಾರ: ಕಾಂಗ್ರೆಸ್ ಎದಿರೇಟು

    ಬಿಜೆಪಿ ನಾಯಕರ ಟೀಕೆಗಳಿಗೆ ಎದಿರೇಟು ನೀಡಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು “ಕೇವಲ ಇಬ್ಬರು ವ್ಯಕ್ತಿಗಳಿಂದ ದೇಶದಲ್ಲಿ ಆಳ್ವಿಕೆ ನಡೆಯುತ್ತಿದ್ದು, ಉಳಿದವರೆಲ್ಲರೂ ಅಂಟುಪುರಳೆಗಳಂತಿದ್ದಾರೆ. ಕುದುರೆ ವ್ಯಾಪಾರ, ಸಾಮೂಹಿಕ ಪಕ್ಷಾಂತರ ಹಾಗೂ ಸಾಂಸ್ಥಿಕ ಸ್ವಾಧೀನತೆ ಮಾತ್ರವೇ ಈ ಸರಕಾರದ ಹೆಗ್ಗಳಿಕೆಯಾಗಿದೆಯೇ?” ಎಂದವರು ಟ್ವೀಟಿಸಿದ್ದಾರೆ.

 ಸರಕಾರವು ನೆಹರೂ-ಗಾಂಧ ಕುಟುಂಬದ ವಿರುದ್ಧ ಯಾಕೆ ಇಷ್ಟೊಂದು ದ್ವೇಷ ಬೆಳೆಸಿಕೊಂಡಿದೆ ಎಂದವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News