ರಾಜ್ಯದ ಆಸ್ಪತ್ರೆಗಳಲ್ಲಿ ಜ್ವರ, ಕೆಮ್ಮು ಇರುವವರಿಗೆ ಚಿಕಿತ್ಸೆ ನೀಡಲು ಕೋರಿ ಹೈಕೋರ್ಟ್ ಗೆ ಪಿಐಎಲ್

Update: 2020-07-07 13:32 GMT

ಬೆಂಗಳೂರು, ಜು.7: ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿತರು ಹಾಗೂ ಜ್ವರ, ಕೆಮ್ಮು, ನೆಗಡಿ ಇರುವವರೆಲ್ಲರಿಗೂ ಚಿಕಿತ್ಸೆ ನೀಡಲು ಕೋರಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಈ ಕುರಿತು ಆಲ್ ಇಂಡಿಯಾ ಪ್ರೋಗ್ರೇಸಿವ್ ಅಡ್ವಕೇಟ್ ಫೌಂಡೇಷನ್ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದೆ. ಇನ್ನಷ್ಟೇ ಅರ್ಜಿ ವಿಚಾರಣೆಗೆ ಬರಲಿದೆ.

ಜ್ವರ, ಕೆಮ್ಮು, ನಿಶಕ್ತಿ, ಸುಸ್ತು ಇದೆ ಎಂದು ಆಸ್ಪತ್ರೆಗೆ ಹೋದರೆ ಆಸ್ಪತ್ರೆಯವರು ಕೊರೋನ ಪರೀಕ್ಷಾ ವರದಿ ತೆಗೆದುಕೊಂಡು ಬರಬೇಕೆಂದು ಹೇಳುತ್ತಾರೆ. ಇದರಿಂದಾಗಿ, ವಿಪರೀತ ಜ್ವರ ಹಾಗೂ ನಿಶಕ್ತಿಯಿಂದ ಬಳಲುತ್ತಿದ್ದ ಹಲವು ರೋಗಿಗಳು ಸಾವನ್ನಪ್ಪಿದ್ದಾರೆ. ಹೀಗಾಗಿ, ಎಲ್ಲ ಆಸ್ಪತ್ರೆಗಳಲ್ಲಿ ಜ್ವರ, ಕೆಮ್ಮು ಸೇರಿ ಕೊರೋನ ಲಕ್ಷಣ ಇರುವವರೆಲ್ಲರಿಗೂ ಚಿಕಿತ್ಸೆ ನೀಡಲು ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೊಂದು ಬಾರಿ ರೋಗಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರೆ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು. ಕೊರೋನ ಸೆಂಟರ್ ಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲವಾಗಿದ್ದು, ಅದರ ಮೇಲ್ವಿಚಾರಣೆಗೆ ಸಮಿತಿ ರಚಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ಆ ಕಮಿಟಿ ಗೈಡ್ ಮಾಡಬೇಕು. ಕ್ವಾರಂಟೈನ್‍ನಲ್ಲಿ ಇರುವವರಿಗೆ ಅಗತ್ಯ ವ್ಯವಸ್ಥೆಯನ್ನು ಮಾಡಲು ನಿರ್ದೇಶಿಸಬೇಕು. ಖಾಸಗಿ ಆಸ್ಪತ್ರೆಯಲ್ಲಿ ಕೊರೋನ ಚಿಕಿತ್ಸೆ ಶುಲ್ಕದ ನೋಟಿಫಿಕೇಶನ್ ರದ್ದು ಮಾಡಬೇಕು. ಅಲ್ಲದೆ, ಕಡಿಮೆ ಶುಲ್ಕ ಭರಿಸುವ ನೀತಿಯನ್ನು ಜಾರಿಗೆ ತರಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಕೇಂದ್ರ ಸರಕಾರದ ಗೈಡ್‍ಲೈನ್ಸ್ ಅನುಸಾರ ಕೊರೋನದಿಂದ ಮೃತಪಟ್ಟ ಮೃತದೇಹಗಳನ್ನು ಗೌರವಯುತವಾಗಿ ವ್ಯಕ್ತಿಯ ಧರ್ಮದ ಆಧಾರದಂತೆ ಅಂತ್ಯಕ್ರಿಯೆ ನಡೆಸಲು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇನ್ನಿತರರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಜು.9ರಂದು ಅರ್ಜಿ ವಿಚಾರಣೆಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News