ಜೈಲಿನಲ್ಲಿರುವ ಹೋರಾಟಗಾರ ಅಖಿಲ್ ಗೊಗೊಯಿಗೆ ಕೋವಿಡ್ 19 ಲಕ್ಷಣಗಳು

Update: 2020-07-07 07:28 GMT

ಹೊಸದಿಲ್ಲಿ : ಗುವಾಹಟಿ ಕೇಂದ್ರ ಕಾರಾಗೃಹದಲ್ಲಿರುವ ಅಸ್ಸಾಂನ ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿ ಸ್ಥಾಪಕ, ಆರ್‍ಟಿಐ ಹೋರಾಟಗಾರ ಹಾಗೂ ರೈತ ನಾಯಕ  ಅಖಿಲ್ ಗೊಗೊಯಿ ಅವರಲ್ಲಿ ಕೋವಿಡ್-19 ಲಕ್ಷಣಗಳು ಕಾಣಿಸಿಕೊಂಡಿರುವ ಕುರಿತಂತೆ ಅವರ ಪತ್ನಿ ಗೀತಾಶ್ರೀ ತಮೂಲಿ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಅಸ್ಸಾಂನಲ್ಲಿ ಕಳೆದ ವರ್ಷ ನಡೆದ ಸಿಎಎ ವಿರೋಧಿ ಪ್ರತಿಭಟನೆಗಳ ನಂತರ ಡಿಸೆಂಬರ್ 2019ರಲ್ಲಿ ಗೊಗೊಯಿ ಅವರನ್ನು ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯನ್ವಯ ರಾಷ್ಟ್ರೀಯ ತನಿಖಾ ಏಜನ್ಸಿ ಬಂಧಿಸಿತ್ತು.

ಅವರ ಪತ್ನಿ ತಮೂಲಿ ಅವರು ಗುವಾಹಟಿಯ ಬಿ ಬೊರೂವ ಕಾಲೇಜಿನಲ್ಲಿ ಅಸ್ಸಾಮಿ ಭಾಷೆಯ ಶಿಕ್ಷಕಿಯಾಗಿದ್ದಾರೆ. ``ಕೆಲವು ತಿಂಗಳುಗಳೇ ಕಳೆದಿವೆ. ಮನೆಯಲ್ಲಿ ಟಿವಿ ಕೂಡ ಇಲ್ಲ. ಅಖಿಲ್ ಅವರು ಅಸೌಖ್ಯದಿಂದಿದ್ದಾರೆ, ಕೋವಿಡ್ ಲಕ್ಷಣಗಳಿವೆ, ಏನು ಹೇಳುವುದು ಎಂದು ತೋಚುತ್ತಿಲ್ಲ, ಹಲವರು ಕರೆ ಮಾಡಿ ಸೋದರ ಚೆನ್ನಾಗಿದ್ದಾರಾ ಎಂದು ಕೇಳುತ್ತಾರೆ. ಆದರೆ ನನಗೇನು ಗೊತ್ತು, ಈ ಬಾರಿ ಯಾವುದೇ ಸುದ್ದಿಯಿಲ್ಲ, ಫೋನ್ ಕರೆ ಕೂಡ ಇಲ್ಲ” ಎಂದು ಅವರು ಬರೆದಿದ್ದಾರೆ.

ಗೊಗೊಯಿ ಅವರ ಆರೋಗ್ಯ ಹದಗೆಟ್ಟಿದೆ ಹಾಗೂ ಅವರಿಗೆ ಕೋವಿಡ್ 19 ಲಕ್ಷಣಗಳಿವೆ ಎಂದು ಕೆಲ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ ನಂತರ ತಮೂಲಿ ಅವರ ಫೇಸ್ ಬುಕ್ ಪೋಸ್ಟ್ ಬಂದಿದೆ.

``ಅವರನ್ನು ಕಳೆದೆರಡು ತಿಂಗಳುಗಳಿಂದ ಭೇಟಿಯಾಗಲು ಸಾಧ್ಯವಾಗಿಲ್ಲ. ಅವರಿಗೆ ಜ್ವರ, ಮೈಕೈ ನೋವಿದೆ ಹಾಗೂ ಅವರು ಚೇತರಿಸಿಕೊಳ್ಳುತ್ತಿಲ್ಲ ಎಂದು ಜೈಲಿನೊಳಗಿನಿಂದ ಯಾರೋ ಹೇಳಿದರು,'' ಎಂದು  ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿಯ ವಿದ್ಯಾರ್ಥಿ ಘಟಕದ ಪದಾಧಿಕಾರಿ ಪ್ರಾಂಜಲ್ ಕಲಿಟ ಹೇಳಿದ್ದಾರೆ.

ಆದರೆ ಗೊಗೊಯಿ ಅವರಿಗೆ ಕೋವಿಡ್ 19 ಸೋಂಕು ತಗಲಿಲ್ಲ ಎಂದು ತಮ್ಮ ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News