ಜಲಮಂಡಳಿ: ನೀರು, ಒಳಚರಂಡಿ ಸಂಪರ್ಕ ಮಂಜೂರು ಮಾಡಲು ಲಕ್ಷಾಂತರ ಆನ್‍ಲೈನ್ ಅರ್ಜಿ ಸಲ್ಲಿಕೆ

Update: 2020-07-06 18:33 GMT

ಬೆಂಗಳೂರು, ಜು.6: ನೀರು ಮತ್ತು ಒಳಚರಂಡಿ ಸಂಪರ್ಕವನ್ನು ಮಂಜೂರು ಮಾಡಲು ಜಲಮಂಡಳಿಗೆ ಇಲ್ಲಿಯವರೆಗೂ ಲಕ್ಷಕ್ಕೂ ಅಧಿಕ ಅರ್ಜಿಗಳು ಆನ್‍ಲೈನ್‍ನಲ್ಲಿ ಸಲ್ಲಿಕೆಯಾಗಿವೆ.

ಸಾರ್ವಜನಿಕರಿಂದ ಸ್ವೀಕರಿಸುವ ನೀರಿನ ಮತ್ತು ಒಳಚರಂಡಿ ಸಂಪರ್ಕದ ಮುದ್ರಿತ ಅರ್ಜಿಗಳನ್ನು 2017 ಫೆಬ್ರವರಿಯಿಂದ ನಿಲ್ಲಿಸಲು ಮಂಡಳಿ ಆದೇಶಿಸಿದ ಹಿನ್ನಲೆ ಎಲ್ಲ ಅರ್ಜಿಗಳನ್ನು ಆನ್‍ಲೈನ್ ಮುಖಾಂತರ ಸ್ವೀಕರಿಸಲಾಗುತ್ತಿದೆ. ಕಳೆದ 3 ವರ್ಷಗಳಲ್ಲಿ 1,11,493 ಅರ್ಜಿಗಳು ಆನ್‍ಲೈನ್‍ನಲ್ಲಿ ಸಲ್ಲಿಕೆಯಾಗಿವೆ ಎಂದು ಜಲಮಂಡಳಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

18,330 ಅರ್ಜಿಗಳು ತಿರಸ್ಕೃತ: ಸೇಲ್ ಅಗ್ರಿಮೆಂಟ್, ಕಟ್ಟಡ ನಕ್ಷೆ, ನಕ್ಷೆ ಅನುಮೋದನೆ, ಖಾತಾ ಸರ್ಟಿಫಿಕೇಟ್ಸ್, ರಸ್ತೆ ಅಗಿಯುವುದಕ್ಕೆ ಬಿಬಿಎಂಪಿಯಿಂದ ಅನುಮೋದನೆ, 1200 ಚ.ಅಡಿ ಕಟ್ಟಡ ಮಳೆ ನೀರುಕೊಯ್ಲ, ಅಪಾರ್ಟ್‍ಮೆಂಟ್‍ಗಳಲ್ಲಿ ಎಸ್‍ಟಿಪಿ ಅಳವಡಿಕೆ, ಈ ರೀತಿಯ ಮಾಹಿತಿ ಇಲ್ಲದ ಅರ್ಜಿಗಳು ತಿರಸ್ಕೃತಗೊಳ್ಳಲಿವೆ. ಈಗಾಗಲೇ 2017ರಿಂದ ಸಲ್ಲಿಕೆಯಾದ 1,11,493 ಅರ್ಜಿಗಳಲ್ಲಿ 93,163 ಅರ್ಜಿಗಳು ಅನುಮೋದನೆಗೊಂಡಿದ್ದು, ಉಳಿದ 18,330 ಅರ್ಜಿಗಳು ತಿರಸ್ಕೃತಗೊಂಡಿವೆ.

ಹಣ ಪಾವತಿಸಲು 90 ದಿನಗಳ ಗಡವು: ಅರ್ಜಿದಾರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅನುಮೋದನೆಗೊಂಡ ಅರ್ಜಿದಾರರಿಗೆ ಮಂಡಳಿಯಿಂದ ಹಣ ಪಾವತಿಗಾಗಿ ಕೆಲವು ದಿನಗಳ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಈಗಾಗಲೇ ಅನುಮೋದನೆಗೊಂಡ 93,163 ಅರ್ಜಿಗಳ ಪೈಕಿ 83,568 ಅರ್ಜಿದಾರರು ಹಣ ಪಾವತಿಸಿದ್ದಾರೆ. ಪ್ರತಿ ಅರ್ಜಿದಾರರಿಗೂ ಹಣ ಪಾವತಿಸಲು 90 ದಿನಗಳ ಕಾಲಾವಕಾಶವನ್ನು ಮಂಡಳಿ ನೀಡಿದೆ.

ಪ್ರಗತಿಯ ಹಂತದಲ್ಲಿ 6,361 ಆರ್.ಆರ್.ಸಂಖ್ಯೆಗಳು: ನಗರದ ಎಲ್ಲ ಕಡೆಗಳಲ್ಲಿ ಈಗಾಗಲೇ 77,207 ಕಟ್ಟಡಗಳಿಗೆ ನೀರು ಮತ್ತು ಒಳಚರಂಡಿ ಸಂಪರ್ಕವನ್ನು ನೀಡಿ ಆರ್.ಆರ್.ಸಂಖ್ಯೆಗಳನ್ನು ನೀಡಲಾಗಿದೆ. 6,361 ಆರ್.ಆರ್.ಸಂಖ್ಯೆಗಳು ಪ್ರಗತಿಯ ಹಂತದಲ್ಲಿದೆ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಕಾಲ ಕಾಲಮಿತಿಯಲ್ಲಿ ಸಂಪರ್ಕಕ್ಕೆ ಕ್ರಮ

ಉಪವಿಭಾಗಗಳಲ್ಲಿ ಪ್ರತ್ಯೇಕವಾಗಿ ಒಂದು ಗಣಕಯಂತ್ರ ಮತ್ತು ಇದಕ್ಕೆ ಸಂಬಂಧಿಸಿದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯುಂಟಾಗದಂತೆ ಸಕಾಲ ಕಾಲಮೀತಿಯಲ್ಲಿ ಸಂಪರ್ಕವನ್ನು ಮಂಜೂರು ಮಾಡಲು ಇಲಾಖೆ ಕ್ರಮವಹಿಸಲು ಮಂಡಳಿಯ ನಿಯಮಾನುಸಾರ ಶಿಸ್ತಿನ ಕ್ರಮ ಜರುಗಿಸಲಾಗಿದೆ.

ನೀರು ಮತ್ತು ಒಳಚರಂಡಿ ಸಂಪರ್ಕ ಸಕಾಲದ ಕಾಲಮಿತಿಯಲ್ಲೇ ನಡೆಯುವಂಥದ್ದು, ಇದು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಮಂಡಳಿಯ ಇಂಜಿನಿಯರ್‍ಗಳು ಸೂಕ್ತ ದಾಖಲಾತಿ, ಸ್ಥಳ ಪರಿಶೀಲನೆ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ.

-ಎಂ.ದೇವರಾಜು, ಜಲಮಂಡಳಿ ಮುಖ್ಯ ಇಂಜಿನಿಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News