ಸೋಮವಾರದಿಂದ ನಿಮ್ಹಾನ್ಸ್ ಪ್ರಯೋಗಾಲಯ ಪುನಾರಾರಂಭ

Update: 2020-06-29 17:50 GMT

ಬೆಂಗಳೂರು, ಜೂ.29: ಸಿಬ್ಬಂದಿ ಕೊರೋನ ಸೋಂಕಿಗೆ ಒಳಗಾದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ಪ್ರಯೋಗಾಲಯ ಆರಂಭಗೊಂಡ ಬೆನ್ನಲ್ಲೇ, ಇಂದಿನಿಂದ(ಸೋಮವಾರ) ನಿಮ್ಹಾನ್ಸ್ ಪ್ರಯೋಗಾಲಯವೂ ಪುನರಾರಂಭವಾಗಿದೆ.

ವಿಕ್ಟೋರಿಯಾ ಪ್ರಯೋಗಾಲಯ ಸಿಬ್ಬಂದಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಚ್ಚಿ ಸ್ವಚ್ಛಗೊಳಿಸಲಾಗಿತ್ತು. ಅದೇ ರೀತಿ ನಿಮ್ಹಾನ್ಸ್ ಪ್ರಯೋಗಾಲಯದ ಸಿಬ್ಬಂದಿಗೆ ಸೋಂಕು ಶಂಕೆಯಿಂದಾಗಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು.

ಈ ಎರಡೂ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸದೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು. ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಗಂಟಲುದ್ರವ ಮಾದರಿ ಸಂಗ್ರಹಿಸಿ ಇಲ್ಲಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ, ಪ್ರಯೋಗಾಲಯಗಳು ಸ್ಥಗಿತವಾಗಿದ್ದರಿಂದ ಕಿದ್ವಾಯಿ, ಎನ್‍ಐವಿ ಸೇರಿದಂತೆ ನಗರದ ಇತರೆ ಪ್ರಯೋಗಾಲಯಗಳಿಗೆ ಹೊರೆ ಹೆಚ್ಚಾಗಿತ್ತು.

ಸದ್ಯ ರಾಜ್ಯದಲ್ಲಿ ಐಸಿಎಂಆರ್ ಮಾನ್ಯತೆ ಹೊಂದಿರುವ 75 ಕೋವಿಡ್ ಪ್ರಯೋಗಾಲಯಗಳಿವೆ. ದಿನೇ ದಿನೇ ಬರುವ ಗಂಟಲುದ್ರವ ಮಾದರಿಗಳ ಸಂಖ್ಯೆ ಅಧಿಕವಾಗುತ್ತಿರುವುದರಿಂದ ವರದಿ ಬರುವುದು ವಿಳಂಬವಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News