ಅತಂತ್ರಗೊಂಡ ಸಂಸದರ ‘ದತ್ತು ಮಕ್ಕಳು’

Update: 2020-07-05 13:53 GMT

ಕೃತಿಯೊಂದರ ಆಕರ್ಷಕ ಮುಖಪುಟವನ್ನು ಕಂಡು ಇಷ್ಟಪಟ್ಟು ಆ ಪುಸ್ತಕವನ್ನು ಬಿಡಿಸಿದರೆ ಪುಟಗಳೆಲ್ಲ ಖಾಲಿ ಖಾಲಿ! ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಜಾರಿಗೆ ತಂದ ಬಹುತೇಕ ಯೋಜನೆಗಳ ಕತೆ ಆಕರ್ಷಕ ಮುಖಪುಟ ಹೊಂದಿದ ಖಾಲಿ ಹಾಳೆಗಳ ಪುಸ್ತಕದಂತಿದೆ. ಅಂತಹ ಪುಸ್ತಕಗಳಲ್ಲಿ ಒಂದರ ಹೆಸರು ‘ಸಂಸದರ ಆದರ್ಶ ಗ್ರಾಮ ಯೋಜನೆ’ (ಎಸ್‌ಎಜಿವೈ). ಬೃಹತ್ ಯೋಜನೆಗಳನ್ನು ಅದ್ದೂರಿ, ಆಡಂಬರದೊಂದಿಗೆ ಚಾಲನೆ ನೀಡುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ನಿಷ್ಣಾತರು. 2014ರ ಅಕ್ಟೋಬರ್‌ನಲ್ಲಿ ‘ಸಂಸದರ ಆದರ್ಶ ಗ್ರಾಮ ಯೋಜನೆ’ಗೆ ಚಾಲನೆ ನೀಡಲಾಯಿತು. ಪ್ರತಿಯೊಬ್ಬ ಸಂಸತ್ ಸದಸ್ಯರು ಅವರ ಕ್ಷೇತ್ರದ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು, ಅದನ್ನು ಮಾದರಿ ಗ್ರಾಮವಾಗಿ ಅಭಿವೃದ್ಧಿಪಡಿಸಬೇಕೆಂಬುದೇ ಈ ಯೋಜನೆಯ ಹಿಂದಿರುವ ಚಿಂತನೆಯಾಗಿದೆ. ಇತರ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲು ಇದೊಂದು ನೀಲನಕಾಶೆಯಾಗಬೇಕೆಂಬುದೇ ಸರಕಾರದ ಇಂಗಿತವಾಗಿತ್ತು. ದತ್ತು ತೆಗೆದುಕೊಂಡ ಗ್ರಾಮವನ್ನು 2016ರೊಳಗೆ ಅಭಿವೃದ್ಧಿಪಡಿಸಬೇಕು ಹಾಗೂ 2019ರ ಮಾರ್ಚ್‌ನೊಳಗೆ ಮೂರು ಆದರ್ಶ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕೆಂಬುದೇ ಯೋಜನೆಯ ಗುರಿಯಾಗಿದೆ. ತರುವಾಯ ಪ್ರತಿಯೊಬ್ಬ ಸಂಸದರೂ ಇಂತಹ ಐದು ಆದರ್ಶ ಗ್ರಾಮಗಳನ್ನು 2024ರೊಳಗೆ ಅಭಿವೃದ್ಧಿಪಡಿಸಬೇಕಾಗುತ್ತದೆ. ಈ ಯೋಜನೆಯ ಉದ್ದೇಶವನ್ನು ಪ್ರಶ್ನಿಸುವಂತೆಯೇ ಇಲ್ಲ. ಅತ್ಯಂತ ದೂರದೃಷ್ಟಿಯುಳ್ಳ ಯೋಜನೆ ಇದಾಗಿದೆ. ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದದ್ದೇ ಆದರೆ ಇಡೀ ಗ್ರಾಮೀಣ ಭಾರತ ಇಂದು ಹಂತ ಹಂತವಾಗಿ ಸ್ವಾವಲಂಬಿಗೊಂಡು, ಕುಸಿಯುತ್ತಿರುವ ಭಾರತವನ್ನು ಎತ್ತಿ ನಿಲ್ಲಿಸುತ್ತಿತ್ತು. ಯೋಜನೆಯ ಮೊದಲ ಹಂತದಲ್ಲಿ 786 ಸಂಸದರ ಪೈಕಿ 703 ಮಂದಿ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದರು. ಆನಂತರ ಗ್ರಾಮಗಳ ದತ್ತು ಸ್ವೀಕಾರದ ಟ್ರೆಂಡ್ ಇಳಿಮುಖವಾಗುತ್ತಾ ಹೋಯಿತು. 2ನೇ ಹಂತದಲ್ಲಿ 466 ಎಂಪಿಗಳು ಗ್ರಾಮಗಳನ್ನು ದತ್ತು ಸ್ವೀಕಾರಕ್ಕೆ ಗುರುತಿಸಿದ್ದರು. ಮೂರನೇ ಹಂತದಲ್ಲಿ ಈ ಸಂಖ್ಯೆಯು ಗಣನೀಯವಾಗಿ ಕುಸಿದು, ಕೇವಲ 172 ಸಂಸದರು ಮಾತ್ರವೇ ಗ್ರಾಮಗಳ ದತ್ತು ಸ್ವೀಕಾರಕ್ಕೆ ಮುಂದಾಗಿದ್ದರು. ಉದ್ಘಾಟನೆಯ ಸಂದರ್ಭದಲ್ಲಿ ಇದ್ದ ಉತ್ಸಾಹ ಅದನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಇಲ್ಲವಾಯಿತು. ಆದಾಗ್ಯೂ, ಚಾಲನೆ ದೊರೆತು 6 ವರ್ಷಗಳಾದ ಆನಂತರವೂ ಸಂಸದರ ಆದರ್ಶ ಗ್ರಾಮ ಯೋಜನೆಯು, ಆಯ್ದ ಗ್ರಾಮ ಪಂಚಾಯತ್‌ಗಳಲ್ಲಿ ಅಭಿವೃದ್ಧಿಯ ಶಕೆಯನ್ನು ಆರಂಭಿಸುವಲ್ಲಿ ವಿಫಲವಾಗಿದೆ. ಈ ಮಧ್ಯೆ ಕೇಂದ್ರ ಕಾರ್ಯನಿರ್ವಹಣಾ ಪರಿಶೀಲನಾ ಸಮಿತಿ (ಸಿಆರ್‌ಎಂ), ಈ ಯೋಜನೆಯನ್ನು ಮುಂದುವರಿಸಬೇಕೇ ಎಂಬ ಬಗ್ಗೆ ಮರುವಿಮರ್ಶೆ ಮಾಡುವಂತೆ ಆಗ್ರಹಿಸಿತ್ತು. ಗ್ರಾಮೀಣಾಭಿವೃದ್ಧಿ ಸಚಿವಾಲಯದ ನಿಯೋಜಿತವಾದ ಪರಾಮರ್ಶನಾ ಮಿಶನ್-2019 ಕೂಡಾ ತನ್ನ ವರದಿಯಲ್ಲಿ ಎಸ್‌ಎಜಿವೈ ಯೋಜನೆ ಗಣನೀಯವಾದ ಪರಿಣಾಮ ಬೀರಿಲ್ಲವೆಂದು ಹೇಳಿದೆ. ಹಲವಾರು ಎಸ್‌ಎಜಿವೈ ಗ್ರಾಮಗಳಿಗೆ ಸಂಸದರು ತಮ್ಮ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ (ಎಂಪಿಎಲ್‌ಎಡಿ)ಯೋಜನೆಯಿಂದ ಗಣನೀಯ ಮೊತ್ತದ ಹಣವನ್ನು ಬಿಡುಗಡೆಗೊಳಿಸಿಲ್ಲದಿರುವುದನ್ನು ವರದಿ ಬಹಿರಂಗಪಡಿಸಿದೆ. ಕೇಂದ್ರದ ಆಡಳಿತಾರೂಢ ಪಕ್ಷವಾದ ಬಿಜೆಪಿಯು ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಒಟ್ಟು 378 ಎಂಪಿಗಳನ್ನು ಹೊಂದಿದೆ. ವಿಪರ್ಯಾಸವೆಂದರೆ, ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಬಿಜೆಪಿ ಸಂಸದರ ಪಾಲುದಾರಿಕೆಯೇ ನಿರಾಶದಾಯಕವಾಗಿದೆ. ಕನಿಷ್ಠ ಮೋದಿ ಸರಕಾರವು ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಬಿಜೆಪಿ ಸಂಸದರನ್ನು ಉತ್ತೇಜಿಸುವ ಕೆಲಸವನ್ನಾದರೂ ಮಾಡಬೇಕಿತ್ತು. ಆರು ವರ್ಷಗಳಾದ ಬಳಿಕವೂ ಈ ಮಹತ್ವಾಕಾಂಕ್ಷಿ ಯೋಜನೆಯು ಇನ್ನೂ ಶೈಶವಾವಸ್ಥೆಯಲ್ಲೇ ಇದೆ. ಸಂಸದರು ಯಾಕೆ ಈ ಯೋಜನೆಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಮೋದಿಯವರೇ ಉತ್ತರವನ್ನು ನೀಡಬೇಕು. ಸರಕಾರವು ಯಾವುದೇ ಒಂದು ಯೋಜನೆಯನ್ನು ಆರಂಭಿಸುವಾಗ, ಅದಕ್ಕೆ ಇಷ್ಟೆಂದು ಹಣವನ್ನು ಮೀಸಲಿಡುತ್ತದೆ. ಎಸ್‌ಎಜಿವೈ ಯೋಜನೆಯಡಿ ತಾವು ದತ್ತು ಸ್ವೀಕರಿಸಿದ ಗ್ರಾಮಗಳಿಗೆ ಸಂಸತ್ ಸದಸ್ಯರು ತಮ್ಮ ಎಂಪಿಎಲ್‌ಎಡಿ ನಿಧಿಯ ಹಣವನ್ನು ನೀಡಬೇಕಾಗುತ್ತದೆ. ಈ ಯೋಜನೆಯ ಮೊದಲ ತೊಡಕು ಇದೇ ಆಗಿದೆ. ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಗೆ ಪ್ರತಿಯೊಬ್ಬ ಸಂಸದರು ವಾರ್ಷಿಕವಾಗಿ 5 ಕೋಟಿ ರೂ.ಗಳನ್ನು ಪಡೆದುಕೊಳ್ಳುತ್ತಾರೆ. ಈ ಹಣವನ್ನು ಕೇವಲ ಒಂದು ನಿರ್ದಿಷ್ಟ ಗ್ರಾಮಕ್ಕೆ ಮೀಸಲಿರಿಸಿದರೆ ಉಳಿದ ಗ್ರಾಮಗಳ ಜನತೆ ಅಸಮಾಧಾನ ಹೊಂದುತ್ತಾರೆ ಎನ್ನುವ ಆರೋಪವಿದೆ. ಜೊತೆಗೆ, ಬಿಜೆಪಿ ಸಂಸದನೊಬ್ಬ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳುವಾಗ ಕೋಮು, ಜಾತಿ, ಆಧಾರಿತ ಮಾನದಂಡ ಅನುಸರಿಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಇದರಿಂದಾಗಿ ಈಗಾಗಲೇ ಭಾರತವನ್ನು ಕಾಡುತ್ತಿರುವ ಅಸಮತೋಲನದ ಅಭಿವೃದ್ಧಿಯು, ಸಂಸದರ ಆದರ್ಶ ಗ್ರಾಮ ಯೋಜನೆಯಿಂದಾಗಿ ಇನ್ನಷ್ಟು ಬೃಹದಾಕಾರವಾಗಿ ಬೆಳೆಯುವ ಅಪಾಯವಿದೆ. ಎಂಪಿಎಲ್‌ಎಡಿ ನಿಧಿಯನ್ನು ಸಂಸದರು ಅತ್ಯಗತ್ಯವಾಗಿರುವ ಎಲ್ಲ ಕ್ಷೇತ್ರಗಳಿಗೆ ಸಮಾನವಾಗಿ ಹಂಚಬೇಕು ಅಥವಾ ಈ ಹಂಚುವಿಕೆಯಲ್ಲಿ ಸಮನ್ವಯವನ್ನು ಕಾಪಾಡಬೇಕು. ದತ್ತು ತೆಗೆದುಕೊಳ್ಳುವ ಗ್ರಾಮಗಳನ್ನು ಗುರುತಿಸಿದ ಬಳಿಕ ಮುಂದಿನ ಆಡಳಿತಾತ್ಮಕ ಪ್ರಕ್ರಿಯೆಗಳು ಚುರುಕುಗೊಳ್ಳದಿರುವುದು, ಎಂಪಿಗಳ ನಿರಾಸಕ್ತಿಗೆ ಇನ್ನೊಂದು