ಹೆಚ್ಚುತ್ತಿರುವ ಕೊರೋನ: ಬೆಂಗಳೂರು ನಗರದಲ್ಲೀಗ ಸಾವಿರಕ್ಕೂ ಅಧಿಕ ಕಂಟೈನ್ಮೆಂಟ್ ವಲಯಗಳು

Update: 2020-07-07 15:15 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.7: ರಾಜಧಾನಿಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆಯೇ ಕಂಟೈನ್ಮೆಂಟ್ ವಲಯಗಳ ಸಂಖ್ಯೆಯೂ ಅಧಿಕಗೊಂಡಿದ್ದು, ಸಾವಿರದ ಗಡಿ ದಾಟಿದೆ.

ಪ್ರಸ್ತುತ ನಗರದಲ್ಲಿ ಗುರುತಿಸಿರುವ ಕಂಟೈನ್ಮೆಂಟ್ ವಲಯ ಎಂದು ಗುರುತಿಸಿರುವ ಕಡೆಗಳಲ್ಲಿ 50 ಮೀಟರ್ ಸುತ್ತ ನಿರ್ಬಂಧ ವಿಧಿಸಲಾಗಿದೆ. ಸೋಂಕು ತಗಲಿರುವ ವ್ಯಕ್ತಿಗಳ ಮನೆಯ ಸುತ್ತಮುತ್ತ ವಾಣಿಜ್ಯ ಸೇರಿದಂತೆ ಯಾವುದೇ ಚಟುವಟಿಕೆ ನಡೆಸಲು ಅವಕಾಶ ಇಲ್ಲ.

ಕಳೆದ 24 ಗಂಟೆಗಳಲ್ಲಿ ಬೆಂಗಳೂರು ಪೂರ್ವ ವಲಯ 442, ಪಶ್ಚಿಮ ವಲಯ 791, ದಕ್ಷಿಣ ವಲಯ 118, ದಾಸರಹಳ್ಳಿ ವಲಯ 08, ಬೊಮ್ಮನಹಳ್ಳಿ 64, ಯಲಹಂಕ 28, ರಾಜರಾಜೇಶ್ವರಿ ನಗರ 47, ಮಹದೇವಪುರ 124 ಸ್ಥಳಗಳನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಲಾಗಿದೆ.

ಪಾಲಿಕೆಯ 4ನೇ ಒಂದರಷ್ಟು ವಾರ್ಡ್ ಗಳಲ್ಲಿ 50ಕ್ಕೂ ಅಧಿಕ ಸೋಂಕಿತರಿದ್ದಾರೆ. ಈ ಮಧ್ಯೆ ಗುಣಮುಖರ ಸಂಖ್ಯೆ ಶೇ.13ರಷ್ಟು ಮಾತ್ರ ಇದೆ ಎಂದು ಬಿಬಿಎಂಪಿ ಹೇಳಿದ್ದು, ಇನ್ನು ನಗರದಲ್ಲಿ ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದು, ಈ 3 ವಲಯಗಳಲ್ಲಿ ಶೇ.60 ಸೋಂಕಿತರಿದ್ದಾರೆ.

ಸೋಂಕಿತರ ಓಡಾಟ!: ನಗರದಲ್ಲಿ ಸೋಂಕಿತರನ್ನು ಕರೆದೊಯ್ಯಲು ಸಕಾಲದಲ್ಲಿ ಆಂಬುಲೆನ್ಸ್ ದೊರೆಯದ ಕಾರಣ ಹಾಗೂ ಬೆಡ್ ಕೊರತೆಯಿಂದ ಖುದ್ದಾಗಿ ಚಿಕಿತ್ಸೆಗೆ ತೆರಳುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳ ಮೂಲಕ ಹಾದುಹೋಗುವುದರಿಂದ ಸೋಂಕಿನ ಭೀತಿ ಕಾಡುತ್ತಿದೆ.

ಇನ್ನು ಕನ್ನಡ ಸಂಸ್ಕೃತಿ ಇಲಾಖೆ ಜಾನಪದ ಅಕಾಡೆಮಿಯ ಇಬ್ಬರು ಸಿಬ್ಬಂದಿಗೆ ಸೋಂಕು ತಗುಲಿದ್ದು, ಇವರ ಸಂಪರ್ಕದಲ್ಲಿದ್ದವರನ್ನು ಜಿಕೆವಿಕೆ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈ ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾದ ಸಮಯಕ್ಕೆ ಊಟ, ತಿಂಡಿ ನೀಡುತ್ತಿಲ್ಲ, ಶುಚಿತ್ವ ಇಲ್ಲ, ಸೋಂಕಿತರ ಪರೀಕ್ಷೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News