ದೇಶದಲ್ಲಿ ಒಂದೇ ದಿನ 425 ಮಂದಿ ಕೋವಿಡ್-19 ಸೋಂಕಿತರ ಸಾವು

Update: 2020-07-07 03:36 GMT

ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 425 ಮಂದಿ ಕೋವಿಡ್-19 ಸೋಂಕಿತರು ಮೃತಪಟ್ಟಿದ್ದು, ಒಂದು ದಿನದ ಅವಧಿಯಲ್ಲಿ ಗರಿಷ್ಠ ಸಾವು ಸಂಭವಿಸಿದ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ. 602 ಸಾವು ಸಂಭವಿಸಿದ ಬ್ರೆಜಿಲ್‍ನಲ್ಲಿ ಮಾತ್ರ ಭಾರತಕ್ಕಿಂತ ಹೆಚ್ಚು ಕೋವಿಡ್-19 ಸೋಂಕಿತರ ಸಾವು ವರದಿಯಾಗಿದೆ. ಇಡೀ ವಿಶ್ವದಲ್ಲೇ ಗರಿಷ್ಠ ಅಂದರೆ 29 ಲಕ್ಷ ಸೋಂಕಿತರನ್ನು ಹೊಂದಿರುವ ಅಮೆರಿಕದಲ್ಲಿ ಸೋಮವಾರ 271 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಆದರೆ ಭಾರತದಲ್ಲಿ ಇದುವರೆಗೆ ಸಂಭವಿಸಿದ ಒಟ್ಟು ಸಾವು 19,693 ಆಗಿದ್ದು, ಬ್ರೆಜಿಲ್‍ನಲ್ಲಿ 64,867 ಮತ್ತು ಅಮೆರಿಕದಲ್ಲಿ 1,29,947 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಭಾರತದಲ್ಲಿ ಸೋಂಕಿತರ ಮರಣ ಪ್ರಮಾಣ 2.8 ಆಗಿದ್ದು, ಎರಡು ವಾರಗಳ ಹಿಂದೆ ಈ ಪ್ರಮಾಣ 3.2ರಷ್ಟಿತ್ತು. ಅಮೆರಿಕದಲ್ಲಿ ಮರಣ ಪ್ರಮಾಣ 4.5 ಶೇಕಡ ಇದ್ದು, ಬ್ರೆಜಿಲ್‍ನಲ್ಲಿ 4.1ರಷ್ಟಾಗಿದೆ. ಜಾಗತಿಕವಾಗಿ ಸೋಂಕಿತರ ಸಾವಿನ ಪ್ರಮಾಣ 4.7 ಶೇಕಡ ಇದೆ.

ಈ ಮಧ್ಯೆ ಸೋಮವಾರ ಸಂಜೆ ವೇಳೆಗೆ ಭಾರತದ ಒಟ್ಟು ಪ್ರಕರಣಗಳ ಸಂಖ್ಯೆ ಏಳು ಲಕ್ಷದ ಗಡಿ ದಾಟಿದ್ದು, ಅತಿ ಹೆಚ್ಚು ಸೋಂಕಿತರಿರುವ ದೇಶಗಳ ಪೈಕಿ ಮೂರನೇ ಸ್ಥಾನದಲ್ಲಿ ಭಾರತವಿದೆ. ಭಾರತದಲ್ಲಿ ಸೋಂಕಿತರ ಸಾವಿನ ಪ್ರಮಾಣ ಕಡಿಮೆ ಇದ್ದರೂ, ಕಳೆದ ಎರಡು ವಾರಗಳಲ್ಲಿ ಹೊಸ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವುದು ಆತಂಕ ಸೃಷ್ಟಿಸಿದೆ. ಸರ್ಕಾರ ಹಂತಹಂತವಾಗಿ ಲಾಕ್‍ಡೌನ್ ನಿರ್ಬಂಧಗಳನ್ನು ಸಡಿಲಿಸುತ್ತಿರುವ ಮಧ್ಯೆಯೇ ಈ ಬೆಳವಣಿಗೆ ವರದಿಯಾಗಿದೆ.

ಭಾರತದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಆರು ಲಕ್ಷದಿಂದ ಏಳು ಲಕ್ಷಕ್ಕೇರಲು ಕೇವಲ ನಾಲ್ಕು ದಿನ ತೆಗೆದುಕೊಂಡಿದೆ. ಜುಲೈ 3ರಿಂದೀಚೆಗೆ ಪ್ರತಿದಿನ 20 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಕಳೆದ ಎರಡು ದಿನಗಳಿಂದ 24 ಸಾವಿರಕ್ಕಿಂತ ಅಧಿಕ ಪ್ರಕರಣಗಳು ದೃಢಪಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News