ಪ್ರತ್ಯಕ್ಷದರ್ಶಿಗಳಾಗಿದ್ದರೂ ವ್ಯತಿರಿಕ್ತ ಹೇಳಿಕೆ ನೀಡಿ ವಿಕಾಸ್ ದುಬೆಯನ್ನು ರಕ್ಷಿಸಿದ್ದ 25 ಪೊಲೀಸರು!

Update: 2020-07-07 07:23 GMT

ಲಕ್ನೋ: 2001ರಲ್ಲಿ ಬಿಜೆಪಿ ಮುಖಂಡ ಸಂತೋಷ್ ಶುಕ್ಲಾ ಅವರನ್ನು ಕಾನ್ಪುರ ದೇಹತ್‍ ನ ಶಿವ್ಲಿ ಪೊಲೀಸ್ ಠಾಣೆಯಲ್ಲಿ ಹತ್ಯೆಗೈದ ನಾಲ್ಕು ತಿಂಗಳ ಬಳಿಕ ಕುಖ್ಯಾತ ರೌಡಿ ವಿಕಾಸ್ ದುಬೆ ನ್ಯಾಯಾಲಯದಲ್ಲಿ ಶರಣಾಗಿದ್ದ. ಈ ಸಂದರ್ಭ ಹಲವು ಮಂದಿ ರಾಜಕಾರಣಿಗಳು ಆತನ ಜತೆಗೆ ಆಗಮಿಸಿದ್ದರು ಎಂದು ಸಂತೋಷ್ ಅವರ ಸಹೋದರ ಮನೋಜ್ ಶುಕ್ಲಾ ನೆನಪಿಸಿಕೊಂಡಿದ್ದಾರೆ.

“ಆತನ ಶರಣಾಗತಿ ಸಂದರ್ಭದಲ್ಲಿ ರಾಜಕಾರಣಿಗಳು ಆತನ ಜತೆಗೆ ಬಂದಿದ್ದರು. ಪೊಲೀಸರು ಆತನನ್ನು ಬಂಧಿಸಬಾರದು ಎನ್ನುವ ಸಲುವಾಗಿ ಹೀಗೆ ಮಾಡಿದಂತಿತ್ತು” ಎಂದು ಮನೋಜ್ ಹೇಳಿದ್ದಾರೆ.

ಸಂತೋಷ್ ಶುಕ್ಲಾ  ಹತ್ಯೆಗೆ ಪ್ರತ್ಯಕ್ಷದರ್ಶಿಗಳಾಗಿದ್ದ 25 ಮಂದಿ ಪೊಲೀಸರು, ಒಬ್ಬರ ಹಿಂದೆ ಒಬ್ಬರಂತೆ ವ್ಯತಿರಿಕ್ತ ಹೇಳಿಕೆ ನೀಡಿದರು. ಎಲ್ಲಕ್ಕಿಂತ ಹೆಚ್ಚಾಗಿ ತನಿಖಾಧಿಕಾರಿಯೇ ನ್ಯಾಯಾಲಯದಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದರು. ಇದರಿಂದ ದುಬೆ ಆರೋಪಮುಕ್ತಗೊಂಡ ಎಂದು ಮನೋಜ್ ವಿವರಿಸಿದ್ದಾರೆ.

“ಆಗಲೇ ಕಠಿಣ ನಿಲುವು ತೆಗೆದುಕೊಂಡಿದ್ದರೆ, ಬಿಕ್ರು ಗ್ರಾಮದಲ್ಲಿ ನಡೆದ ಘಟನೆಯನ್ನು ತಡೆಯಬಹುದಿತ್ತು. ದುರದೃಷ್ಟವಶಾತ್ ಅದು ಆಗಲಿಲ್ಲ” ಎಂದವರು ಹೇಳುತ್ತಾರೆ.

ಈ ಪ್ರಕರಣವನ್ನು ಅಷ್ಟಕ್ಕೇ ಬಿಡದ ಮನೋಜ್ ಶುಕ್ಲಾ ಕಾನ್ಪುರ ದೇಹತ್ ಜಿಲ್ಲಾ ಮ್ಯಾಜಿಸ್ಟ್ರೇಟ್, ಅಂದಿನ ವಿಶೇಷ ವಿಚಾರಣಾ ಅಧಿಕಾರಿ (ಎಸ್‍ಪಿಓ) ಮತ್ತು ಪೊಲೀಸ್ ಅಧಿಕಾರಿಗಳನ್ನು ಹಲವು ಬಾರಿ ಭೇಟಿ ಮಾಡಿದ್ದರು. “ಯಾವುದೇ ಹಂತದಲ್ಲಿ ಯಾವ ನೆರವೂ ಸಿಗಲಿಲ್ಲ” ಎಂದು ಶುಕ್ಲಾ ಆಪಾದಿಸಿದರು.

“ಅಂದಿನ ವಾತಾವರಣ ಬೇರೆ; ಇಂದಿನ ಸ್ಥಿತಿ ಬೇರೆ. ಪೊಲೀಸರು ಆತನನ್ನು ಬಂಧಿಸುತ್ತಾರೆ ಎಂಬ ವಿಶ್ವಾಸವಿದೆ” ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News