ಕಾರಣವಾಗಿದೆ. ಅಲ್ಲದೆ, ಶಾಸಕರು ಮತ್ತು ಸಂಸದರ ನಡುವಿನ ಸಮನ್ವಯದ ಕೊರತೆಯೂ ಯೋಜನೆ ವಿಫಲವಾಗುವುದಕ್ಕೆ ಮತ್ತೊಂದು ಕಾರಣವಾಗಿದೆ. ಆಧುನಿಕ ತಂತ್ರಜ್ಞಾನದ ಪರಿಣತಿಯಿರುವ ಅಧಿಕಾರಿಗಳ ಕೊರತೆಯು ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಕಾರ್ಯಗತಗೊಳಿಸುವುದಕ್ಕೆ ಮಗದೊಂದು ಹಿನ್ನಡೆಯಾಗಿದೆ. ದತ್ತು ಸ್ವೀಕರಿಸಲಾದ ಗ್ರಾಮವನ್ನು ಅಭಿವೃದ್ಧಿಪಡಿಸುವುದಕ್ಕೆ ಕಾಲಮಿತಿಯ ಕೊರತೆಯು, ಯೋಜನೆಯ ಉದ್ದೇಶವನ್ನೇ ವಿಫಲಗೊಳಿಸಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಈ ಯೋಜನೆಯಲ್ಲಿ ಗ್ರಾಮ ಪಂಚಾಯತ್‌ಗೆ ಯಾವುದೇ ರೀತಿ ಅಧಿಕಾರವನ್ನು ನೀಡಲಾಗಿಲ್ಲ.

ಭಾರತದಲ್ಲಿ ಸರಕಾರ ಆರಂಭಿಸಿದ ಅನೇಕ ಯೋಜನೆಗಳು ಭ್ರಷ್ಟಾಚಾರದ ಏಕೈಕ ಕಾರಣದಿಂದಾಗಿ ತನ್ನ ಗುರಿಯನ್ನು ಸಾಧಿಸುವಲ್ಲಿ ವಿಫಲವಾಗಿದೆಂಬುದು ಕಟು ವಾಸ್ತವವಾಗಿದೆ. ಎಂನರೇಗಾ ಯೋಜನೆ ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಡಂಬರದೊಂದಿಗೆ ಚಾಲನೆ ನೀಡಿದ್ದರೂ, ಕಳಪೆ ಪ್ಲಾನಿಂಗ್ ಹಾಗೂ ಸ್ಪಷ್ಟವಾದ ಕಾರ್ಯತಂತ್ರವಿಲ್ಲದಿರುವುದು ಸಂಸದರ ಆದರ್ಶ ಗ್ರಾಮ ಯೋಜನೆಯು ದಯನೀಯವಾಗಿ ವಿಫಲಗೊಳ್ಳುವಂತೆ ಮಾಡಿದೆ. ಸ್ವತಃ ಮೋದಿಯವರು ತೆಗೆದುಕೊಂಡ ದತ್ತು ಗ್ರಾಮಗಳ ದೈನೇಸಿ ಸ್ಥಿತಿಯೇ ಇಡೀ ಯೋಜನೆಯ ದೈನೇಸಿತನವನ್ನು ಬಹಿರಂಗಪಡಿಸುತ್ತದೆ. ಈ ದತ್ತು ಗ್ರಾಮಗಳು ಮತ್ತು ಮೋದಿಯವರ ಕನಸಿನ ಸ್ಮಾರ್ಟ್ ಸಿಟಿಗಳ ಗತಿ, ಮೋದಿಯವರನ್ನು ಒಬ್ಬ ವಿಫಲ ಕನಸುಗಾರನನ್ನಾಗಿಸಿದೆ. ಇತಿಹಾಸದಲ್ಲಿ ಮುಹಮ್ಮದ್ ಬಿನ್ ತುಘಲಕ್ ಅದ್ಭುತ ಕನಸುಗಳನ್ನು ಕಾಣುತ್ತಾನೆ. ಆದರೆ ಅದನ್ನು ಜಾರಿಗೆ ತರುವ ಸಂದರ್ಭದಲ್ಲಿ ಸಂಪೂರ್ಣ ವಿಫಲಗೊಂಡು, ಇಡೀ ದೇಶವನ್ನೇ ಅತಂತ್ರತೆಗೆ ತಳ್ಳುತ್ತಾನೆ. ಈ ನಿಟ್ಟಿನಲ್ಲಿ ಮೋದಿಯವರನ್ನು ಆಧುನಿಕ ಮುಹಮ್ಮದ್ ಬಿನ್ ತುಘಲಕ್‌ಗೆ ಧಾರಾಳವಾಗಿ ಹೋಲಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News