ಕೊರೋನ ಲಸಿಕೆಯ ಪರೀಕ್ಷಾರ್ಥ ಪ್ರಯೋಗಗಳು ಮುಗಿಯಲು ಕನಿಷ್ಠ 6ರಿಂದ 9 ತಿಂಗಳು ಬೇಕು

Update: 2020-07-05 16:26 GMT
Photo: twitter.com/doctorsoumya

ಹೊಸದಿಲ್ಲಿ,ಜು.5: ಹೈದರಾಬಾದ್‌ ನ ಭಾರತ ಬಯೊಟೆಕ್ ಔಷಧಿ ತಯಾರಿಕೆ ಕಂಪನಿಯು ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆಯ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಿರುವ ಕೋವಿಡ್-19 ಲಸಿಕೆ ‘ಕೋವ್ಯಾಕ್ಸಿನ್’ ಅನ್ನು ಆ.15ರೊಳಗೆ ರೋಗಿಗಳ ಮೇಲೆ ಪರೀಕ್ಷಾರ್ಥ ಪ್ರಯೋಗಕ್ಕೆ ಬಿಡುಗಡೆಗೊಳಿಸುವ ತರಾತುರಿಯಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ನಡೆಯನ್ನು ಈಗಾಗಲೇ ಭಾರತೀಯ ವಿಜ್ಞಾನ ಸಮುದಾಯವು ಟೀಕಿಸಿದೆ. ಇಷ್ಟೊಂದು ತರಾತುರಿಯಲ್ಲಿ ಈ ಲಸಿಕೆಯನ್ನು ಬಿಡುಗಡೆಗೊಳಿಸುವುದರಿಂದ ಅದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ರಾಜಿ ಮಾಡಿಕೊಂಡಂತಾಗುತ್ತದೆ ಎಂದು ಖ್ಯಾತ ವಿಜ್ಞಾನಿಗಳು ಬೆಟ್ಟು ಮಾಡಿದ್ದಾರೆ. ಕೋವಿಡ್-19 ವಿರುದ್ಧ ಲಸಿಕೆಯನ್ನು ಸಿದ್ಧಗೊಳಿಸಲು ಕನಿಷ್ಠ 12ರಿಂದ 18 ತಿಂಗಳುಗಳು ಬೇಕಾಗುತ್ತವೆ ಎಂದು ವಿಶ್ವ್ವಾದ್ಯಂತದ ತಜ್ಞರೂ ಹೇಳಿದ್ದಾರೆ. ತನ್ಮಧ್ಯೆ ಸುದ್ದಿಸಂಸ್ಥೆಯನ್ನು ಸಂಪರ್ಕಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು,ಎಲ್ಲವೂ ಯೋಜಿಸಿದಂತೆಯೇ ನಡೆದರೆ ಕೋವಿಡ್-19 ಲಸಿಕೆಯ ಪರೀಕ್ಷಾರ್ಥ ಪ್ರಯೋಗಗಳ ಮೊದಲ ಹಂತದಿಂದ ಆರಂಭಗೊಂಡು ಮೂರನೇ ಹಂತ ಪೂರ್ಣಗೊಳ್ಳುವವರೆಗೆ ಕನಿಷ್ಠ 6ರಿಂದ 9 ತಿಂಗಳುಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಭಾರತ ಬಯೊಟೆಕ್ ಕೋವ್ಯಾಕ್ಸಿನ್‌ನ ಒಂದು ಮತ್ತು ಎರಡನೇ ಹಂತದ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಲು ಮಾತ್ರ ಅನುಮತಿಯನ್ನು ಪಡೆದಿದೆ. ಅಂದರೆ ಈ ವರ್ಷದ ಆ.15ರ ಐಸಿಎಂಆರ್ ಗಡುವಿನೊಳಗೆ ಲಸಿಕೆಯನ್ನು ಬಿಡುಗಡೆಗೊಳಿಸುವುದರ ಅರ್ಥ ರೋಗಿಗಳ ಸುರಕ್ಷತೆ ಮತ್ತು ಔಷಧಿಯ ಪರಿಣಾಮಕಾರಿತ್ವವನ್ನು ಪರೀಕ್ಷೆಗೊಡ್ಡುವ ಮೂರನೇ ಹಂತದ ಪ್ರಯೋಗಗಳನ್ನು ಕೈಬಿಡಬೇಕಾಗಬಹುದು ಅಥವಾ ಅದನ್ನು ಅವಸರವಸರದಲ್ಲಿ ಮುಗಿಸಬೇಕಾಗಬಹುದು.

  ಸುದ್ದಿಸಂಸ್ಥೆಯೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ ಸ್ವಾಮಿನಾಥನ್,ಯಾವುದೇ ಲಸಿಕೆಯು ಪರೀಕ್ಷಾರ್ಥ ಪ್ರಯೋಗಗಳಲ್ಲಿ ಪಾಲ್ಗೊಂಡವರ ಪೈಕಿ ಹೆಚ್ಚಿನವರಲ್ಲಿ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಸಾಬೀತುಗೊಳಿಸಬೇಕಾಗುತ್ತದೆ. ಈ ಬಗ್ಗೆ ಡಬ್ಲ್ಯುಎಚ್‌ಒ  ನೀತಿಯೊಂದನ್ನು ಹೊಂದಿದೆ ಮತ್ತು ಈ ನೀತಿಯಂತೆ ಪ್ರತಿರಕ್ಷಣಾಜನಕತೆಯ ಡಾಟಾ ಒಂದೇ ಸಾಕಾಗುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವ ಯಾವುದೇ ಲಸಿಕೆಯಾದರೂ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಪ್ರದರ್ಶಿಸಲೇಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News