​ದಲಾಯಿ ಲಾಮಾಗೆ ಆಶ್ರಯ: ಅಮೆರಿಕದಿಂದ ಭಾರತಕ್ಕೆ ಕೃತಜ್ಞತೆ

Update: 2020-07-07 14:54 GMT

ದಲಾಯಿ ಲಾಮಾಗೆ ಆಶ್ರಯ: ಅಮೆರಿಕದಿಂದ ಭಾರತಕ್ಕೆ ಕೃತಜ್ಞತೆ
ವಾಶಿಂಗ್ಟನ್, ಜು. 7: ಟಿಬೆಟ್ ನ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾರಿಗೆ 1959ರಿಂದ ಆಶ್ರಯ ಕೊಟ್ಟಿರುವುದಕ್ಕಾಗಿ ಅಮೆರಿಕವು ಭಾರತಕ್ಕೆ ಕೃತಜ್ಞತೆ ಸಲ್ಲಿಸಿದೆ. ದಲಾಯಿ ಲಾಮಾರ 85ನೇ ಜನ್ಮದಿನವನ್ನು ಜಗತ್ತು ಮಂಗಳವಾರ ಆಚರಿಸುತ್ತಿರುವಾಗ ಅಮೆರಿಕ ಈ ಹೇಳಿಕೆ ನೀಡಿದೆ.
1959ರಲ್ಲಿ ಚೀನಾವು ಟಿಬೆಟ್ ಮೇಲೆ ಆಕ್ರಮಣ ನಡೆಸಿದಾಗ ದಲಾಯಿ ಲಾಮಾ ಟಿಬೆಟ್ನಿಂದ ಪಲಾಯನಗೈದು ಭಾರತಕ್ಕೆ ಬಂದರು. ಭಾರತ ಅಂದು ಅವರಿಗೆ ಆಶ್ರಯ ನೀಡಿತು. ಅಂದಿನಿಂದ ಇಂದಿನವರೆಗೂ ಅವರು ಭಾರತದಲ್ಲಿ ವಾಸಿಸುತ್ತಿದ್ದಾರೆ.
ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಟಿಬೆಟ್ ನ ದೇಶಭ್ರಷ್ಟ ಸರಕಾರ ನಡೆಯುತ್ತಿದೆ. 1,60,000ಕ್ಕೂ ಅಧಿಕ ಟಿಬೆಟನ್ನರು ಭಾರತದಲ್ಲಿ ಬದುಕುತ್ತಿದ್ದಾರೆ.
‘‘ದಲಾಯಿ ಲಾಮಾರಿಗೆ 85ನೇ ಹುಟ್ಟುಹಬ್ಬದ ಶುಭಾಶಯಗಳು. ಅವರು ಶಾಂತಿ ಮತ್ತು ದಯೆಯ ಮೂಲಕ ಜಗತ್ತಿನ ಪ್ರೇರಕ ಶಕ್ತಿಯಾಗಿದ್ದಾರೆ ಹಾಗೂ ಟಿಬೆಟಿಯನ್ನರು ಮತ್ತು ಅವರ ಪರಂಪರೆಗಾಗಿನ ಹೋರಾಟದ ಸಂಕೇತವಾಗಿದ್ದಾರೆ. 1959ರಿಂದ ಅವರಿಗೆ ಮತ್ತು ಟಿಬೆಟನ್ನರಿಗೆ ಆಶ್ರಯ ನೀಡಿರುವುದಕ್ಕಾಗಿ ನಾವು ಭಾರತಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಹಾಗೂ ಪೂಜ್ಯ ಆಧ್ಯಾತ್ಮ ನಾಯಕನಿಗೆ ಸಂತೋಷವನ್ನು ಬಯಸುತ್ತೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ದಕ್ಷಿಣ ಮತ್ತು ಮಧ್ಯ ಏಶ್ಯ ವ್ಯವಹಾರಗಳ ಬ್ಯೂರೋ ಸೋಮವಾರ ಟ್ವೀಟ್ ಮಾಡಿದೆ.
ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕೂಡ ಟಿಬೆಟ್ನ ಆಧ್ಯಾತ್ಮಿಕ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News